
ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್:
ಜ್ಯೋತಿಷ್ಯ ಹಾಗೂ ಚೌಡೇಶ್ವರಿ ಪೂಜೆ ಹೆಸರಿನಲ್ಲಿ ವೃದ್ಧೆಯೊಬ್ಬರಿಂದ ಸುಮಾರು ₹40 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ ಆರೋಪದ ಮೇಲೆ ನಕಲಿ ಜ್ಯೋತಿಷಿಯೊಬ್ಬನ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ ಬಳಿಕ ತನ್ನ ಮೇಲೆ ಅಪಘಾತವಾಗಿದೆ ಎಂದು ನಂಬಿಸಲು ಎಐ ತಂತ್ರಜ್ಞಾನ ಬಳಸಿ ನಕಲಿ ವೀಡಿಯೊ ಸೃಷ್ಟಿಸಿ ಕಳುಹಿಸಿದ್ದಾನೆ ಎನ್ನಲಾಗಿದೆ.ಬ್ಯಾಟರಾಯನಪುರ ನಿವಾಸಿ 62 ವರ್ಷದ ಶಾಂತಮ್ಮ ವಂಚನೆಗೊಳಗಾದವರು. ವೆಂಕಟೇಶ್ ಎಂಬಾತ ವಂಚನೆ ಎಸಗಿರುವುದಾಗಿ ದೂರು ನೀಡಲಾಗಿದೆ.
ಮೂಲತಃ ವಿಕ್ಟೋರಿಯಾ ಆಸ್ಪತ್ರೆ ಸಮೀಪ ಫುಟ್ಪಾತ್ನಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ವೆಂಕಟೇಶ್, ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬರುತ್ತಿದ್ದ ಶಾಂತಮ್ಮ ಅವರ ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ.ನಂತರ ಶಾಂತಮ್ಮ ಅವರ ಕೌಟುಂಬಿಕ ಹಾಗೂ ಆರೋಗ್ಯ ಸಮಸ್ಯೆಗಳನ್ನು ತಿಳಿದುಕೊಂಡಿದ್ದ ಆತ, ಮನೆಗೆ ಬಂದು ಚೌಡೇಶ್ವರಿ ಪೂಜೆ ಮಾಡುವುದಾಗಿ ಹೇಳಿದ್ದಾನೆ.
ಪೂಜೆಯ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಆತನ ಮಾತಿನ ಮೇಲೆ ಶಾಂತಮ್ಮ ನಂಬಿಕೆ ಇಟ್ಟಿದ್ದರು ಎನ್ನಲಾಗಿದೆ. ಬಳಿಕ ಮಗನ ಕುಡಿತ ಹಾಗೂ ಮಗಳ ವಿವಾಹದ ಸಮಸ್ಯೆಗಳಿಗೂ ಪರಿಹಾರ ನೀಡುವುದಾಗಿ ಆತ ಭರವಸೆ ನೀಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರತಿ ಅಮಾವಾಸ್ಯೆ, ಹುಣ್ಣಿಮೆಗೆ ಒಡವೆ ಪಡೆದು ವಂಚನೆಮನೆಯಲ್ಲಿರುವ ಚಿನ್ನಾಭರಣಗಳಿಗೆ ಪೂಜೆ ಮಾಡಿದರೆ ದೋಷ ನಿವಾರಣೆಯಾಗುತ್ತದೆ ಎಂದು ನಂಬಿಸಿದ್ದ ವೆಂಕಟೇಶ್, ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯಂದು ಮನೆಗೆ ಬಂದು ಒಡವೆಗಳನ್ನು ಪಡೆದುಕೊಳ್ಳುತ್ತಿದ್ದ ಎನ್ನಲಾಗಿದೆ. ಕಳೆದ ಒಂದು ವರ್ಷದಲ್ಲಿ ಹಂತ ಹಂತವಾಗಿ ಸುಮಾರು ₹40 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪಡೆದುಕೊಂಡು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ವರಮಹಾಲಕ್ಷ್ಮಿ ಹಬ್ಬದಂದು ಬಯಲಾದ ವಂಚನೆಆಗಸ್ಟ್ 19ರಂದು ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಶಾಂತಮ್ಮ ಅವರು ಚಿನ್ನಾಭರಣಗಳನ್ನು ವಾಪಸ್ ನೀಡುವಂತೆ ವೆಂಕಟೇಶ್ಗೆ ಕೇಳಿದ್ದರು. ಇದರಿಂದ ಆತಂಕಗೊಂಡ ಆತ, ತನಗೆ ಭೀಕರ ಅಪಘಾತವಾಗಿದೆ ಎಂದು ನಂಬಿಸಲು ಮತ್ತೊಬ್ಬರ ಮೂಲಕ ಕರೆ ಮಾಡಿಸಿದ್ದಾನೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ, ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿರುವಂತೆ ಕಾಣುವ ಎಐ ಮೂಲಕ ಸೃಷ್ಟಿಸಿದ ನಕಲಿ ವೀಡಿಯೊವೊಂದನ್ನು ಶಾಂತಮ್ಮ ಅವರಿಗೆ ಕಳುಹಿಸಿ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವೀಡಿಯೊದ ಬಗ್ಗೆ ಅನುಮಾನಗೊಂಡ ಶಾಂತಮ್ಮ ಅವರು ಅದನ್ನು ತಮ್ಮ ಮಕ್ಕಳಿಗೆ ತೋರಿಸಿದಾಗ, ವೀಡಿಯೊ ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಿರುವ ನಕಲಿ ವೀಡಿಯೊ ಎಂಬುದು ಗೊತ್ತಾಗಿದೆ. ಬಳಿಕ ಅವರು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದು, ತಲೆಮರೆಸಿಕೊಂಡಿರುವ ವೆಂಕಟೇಶ್ಗಾಗಿ ಹುಡುಕಾಟ ಮುಂದುವರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R