ಕರ್ನಾಟಕ ಪ್ರವಾಸೋದ್ಯಮದಲ್ಲಿ ಹೂಡಿಕೆಗೆ ಯುಎಇ ಕನ್ನಡಿಗ ಉದ್ಯಮಿಗಳಿಗೆ ಕೆ.ಜೆ. ಜಾರ್ಜ್ ಆಹ್ವಾನ
ಯುಎಇ ಕನ್ನಡಿಗ ಉದ್ಯಮಿಗಳಿಗೆ ಕೆ.ಜೆ. ಜಾರ್ಜ್ ಆಹ್ವಾನ
KJ-George-invites-UAE-Kannada-entrepreneurs-to-invest-in-Karnataka-tourism


ದುಬೈ, 15 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಕರ್ನಾಟಕದ ಪ್ರವಾಸೋದ್ಯಮ, ಮೂಲಸೌಕರ್ಯ ಹಾಗೂ ಆರ್ಥಿಕ ಬೆಳವಣಿಗೆಯಲ್ಲಿ ಸಕ್ರಿಯ ಪಾಲುದಾರರಾಗುವಂತೆ ಯುಎಇಯಲ್ಲಿರುವ ಕನ್ನಡಿಗ ಉದ್ಯಮಿಗಳು ಮತ್ತು ಹೂಡಿಕೆದಾರರಿಗೆ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಆಹ್ವಾನ ನೀಡಿದರು.

ದುಬೈನಲ್ಲಿ ನಡೆದ ‘ಇನ್ವೆಸ್ಟ್ ಇನ್ ಕರ್ನಾಟಕ–ಎನ್ಆರ್ಐ ಬಿಸಿನೆಸ್ ಕಮ್ಯುನಿಟಿ ಮೀಟ್, ದುಬೈ 2026’ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಪ್ರತಿನಿಧಿಸಿದ್ದ 65 ಪ್ರಮುಖ ಕನ್ನಡಿಗ ಉದ್ಯಮಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಜಾಗತಿಕ ಹೂಡಿಕೆದಾರರಿಗೆ ಸಾಕಷ್ಟು ಅವಕಾಶಗಳಿದ್ದು, ಗಂಭೀರ ಹೂಡಿಕೆ ಪ್ರಸ್ತಾವನೆಗಳಿಗೆ ಸರ್ಕಾರ ಅಗತ್ಯ ಸಹಕಾರ ಮತ್ತು ನೆರವು ನೀಡಲಿದೆ ಎಂದು ಜಾರ್ಜ್ ಭರವಸೆ ನೀಡಿದರು.

ಹೂಡಿಕೆದಾರರಿಗೆ ಸರ್ಕಾರದ ನೆರವು:‘ವಿಶ್ವದ ವಿವಿಧ ಭಾಗಗಳಲ್ಲಿ ಕನ್ನಡಿಗರು ಯಶಸ್ವಿ ಉದ್ಯಮಗಳು ಮತ್ತು ಬಲಿಷ್ಠ ಜಾಗತಿಕ ವ್ಯವಹಾರಗಳನ್ನು ನಿರ್ಮಿಸಿದ್ದಾರೆ. ಆ ಉದ್ಯಮಶೀಲ ಶಕ್ತಿ ಕರ್ನಾಟಕದೊಂದಿಗೆ ಇನ್ನಷ್ಟು ನಿಕಟವಾಗಿ ಸಂಪರ್ಕಿಸಬೇಕು. ಹೂಡಿಕೆದಾರರಿಗೆ ಸರ್ಕಾರ ಅಗತ್ಯ ಸಹಕಾರ ನೀಡುವುದರ ಜತೆಗೆ ಉತ್ತಮ ಪ್ರಸ್ತಾವನೆಗಳನ್ನು ಯೋಜನೆಗಳಾಗಿ ರೂಪಿಸಲು ನೆರವಾಗಲಿದೆ’ ಎಂದು ಕೆ.ಜೆ. ಜಾರ್ಜ್ ಹೇಳಿದರು.

ಕರ್ನಾಟಕ ಎನ್ಆರ್ಐ ಫೋರಂ ಯುಎಇ ಆಯೋಜಿಸಿದ್ದ ಸಂವಾದದಲ್ಲಿ ಉದ್ಯಮಿಗಳು, ಹೂಡಿಕೆದಾರರು ಹಾಗೂ ರಾಜ್ಯ ಸರ್ಕಾರದ ಹಿರಿಯ ಪ್ರತಿನಿಧಿಗಳು ಭಾಗವಹಿಸಿದ್ದರು. ಪ್ರವಾಸೋದ್ಯಮ, ವ್ಯಾಪಾರ, ಮೂಲಸೌಕರ್ಯ, ಸಂಪರ್ಕ ವ್ಯವಸ್ಥೆ ಮತ್ತು ವ್ಯವಹಾರಿಕ ಸಹಭಾಗಿತ್ವದ ಅವಕಾಶಗಳ ಕುರಿತು ಚರ್ಚೆ ನಡೆಯಿತು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಅವರು ರಾಜ್ಯದ ಪ್ರವಾಸೋದ್ಯಮ ಸಾಮರ್ಥ್ಯ ಹಾಗೂ ಹೂಡಿಕೆ ಅವಕಾಶಗಳ ಕುರಿತು ಮಾಹಿತಿ ನೀಡಿದರು. ಲೆಷರ್, ಬಿಸಿನೆಸ್ ಟೂರಿಸಂ, ವೈದ್ಯಕೀಯ, ವೆಲ್ನೆಸ್, ಆಧ್ಯಾತ್ಮಿಕ, ಕರಾವಳಿ ಹಾಗೂ ಅನುಭವಾಧಾರಿತ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಖಾಸಗಿ ಹೂಡಿಕೆ ಮತ್ತು ಸಾರ್ವಜನಿಕ–ಖಾಸಗಿ ಸಹಭಾಗಿತ್ವಕ್ಕೆ ಇರುವ ಅವಕಾಶಗಳನ್ನು ವಿವರಿಸಿದರು.

‘ಕರ್ನಾಟಕದ ದೊಡ್ಡ ಶಕ್ತಿ ಅದರ ವೈವಿಧ್ಯತೆ. ಕರಾವಳಿ ಮತ್ತು ವೆಲ್ನೆಸ್ ಪ್ರವಾಸೋದ್ಯಮದಿಂದ ವೈದ್ಯಕೀಯ, ಆಧ್ಯಾತ್ಮಿಕ ಹಾಗೂ ಬಿಸಿನೆಸ್ ಟೂರಿಸಂವರೆಗೆ ವಾಣಿಜ್ಯಾತ್ಮಕವಾಗಿ ಯಶಸ್ವಿಯಾಗಬಲ್ಲ ಹಲವು ಅವಕಾಶಗಳಿವೆ. ಹೂಡಿಕೆದಾರರಿಗೆ ಸ್ಪಷ್ಟ ಮತ್ತು ಅನುಷ್ಠಾನಯೋಗ್ಯ ಪ್ರವಾಸೋದ್ಯಮ ಯೋಜನೆಗಳ ಸರಣಿಯನ್ನು ರೂಪಿಸುವುದು ನಮ್ಮ ಆದ್ಯತೆ’ ಎಂದು ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

ಗುಣಮಟ್ಟದ ವಸತಿ ಸೌಲಭ್ಯ, ಪ್ರವಾಸಿ ತಾಣಗಳ ಮೂಲಸೌಕರ್ಯ, ಪ್ರವಾಸಿಗರ ಅನುಭವ ಹಾಗೂ ಹೊಸ ಪ್ರವಾಸೋದ್ಯಮ ಉತ್ಪನ್ನಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದೆ. ಖಾಸಗಿ ವಲಯಕ್ಕೆ ಹೂಡಿಕೆ ಯೋಗ್ಯ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.

ರಾಜ್ಯ ನಿಯೋಗದಲ್ಲಿ ಕೆಎಸ್ಟಿಡಿಸಿ ಅಧ್ಯಕ್ಷ ಶ್ರೀನಿವಾಸ್ ಎಂ., ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಹಾಗೂ ಕೆಎಸ್ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಸಾದ್ ಪಿ.ಆರ್. ಇದ್ದರು.ಯುಎಇ ಉದ್ಯಮಿಗಳಾದ ಡಾ. ರೊನಾಲ್ಡ್ ಕೊಲಾಸೊ, ಡಾ. ಮೊಯ್ದೀನ್ ತುಂಬೆ ಹಾಗೂ ಕರ್ನಾಟಕ ಎನ್ಆರ್ಐ ಫೋರಂ ಯುಎಇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಭಾಗವಹಿಸಿದ್ದರು.

ವಿಮಾನ, ರಸ್ತೆ ಮತ್ತು ಕರಾವಳಿ ಸಂಪರ್ಕ ಸುಧಾರಣೆ, ಹೂಡಿಕೆ ಸೌಲಭ್ಯ ಹಾಗೂ ಕರ್ನಾಟಕವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಪರಿಚಯಿಸುವ ಕುರಿತು ಚರ್ಚಿಸಲಾಯಿತು.‘ಪ್ರವಾಸಿ ಕನ್ನಡಿಗರ ಸಂಪರ್ಕ ಕೇವಲ ನೆಟ್ವರ್ಕಿಂಗ್ಗೆ ಸೀಮಿತವಾಗಬಾರದು.

ಹೂಡಿಕೆದಾರರು ಮತ್ತು ಸರ್ಕಾರದ ನಡುವೆ ಸ್ಪಷ್ಟವಾದ ಸಾಂಸ್ಥಿಕ ಸಂಪರ್ಕ, ಗುರುತಿಸಲಾದ ಅವಕಾಶಗಳು ಹಾಗೂ ನಿರಂತರ ಅನುಸರಣೆ ಅಗತ್ಯ. ಈ ಸಭೆ ಅದಕ್ಕೆ ಮಹತ್ವದ ವೇದಿಕೆ ಒದಗಿಸಿದೆ’ ಎಂದು ಪ್ರವೀಣ್ ಶೆಟ್ಟಿ ಹೇಳಿದರು.

ಕರ್ನಾಟಕವನ್ನು ಜಾಗತಿಕ ಹೂಡಿಕೆ ಮತ್ತು ಪ್ರವಾಸೋದ್ಯಮ ತಾಣವಾಗಿ ಇನ್ನಷ್ಟು ಅಭಿವೃದ್ಧಿಪಡಿಸಲು ಉತ್ತಮ ಸಂಪರ್ಕ, ಬಲಿಷ್ಠ ಮೂಲಸೌಕರ್ಯ ಮತ್ತು ಸಮಯಬದ್ಧ ಅನುಷ್ಠಾನ ಅಗತ್ಯ ಎಂದು ಡಾ. ರೊನಾಲ್ಡ್ ಕೊಲಾಸೊ ಅಭಿಪ್ರಾಯಪಟ್ಟರು.

ಉದ್ಯಮಿಗಳಿಗೆ ವಿಶ್ವಾಸ, ಸ್ಪಷ್ಟತೆ ಮತ್ತು ಸಮಯೋಚಿತ ಸರ್ಕಾರಿ ಸಹಕಾರ ಮುಖ್ಯ ಎಂದು ಡಾ. ಮೊಯ್ದೀನ್ ತುಂಬೆ ಹೇಳಿದರು.

ಸಂವಾದದ ವೇಳೆ ಕರ್ನಾಟಕದ ನಿರ್ದಿಷ್ಟ ಪ್ರವಾಸೋದ್ಯಮ ಹಾಗೂ ಹೂಡಿಕೆ ಅವಕಾಶಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಉದ್ಯಮಿಗಳು ಆಸಕ್ತಿ ವ್ಯಕ್ತಪಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande