
ಕೋಲಾರ, 25 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್: ನೀಟ್ ಹಗರಣದ ಬಗ್ಗೆ ದೆಹಲಿಯಲ್ಲಿ ಕಾಕ್ರೋಚ್ ಪಾರ್ಟಿಯಿಂದ ನಡೆದ ಪ್ರತಿಭಟನೆಯಲ್ಲಿ ಕೊಲೆಗಾರರು ರೌಡಿ ಶೀರ್ಸ್ ಭಾಗಿಯಾಗಿದ್ದರು. ಬೆಳಿಗ್ಗೆಯಿಂದ ಸಂಜೆಯತನಕ ಪ್ರತಿಭಟನೆ ನಡೆಸಿ ರಾತ್ರಿ ಪಾರ್ಟಿ ಮಾಡುತ್ತಿದ್ದು, ಮರು ದಿನ ವಿದೇಶಕ್ಕೆ ಹಾರಿ ಹೋದರು. 'ನೀಟ್' ಪರೀಕ್ಷೆಯ ಅಕ್ರಮದ ವಿರುದ್ಧದ ಪ್ರತಿಭಟನೆಗಳಲ್ಲಿ ನೈಜ ವಿದ್ಯಾರ್ಥಿಗಳು ಮತ್ತು ಬಡವರ ದನಿಯನ್ನು ಅಡಗಿಸಿ, ಕಿಡಿಗೇಡಿಗಳು ಪ್ರತಿಭಟನೆಯನ್ನು ಸಮಾಜ ಘಾತುಕ ವ್ಯಕ್ತಿಗಳು ಮುಂದುವರೆಸಿದರು. ಇಂತಹವರಿAದ ಸಂವಿಧಾನ ಉಳಿಸಲು ಸಾಧ್ಯವೆ ಎಂದು ಕೋಲಾರ ಶಾಸಕ ಕೊತ್ತೂರು ಜಿ. ಮಂಜುನಾಥ್ ಪ್ರಶ್ನೆ ಮಾಡಿದರು.
ನಗರದ ಟಿ. ಚನ್ನಯ್ಯ ರಂಗಮAದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 'ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಮ್ಮ ಭಾಷಣದ ಉದ್ದಕ್ಕೂ ವ್ಯವಸ್ಥೆಯ ಲೋಪಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಅಸಮಧಾನ ಹೊರ ಹಾಕಿದರು.
ನೀಟ್ ವಿರುದ್ಧದ ಪ್ರತಿಭಟನೆಯಲ್ಲಿ ಸಮಾಜ ಘಾತುಕ ಶಕ್ತಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯಲಾಯಿತು. ಪ್ರಜಾಪ್ರಭುತ್ವದಲ್ಲಿ ಸಾಮಾನ್ಯರ ದನಿಗೆ ಮನ್ನಣೆ ಸಿಗಬೇಕು. ಮಾಧ್ಯಮಗಳಲ್ಲಿ ಬರುವುದನ್ನೇ ಕುರುಡಾಗಿ ನಂಬದೆ, ಸತ್ಯವನ್ನು ಕಣ್ಣಾರೆ ಕಂಡು ನಿರ್ಭೀತಿಯಿಂದ ಮಾತನಾಡುವ ಗುಣವನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂವಿಧಾನವನ್ನು ಕೇವಲ ಹೊಗಳಿದರೆ ಅಥವಾ ವೇದಿಕೆಗಳ ಮೇಲೆ ಭಾಷಣ ಮಾಡಿದರೆ ಸಾಲದು. ಅದರಲ್ಲಿರುವ ಆಶಯಗಳನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿ, ಬಡವರಿಗೆ ಸೌಲಭ್ಯಗಳನ್ನು ತಲುಪಿಸಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಕೊತ್ತೂರು ಜಿ. ಮಂಜುನಾಥ್ ಅವರು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು ಮಹಾರಾಜರ ಜನಪರ ಕಾರ್ಯಗಳನ್ನು ಸ್ಮರಿಸಿದ ಶಾಸಕರು, ಸಂವಿಧಾನ ಜಾರಿಗೆ ಬರುವ ಮುನ್ನವೇ ಕೆ.ಆರ್. ಪುರಂ ಕೆರೆ, ಹೆಬ್ಬಾಳ ಕೆರೆ, ಫಿಲೋಮಿನಾ ಆಸ್ಪತ್ರೆ ನಿರ್ಮಾಣ ಹಾಗೂ ಟಾಟಾ ಸಂಸ್ಥೆಗೆ ಜಾಗ ನೀಡುವಂತಹ ಕಾರ್ಯಗಳನ್ನು ಮಾಡಲಾಗಿತ್ತು. ಆದರೆ ಇಂದು ಸಂವಿಧಾನ ಮತ್ತು ವ್ಯವಸ್ಥೆ ಎರಡೂ ಇದ್ದರೂ ಅಧಿಕಾರಿಗಳು ಬಡವರ ಕೆಲಸಗಳನ್ನು ಮಾಡಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ ಎಂದರು.
ಕಳೆದ ೨೦೨೧-೨೨ನೇ ಸಾಲಿನಿಂದ ಇಲ್ಲಿಯವರೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಬಡ ರೈತರಿಗೆ ಮಂಜೂರಾದ ಬೋರ್ವೆಲ್ಗಳನ್ನು ಕೊರೆಯಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಮಾಹಿತಿ ಕೇಳಿದರೆ ಕಡತಗಳನ್ನು ನೀಡದೆ ಕೇವಲ ಸಬೂಬು ಹೇಳುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ನಡೆಯುತ್ತಿರುವ ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಕಳಪೆ ಮಟ್ಟದ ಊಟ ನೀಡಲಾಗುತ್ತಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಇಂತಹ ಭ್ರಷ್ಟಾಚಾರವನ್ನು ನೋಡಿದರೆ ಖುದ್ದಾಗಿ ಅಂಬೇಡ್ಕರ್ ಅವರೇ ಬಂದು ಭ್ರಷ್ಠಾಚಾರ ಮಾಡುವ ವ್ಯಕ್ತಿಗಳ ಕತ್ತು ಹಿಸುಕಬೇಕು ಎಂದು ವ್ಯಂಗ್ಯವಾಡಿದರು.
ವಿಧಾನ ಪರಿಷತ್ ಶಾಸಕ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ ದೇಶದಲ್ಲಿ ಸಂವಿಧಾನ ಉಳಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ, ಪ್ರಜಾಪ್ರಭುತ್ವ ಉಳಿದರೆ ಮಾತ್ರ ನಾವೆಲ್ಲರೂ ಬದುಕಲು ಸಾಧ್ಯ ಎಂದು ಯುವಜನತೆಗೆ ಎಚ್ಚರಿಕೆ ನೀಡಿದರು.
ವಿಶ್ವಸಂಸ್ಥೆಯು ೨೦೦೭ರಲ್ಲಿ ಪ್ರಜಾಪ್ರಭುತ್ವ ದಿನವನ್ನು ಘೋಷಿಸಿದ್ದು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಇಂದಿನಿAದ ನವೆಂಬರ್ ೨೬ರವರೆಗೆ 'ಯುವ ಸಂಸತ್' ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ೨೬೦೦ ವರ್ಷಗಳ ಹಿಂದೆಯೇ ಬಿಹಾರದ ವೈಶಾಲಿ ಹಾಗೂ ಗ್ರೀಕ್ನ ಅಥೆನ್ಸ್ನಲ್ಲಿ ಪ್ರಜಾಪ್ರಭುತ್ವದ ಬೇರುಗಳಿದ್ದವು. ೧೨ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ 'ಅನುಭವ ಮಂಟಪ'ವೇ ದೇಶದ ಮೊದಲ ಸಂಸತ್ತು ಎಂದು ಅವರು ಇತಿಹಾಸ ಮೆಲುಕು ಹಾಕಿದರು.
೧೯೫೦ರಲ್ಲಿ ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿ0ದಾಗಿ ಕಟ್ಟಕಡೆಯ ಬಡವನಿಗೂ 'ಒಂದೇ ವೋಟು' ಎಂಬ ಸಮಾನತೆ ಲಭಿಸಿದೆ. ಮಹಿಳೆಯರು ರಾಷ್ಟ್ರಪತಿ ಹುದ್ದೆಯನ್ನೇರಲು ಸಾಧ್ಯವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇ.ಡಿ, ಸಿ.ಬಿ.ಐ ಹಾಗೂ ಚುನಾವಣಾ ಆಯೋಗದಂತಹ ಸ್ವಾಯತ್ತ ಸಂಸ್ಥೆಗಳ ದುರುಪಯೋಗವಾಗುತ್ತಿದ್ದು, ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಯುವಜನತೆ ಎಚ್ಚೆತ್ತುಕೊಂಡು ಸಂವಿಧಾನವನ್ನು ರಕ್ಷಿಸಬೇಕಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಮಾತನಾಡಿ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಮತ್ತು ಸಂವಿಧಾನದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಯುವ ಪೀಳಿಗೆಯ ಆದ್ಯ ಕರ್ತವ್ಯವಾಗಿದೆ. ಇಂದು ನಾವು ಅನುಭವಿಸುತ್ತಿರುವ ವಾಕ್-ಸ್ವಾತಂತ್ರ್ಯ, ಶಾಲಾ-ಕಾಲೇಜುಗಳು ಮತ್ತು ವಿದ್ಯಾರ್ಥಿನಿಲಯಗಳ ಸೌಲಭ್ಯಗಳು ಸಂವಿಧಾನದ ಕೊಡುಗೆಯಾಗಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಜನತೆ ಕಡ್ಡಾಯವಾಗಿ ಸಂವಿಧಾನದ ಆಶಯಗಳನ್ನು ಓದಿ ಅರ್ಥೈಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಉಪನ್ಯಾಸಕ ನಾರಾಯಣಸ್ವಾಮಿ ಡಯೆಟ್ ಉಪನ್ಯಾಸಕ ನಾರಾಯಣಸ್ವಾಮಿ ವಿಶೇಷ ಉಪನ್ಯಾಸ ನೀಡಿ, ಪ್ರಜಾಪ್ರಭುತ್ವವು ಕೇವಲ ಆಡಳಿತ ವ್ಯವಸ್ಥೆಯಲ್ಲ, ಅದೊಂದು ಪ್ರತಿಯೊಬ್ಬ ನಾಗರಿಕನ ಜೀವನ ವಿಧಾನವಾಗಬೇಕು. ಗ್ರೀಸ್, ರೋಮ್, ಇಂಗ್ಲೆ0ಡಿನ ಮ್ಯಾಗ್ನಾಕಾರ್ಟಾ, ಅಮೆರಿಕ ಮತ್ತು ಫ್ರಾನ್ಸ್ ಕ್ರಾಂತಿಗಳ ಇತಿಹಾಸವನ್ನು ವಿವರಿಸಿದ ಅವರು, ೧೮೮೧ರಲ್ಲೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಜಾಪ್ರತಿನಿಧಿ ಕಾಯ್ದೆ ತರುವ ಮೂಲಕ ಜನಸಾಮಾನ್ಯರನ್ನು ಆಡಳಿತದಲ್ಲಿ ಒಳಗೊಳ್ಳುವ ವ್ಯವಸ್ಥೆ ಮಾಡಿದ್ದರು ಎಂದು ಸ್ಮರಿಸಿದರು. ಪ್ರಸ್ತುತ ಪ್ರಪಂಚದ ೨೬ ದೇಶಗಳು ಪೂರ್ಣ ಪ್ರಮಾಣದ ಮತ್ತು ೭೪ ದೇಶಗಳು ಅರೆ-ಪ್ರಜಾಪ್ರಭುತ್ವ ಹೊಂದಿವೆ. ರಾಜಕೀಯ ಸಮಾನತೆಯ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯೂ ಇರಬೇಕು ಎಂಬುದು ಸಂವಿಧಾನದ ಆಶಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ. ಶಿವಕುಮಾರ್, ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ. ರಮೇಶ್, ಕೋಲಾರ ತಹಸೀಲ್ದಾರ್ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಮೈಲೇರಪ್ಪ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್