ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ರಾಷ್ಟ್ರಮಟ್ಟದ ಪ್ರಶಸ್ತಿ
ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ರಾಷ್ಟ್ರಮಟ್ಟದ 'ಎಕ್ಸಲೆನ್ಸ್ ಇನ್ ಅಫೋರ್ಡಬಲ್ ಹೆಲ್ತ್ಕೇರ್ ಫೈನಾನ್ಸಿಂಗ್' ಪ್ರಶಸ್ತಿ
ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಪ್ರತಿಷ್ಠಿತ 'ಎಕ್ಸಲೆನ್ಸ್ ಇನ್ ಅಫೋರ್ಡಬಲ್ ಹೆಲ್ತ್ಕೇರ್ ಫೈನಾನ್ಸಿಂಗ್' ಪ್ರಶಸ್ತಿ ಲಭಿಸಿದ್ದು, ಶ್ರೀ ದೇವರಾಜ್ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕುಲಾಧಿಪತಿಗಳಾದ ಜಿ. ಎಚ್. ನಾಗರಾಜ ಅವರು ಅಭಿನಂದಿಸಿದ್ದಾರೆ.


ಕೋಲಾರ, 15 ಸೆಪ್ಟೆಂಬರ್ (ಹಿ.ಸ)

ಆ್ಯಂಕರ್ : ಕೋಲಾರದ ಪ್ರತಿಷ್ಠಿತ ಆರ್. ಎಲ್. ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ವೈದ್ಯಕೀಯ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಗ್ಗಳಿಕೆಗೆ ಪಾತ್ರವಾಗಿದ್ದು. ನವದೆಹಲಿಯಲ್ಲಿ ನಡೆದ 'ದಿ ಎಕನಾಮಿಕ್ ಟೈಮ್ಸ್ ಹೆಲ್ತ್ಕೇರ್ ಅವಾರ್ಡ್ಸ್'ನ ೬ನೇ ಆವೃತ್ತಿಯಲ್ಲಿ ಪ್ರತಿಷ್ಠಿತ ಎಕ್ಸಲೆನ್ಸ್ ಇನ್ ಅಫೋರ್ಡಬಲ್ ಹೆಲ್ತ್ಕೇರ್ ಫೈನಾನ್ಸಿಂಗ್ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ದೇಶಾದ್ಯಂತ ಸಲ್ಲಿಕೆಯಾಗಿದ್ದ ೪೦೦ ಕ್ಕೂ ಹೆಚ್ಚು ರಾಷ್ಟ್ರೀಯ ನಾಮನಿರ್ದೇಶನಗಳ ನಡುವೆ ಈ ಆಯ್ಕೆ ನಡೆದಿದೆ. ಖ್ಯಾತ ಶಿಕ್ಷಣತಜ್ಞ ಹಾಗೂ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ವಿಶೇಷ ಉಪನ್ಯಾಸದ ನಂತರ, 'ದಿ ಎಕನಾಮಿಕ್ ಟೈಮ್ಸ್'ನ ಹಿರಿಯ ಅಸೋಸಿಯೇಟ್ ಎಡಿಟರ್ ವಿಕಾಸ್ ದಂಡೇಕರ್ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಆಸ್ಪತ್ರೆಯ ಪರವಾಗಿ ಡಾ. ಜೆ. ಕೃಷ್ಣಪ್ಪ, ಡಾ. ಕೆ. ದಿನೇಶ್ ಮತ್ತು ಡಾ. ಕೆ. ಜೆ. ದೇವೇಂದ್ರ ಪ್ರಸಾದ್ ಅವರು ನವದೆಹಲಿಯಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಕೋಲಾರ ಜಿಲ್ಲೆಯ ಗ್ರಾಮೀಣ ಹಾಗೂ ಹಿಂದುಳಿದ ವರ್ಗಗಳ ಜನರಿಗೆ ಸತತವಾಗಿ ಸೇವೆ ಸಲ್ಲಿಸುತ್ತಿರುವ ಈ ೧,೩೬೦ ಹಾಸಿಗೆಗಳ ಉನ್ನತ ದರ್ಜೆಯ ಬೋಧನಾ ಆಸ್ಪತ್ರೆಯು, ಅತ್ಯಾಧುನಿಕ ತಂತ್ರಜ್ಞಾನದೊAದಿಗೆ ಸಂಪೂರ್ಣ ಆರ್ಥಿಕ ಸುಲಭ ಲಭ್ಯತೆಯನ್ನು ಕಲ್ಪಿಸಿಕೊಟ್ಟಿರುವುದಕ್ಕೆ ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ ಅತ್ಯಾಧುನಿಕ 'ಲಿನಿಯರ್ ಆಕ್ಸಿಲರೇಟರ್' ತಂತ್ರಜ್ಞಾನ, ಉಚಿತ ಹೆರಿಗೆ ಸೇವೆಗಳು, ಕ್ಯಾನ್ಸರ್ ತಪಾಸಣೆ ಶಿಬಿರಗಳು, ರಕ್ತಸಂಬAಧಿ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ವಿಶೇಷ ಆರೈಕೆ, ಬಾಲ್ಯಾವಸ್ಥೆಯ ಮಧುಮೇಹ ರೋಗಿಗಳಿಗೆ ಉಚಿತ ಇನ್ಸುಲಿನ್ ವಿತರಣೆ ಮತ್ತು ಎಲ್ಲಾ ಒಳರೋಗಿಗಳಿಗೆ ಉಚಿತ ಚಿಕಿತ್ಸಾ ಯೋಜನೆಗಳ ಜೊತೆಗೆ ಆಯುಷ್ಮಾನ್ ಭಾರತ್ನಂತಹ ಸರ್ಕಾರಿ ಯೋಜನೆಗಳನ್ನು ಅತ್ಯುತ್ತಮವಾಗಿ ಅನುಷ್ಠಾನಗೊಳಿಸುತ್ತಿರುವುದು ವಿಶೇಷವಾಗಿದೆ.

ಈ ರಾಷ್ಟ್ರೀಯ ಮಟ್ಟದ ಗೌರವಕ್ಕೆ ಹರ್ಷ ವ್ಯಕ್ತಪಡಿಸಿರುವ ಶ್ರೀ ದೇವರಾಜ್ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕುಲಾಧಿಪತಿಗಳಾದ ಜಿ. ಎಚ್. ನಾಗರಾಜ ಅವರು, ಆಸ್ಪತ್ರೆಯ ಸಿಬ್ಬಂದಿಯ ಕಠಿಣ ಪರಿಶ್ರಮ ಮತ್ತು ಸೇವಾ ಮನೋಭಾವವನ್ನು ಶ್ಲಾಘಿಸಿದ್ದಾರೆ. ಕೋಲಾರ ಹಾಗೂ ಸುತ್ತಮುತ್ತಲಿನ ಜಿಲ್ಲೆ ಮತ್ತು ರಾಜ್ಯಗಳ ಬಡ ಮತ್ತು ಅಗತ್ಯವಿರುವ ಪ್ರತಿಯೊಬ್ಬರಿಗೂ ಗುಣಮಟ್ಟದ ವೈದ್ಯಕೀಯ ಸೇವೆ ತಲುಪಿಸುವುದೇ ತಮ್ಮ ಸಂಸ್ಥೆಯ ಪ್ರಮುಖ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande