
ನವದೆಹಲಿ, 14 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೆ.17ರಂದು ದೇಶದ ಜನರು ‘ಆಶೀರ್ವಾದದ ದೀಪ’ ಬೆಳಗಿಸುವಂತೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಮನವಿ ಮಾಡಿದ್ದಾರೆ.
ಸೋಮವಾರ ಬಿಡುಗಡೆ ಮಾಡಿದ ವಿಡಿಯೊ ಸಂದೇಶದಲ್ಲಿ ಮಾತನಾಡಿದ ನಿತಿನ್ ನವೀನ್, ಪ್ರಧಾನಿ ನರೇಂದ್ರ ಮೋದಿ ಅವರ ಮೂಲ ಧ್ಯೇಯ ‘ಜನಸೇವೆಯಿಂದ ದೇಶಸೇವೆ’ಯಾಗಿದೆ. ಕಳೆದ 25 ವರ್ಷಗಳಿಂದ ಇದೇ ಸಂಕಲ್ಪದೊಂದಿಗೆ ಅವರು ದೇಶ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮೋದಿ ಅವರು ದೇಶದ ನಾಯಕತ್ವ ವಹಿಸಿಕೊಂಡ ಸಂದರ್ಭದಲ್ಲಿ ದೇಶದ ಮುಂದೆ ಹಲವು ಸವಾಲುಗಳಿದ್ದವು. ಹೊಸ ನೀತಿಗಳು ಮತ್ತು ಯೋಜನೆಗಳ ಮೂಲಕ ಸಾಮಾನ್ಯ ಜನರ ಜೀವನದಲ್ಲಿ ಬದಲಾವಣೆ ತರಲು ಅವರು ಕ್ರಮ ಕೈಗೊಂಡರು. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿಯೂ ಪ್ರಧಾನಿಯವರ ನಾಯಕತ್ವದಲ್ಲಿ ದೇಶವು ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಲು ಪ್ರಯತ್ನಿಸಿತು. ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ಆತ್ಮನಿರ್ಭರ ಭಾರತದ ಸಾಮರ್ಥ್ಯವನ್ನು ದೇಶ ಪ್ರದರ್ಶಿಸಿತು ಎಂದು ಅವರು ಹೇಳಿದ್ದಾರೆ.
ಯುವಕರು ಮತ್ತು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಲು ಮೋದಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ನವೋದ್ಯಮಗಳ ಮೂಲಕ ಯುವಜನರಿಗೆ ಹೊಸ ಅವಕಾಶಗಳು ದೊರೆತಿವೆ. ಶೌಚಾಲಯ ನಿರ್ಮಾಣ ಹಾಗೂ ‘ಲಖಪತಿ ದೀದಿ’ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಮಹಿಳೆಯರ ಗೌರವ ಮತ್ತು ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ನಿತಿನ್ ನವೀನ್ ಹೇಳಿದ್ದಾರೆ.
ದೇಶದ ಭದ್ರತೆಯ ಕ್ಷೇತ್ರದಲ್ಲಿಯೂ ದೊಡ್ಡ ಬದಲಾವಣೆಯಾಗಿದೆ. ನಕ್ಸಲ್ವಾದದ ಪ್ರಭಾವವನ್ನು ಬಹುತೇಕ ನಿಯಂತ್ರಿಸಲಾಗಿದ್ದು, ಭಯೋತ್ಪಾದನೆಯ ವಿರುದ್ಧವೂ ಸರ್ಕಾರ ಕಠಿಣ ನಿಲುವು ತಳೆದಿದೆ. ಇಂದು ದೇಶ ತನ್ನ ಗಡಿಗಳ ಭದ್ರತೆಯ ವಿಚಾರದಲ್ಲಿ ಹಿಂದಿಗಿಂತಲೂ ಹೆಚ್ಚು ಬಲಿಷ್ಠ ಸ್ಥಿತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
‘ಅಭಿವೃದ್ಧಿ ಹೊಂದಿದ ಭಾರತ @ 2047’ರ ಸಂಕಲ್ಪದೊಂದಿಗೆ ದೇಶ ಮುನ್ನಡೆಯುತ್ತಿದೆ. ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಸಂಜೆ 6ರಿಂದ 7 ಗಂಟೆಯೊಳಗೆ ತಮ್ಮ ಮನೆಗಳಲ್ಲಿ ‘ಆಶೀರ್ವಾದದ ದೀಪ’ ಬೆಳಗಿಸಿ, ಪ್ರಧಾನಿಯವರ ದೀರ್ಘಾಯುಷ್ಯ ಮತ್ತು ಯಶಸ್ವಿ ಜೀವನಕ್ಕಾಗಿ ಹಾರೈಸುವಂತೆ ನಿತಿನ್ ನವೀನ್ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.