ತಮಿಳುನಾಡಿಗೆ ಕಾವೇರಿ ನೀರು: ನದಿಗಿಳಿದು ಪ್ರತಿಭಟನೆ ನಡೆಸಿದ ಮಂಡ್ಯ ರೈತರು
ಮಳೆಗಾಗಿ ‘ಮಳೆರಾಯ’ನ ಮೊರೆ
Mandya-farmers-protest-in-Cauvery-river-against-water-release-to-Tamil-Nadu-on-Gowri-Ganesha-festival


ಮಂಡ್ಯ, 14 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಗೌರಿ–ಗಣೇಶ ಹಬ್ಬದ ದಿನವೂ ರೈತರು ಪ್ರತಿಭಟನೆ ನಡೆಸಿದರು.

ಪಾಂಡವಪುರ ತಾಲ್ಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದ ಬಳಿ ಕಾವೇರಿ ನದಿಗಿಳಿದ ರೈತರು, ನೀರಾವರಿ ಇಲಾಖೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪಾಂಡವಪುರ ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ‘ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು’ ಎಂದು ರೈತರು ಒತ್ತಾಯಿಸಿದರು.

ರಾಜ್ಯದ ರೈತರ ಹಿತವನ್ನು ಕಡೆಗಣಿಸಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಜಿಲ್ಲೆಯ ರೈತರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಗೌರಿ–ಗಣೇಶ ಹಬ್ಬದ ದಿನವೂ ತಮಿಳುನಾಡಿಗೆ ನೀರು ಹರಿಸಿ ನಮಗೆ ಸರ್ಕಾರ ಒಳ್ಳೆಯ ಭಾಗ್ಯ ನೀಡುತ್ತಿದೆ’ ಎಂದು ರೈತರು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಬರದ ಪರಿಸ್ಥಿತಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ಮೊದಲು ಕರ್ನಾಟಕದ ರೈತರ ಜಮೀನುಗಳಿಗೆ ನೀರು ಒದಗಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಂಡ್ಯ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪುಗೌಡ, ಮಂಜುನಾಥ್, ಅಶೋಕ್, ರಘು ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.

ಮಳೆಗಾಗಿ ‘ಮಳೆರಾಯ’ನ ಮೊರೆಇನ್ನೊಂದೆಡೆ, ಮಂಡ್ಯ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬರದ ಸಮಸ್ಯೆ ಉಲ್ಬಣಿಸುತ್ತಿದ್ದು, ಮಳೆ ಇಲ್ಲದೆ ಮದ್ದೂರು ತಾಲ್ಲೂಕಿನ ಜನರು ಕಂಗಾಲಾಗಿದ್ದಾರೆ. ಗಣೇಶ ಹಬ್ಬದ ದಿನ ಮಳೆಗಾಗಿ ಮಳೆರಾಯನ ಮೊರೆ ಹೋದ ಗ್ರಾಮಸ್ಥರು, ಮದ್ದೂರು ಪಟ್ಟಣದಲ್ಲಿ ವಿಶೇಷ ಮೆರವಣಿಗೆ ನಡೆಸಿದರು.

ಮದ್ದೂರು ಪಟ್ಟಣದ ಎಪಿಎಂಸಿಯಿಂದ ಟಿ.ಬಿ. ವೃತ್ತದವರೆಗೆ ಮಳೆರಾಯನ ಪ್ರತಿಕೃತಿಯನ್ನು ಮೆರವಣಿಗೆ ಮಾಡಲಾಯಿತು. ಪ್ರತಿಕೃತಿಯ ಮುಂದೆ ಕಪ್ಪೆಯನ್ನು ಕೂರಿಸಿ ಮೆರವಣಿಗೆ ನಡೆಸಿದ ಜನರು, ‘ಮಳೆರಾಯ ಕರುಣೆ ತೋರಿ, ಮಳೆ ಸುರಿಸಿ ರೈತರ ಸಂಕಷ್ಟ ದೂರ ಮಾಡು’ ಎಂದು ಪ್ರಾರ್ಥಿಸಿದರು.

ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಜಾನುವಾರುಗಳು ಹಾಗೂ ಜನರಿಗೂ ನೀರಿನ ಸಮಸ್ಯೆ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಉತ್ತಮ ಮಳೆಯಾಗಬೇಕು ಎಂದು ಜನರು ಆಶಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande