ಗಾಳಿ ಕೊರತೆಯಿಂದ ವಿದ್ಯುತ್ ಉತ್ಪಾದನೆ ಕುಸಿತ: ಚೆಸ್ಕಾಂ ಅಧ್ಯಕ್ಷ ರಮೇಶ ಬಂಡಿಸಿದ್ದೆಗೌಡ
ಶ್ರೀರಂಗಪಟ್ಟಣ,14 ಸೆಪ್ಟೆಂಬರ್(ಹಿ.ಸ.) ಆ್ಯಂಕರ್: ರಾಜ್ಯದಲ್ಲಿ ವಿದ್ಯುತ್ ಕೊರತೆ ಹಿನ್ನೆಲೆಯಲ್ಲಿ ಲೋಡ್ ಶೆಡಿಂಗ್ ಮಾಡುತ್ತಿರುವುದನ್ನು ಚೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಒಪ್ಪಿಕೊಂಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, “ನಗರ ಪ್ರದೇಶದಲ್ಲೂ ಒಂದು ಗಂಟೆ
Karnataka-power-shortage-CESCOM-chairman-Ramesh-Babu-Bandisiddhegowda-confirms-load-shedding


ಶ್ರೀರಂಗಪಟ್ಟಣ,14 ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ರಾಜ್ಯದಲ್ಲಿ ವಿದ್ಯುತ್ ಕೊರತೆ ಹಿನ್ನೆಲೆಯಲ್ಲಿ ಲೋಡ್ ಶೆಡಿಂಗ್ ಮಾಡುತ್ತಿರುವುದನ್ನು ಚೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಒಪ್ಪಿಕೊಂಡಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, “ನಗರ ಪ್ರದೇಶದಲ್ಲೂ ಒಂದು ಗಂಟೆ ಲೋಡ್ಶೆಡ್ಡಿಂಗ್ ಮಾಡಲಾಗುತ್ತಿದೆ.

ಇನ್ನೆರಡು ದಿನಗಳಲ್ಲಿ ಸಮಸ್ಯೆ ಶೇ 80ರಷ್ಟು ಬಗೆಹರಿಯುವ ನಿರೀಕ್ಷೆಯಿದೆ. ನೂರಕ್ಕೆ ನೂರು ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳುವುದಿಲ್ಲ” ಎಂದು ತಿಳಿಸಿದರು.“ಇಡೀ ದೇಶದಲ್ಲೇ ವಿದ್ಯುತ್ ಕೊರತೆಯ ಸಮಸ್ಯೆ ಎದುರಾಗಿದೆ.

ಮಳೆಗಾಲದಲ್ಲಿ ಅಸ್ಸಾಂ ಮತ್ತು ಪಂಜಾಬ್ಗೆ ನಾವು ವಿದ್ಯುತ್ ನೀಡುತ್ತಿದ್ದೆವು. ಬೇಸಿಗೆಯಲ್ಲಿ ಅವರು ನಮಗೆ ವಿದ್ಯುತ್ ನೀಡುತ್ತಿದ್ದರು. ಆದರೆ ಈ ಬಾರಿ ಅವರಿಂದ ವಿದ್ಯುತ್ ಪಡೆದಿದ್ದೇವೆ. ಅದನ್ನು ವಾಪಸ್ ನೀಡಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿದರು.

ರಾಯಚೂರು ವಿದ್ಯುತ್ ಉತ್ಪಾದನಾ ಘಟಕದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆ ಆಗಿಲ್ಲ. ರಾಜ್ಯಕ್ಕೆ ಸುಮಾರು 2,000 ಮೆಗಾವಾಟ್ ವಿದ್ಯುತ್ ಅಗತ್ಯವಿದ್ದು, ಮಾರುಕಟ್ಟೆಯಲ್ಲಿ ಕೇವಲ 200 ಮೆಗಾವಾಟ್ ವಿದ್ಯುತ್ ಲಭ್ಯವಾಗುತ್ತಿದೆ.

ಪ್ರತಿ ಯೂನಿಟ್ಗೆ ₹10 ದರದಲ್ಲಿ ವಿದ್ಯುತ್ ಖರೀದಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಗಾಳಿ ಕೊರತೆಯೂ ವಿದ್ಯುತ್ ಉತ್ಪಾದನೆ ಕುಸಿಯಲು ಪ್ರಮುಖ ಕಾರಣವಾಗಿದೆ. “ನಿತ್ಯ ಗಾಳಿಯಿಂದ ಸುಮಾರು 3,000 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು.

ಆದರೆ ಈಗ ಕೇವಲ 500 ಮೆಗಾವಾಟ್ ಉತ್ಪಾದನೆಯಾಗಿದೆ. ಉಳಿದ 2,500 ಮೆಗಾವಾಟ್ ವಿದ್ಯುತ್ ಎಲ್ಲಿಂದ ತರಬೇಕು?” ಎಂದು ಪ್ರಶ್ನಿಸಿದರು.

ಲೋಡ್ಶೆಡ್ಡಿಂಗ್ ಮಾಡಬಾರದು ಎಂಬುದು ಸರ್ಕಾರದ ತೀರ್ಮಾನವಾಗಿದ್ದರೂ, ಸದ್ಯದ ಪರಿಸ್ಥಿತಿಯಿಂದಾಗಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಅನಿವಾರ್ಯವಾಗಿದೆ.

ನಗರ ಪ್ರದೇಶಗಳಲ್ಲಿ ಒಂದು ಗಂಟೆ ಲೋಡ್ಶೆಡ್ಡಿಂಗ್ ಮಾಡಲಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಿಗೆ ತ್ರಿಫೇಸ್ ವಿದ್ಯುತ್ ಪೂರೈಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

“ಕಳೆದ ಏಳೆಂಟು ವರ್ಷಗಳಲ್ಲಿ ಇಂತಹ ವಿದ್ಯುತ್ ಸಮಸ್ಯೆ ಎದುರಾಗಿರಲಿಲ್ಲ. ಮಳೆಯ ಜೊತೆಗೆ ಗಾಳಿಯ ಕೊರತೆಯಿಂದಲೂ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಜನರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ರಮೇಶ್ ಬಾಬು ಬಂಡಿಸಿದ್ದೇಗೌಡ ಮನವಿ ಮಾಡಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande