
ಬೆಂಗಳೂರು, 14 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರು ಹಾಗೂ ಅತಿವೇಗವಾಗಿ ವಾಹನ ಚಲಾಯಿಸುವವರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸ್ ವಿಭಾಗ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಆರೋಪದಲ್ಲಿ ೫೬೦ ಪ್ರಕರಣಗಳನ್ನು ದಾಖಲಿಸಲಾಗಿದೆ.
ಸೆಪ್ಟೆಂಬರ್ ೭ರಿಂದ ೧೩ರವರೆಗೆ ನಗರದ ೫೩ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಿವಿಧ ಮಾದರಿಯ ಒಟ್ಟು ೩೮,೬೮೦ ವಾಹನಗಳನ್ನು ಪರಿಶೀಲಿಸಲಾಯಿತು. ಪರಿಶೀಲನೆ ವೇಳೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ ೫೬೦ ಪ್ರಕರಣಗಳನ್ನು ದಾಖಲಿಸಲಾಗಿದೆ.
ಇದೇ ಅವಧಿಯಲ್ಲಿ ಅತಿವೇಗವಾಗಿ ವಾಹನ ಚಲಾಯಿಸುವವರ ವಿರುದ್ಧವೂ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ಒಟ್ಟು ೨೦೩ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳಿಂದ ₹೨.೧೨ ಲಕ್ಷ ದಂಡವನ್ನು ಸಂಗ್ರಹಿಸಲಾಗಿದೆ.
ಬೆಂಗಳೂರು ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಹಾಗೂ ಅತಿವೇಗವಾಗಿ ವಾಹನ ಚಲಾಯಿಸುವವರ ಹಾವಳಿಗೆ ಕಡಿವಾಣ ಹಾಕುವ ಜೊತೆಗೆ ರಸ್ತೆ ಸುರಕ್ಷತೆಯನ್ನು ಖಾತರಿಪಡಿಸುವ ಉದ್ದೇಶದಿಂದ ಇಂತಹ ವಿಶೇಷ ಕಾರ್ಯಾಚರಣೆಗಳನ್ನು ಮುಂದಿನ ದಿನಗಳಲ್ಲಿಯೂ ಮುಂದುವರಿಸಲಾಗುವುದು ಎಂದು ಸಂಚಾರ ಪೊಲೀಸ್ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.