ಎಲ್ಎಸಿಯಲ್ಲಿ ಚೀನಾದ ಸೈನಿಕರ ನಿಯೋಜನೆಯಲ್ಲಿ ಗಣನೀಯ ಇಳಿಕೆ: ರಕ್ಷಣಾ ಸಚಿವಾಲಯದ ವಾರ್ಷಿಕ ವರದಿ
ನವದೆಹಲಿ, 14 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಭಾರತ-ಚೀನಾ ನಡುವಿನ ರಾಜಕೀಯ, ರಾಜತಾಂತ್ರಿಕ ಹಾಗೂ ಸೇನಾ ಮಟ್ಟದ ಮಾತುಕತೆಗಳಿಂದ ಉತ್ತರ ಗಡಿಯಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದ್ದು, ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ)ಯ ನಿಯೋಜನೆಯಲ್ಲಿ ಗಣನೀ
रक्षा मंत्रालय की वार्षिक रिपोर्ट


ನವದೆಹಲಿ, 14 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಭಾರತ-ಚೀನಾ ನಡುವಿನ ರಾಜಕೀಯ, ರಾಜತಾಂತ್ರಿಕ ಹಾಗೂ ಸೇನಾ ಮಟ್ಟದ ಮಾತುಕತೆಗಳಿಂದ ಉತ್ತರ ಗಡಿಯಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದ್ದು, ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ)ಯ ನಿಯೋಜನೆಯಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ರಕ್ಷಣಾ ಸಚಿವಾಲಯದ 2025-26ನೇ ಸಾಲಿನ ವಾರ್ಷಿಕ ವರದಿ ತಿಳಿಸಿದೆ.

ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ಅವರು ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡು ಸ್ವದೇಶಕ್ಕೆ ಮರಳಿದ ಒಂದು ದಿನದ ಬಳಿಕ ರಕ್ಷಣಾ ಸಚಿವಾಲಯದ ವಾರ್ಷಿಕ ವರದಿ ಬಿಡುಗಡೆಯಾಗಿದೆ. ವರದಿಯಲ್ಲಿ ಭಾರತೀಯ ಸೇನೆಯು ಉತ್ತರ ಗಡಿಗಳನ್ನು ಸುರಕ್ಷಿತವಾಗಿರಿಸಿದ್ದು, ಭಾರತ ಮತ್ತು ಚೀನಾ ನಡುವಿನ ರಾಜಕೀಯ, ರಾಜತಾಂತ್ರಿಕ ಹಾಗೂ ಸೇನಾ ಮಟ್ಟದ ನಿರಂತರ ಮಾತುಕತೆಗಳಿಂದ ಸ್ಥಿರತೆ ಮೂಡಿದೆ ಎಂದು ಹೇಳಲಾಗಿದೆ.

ಎಲ್‌ಎಸಿ ಹಾಗೂ ತರಬೇತಿ ಪ್ರದೇಶಗಳಲ್ಲಿ ಭಾರತವು 10 ಬ್ರಿಗೇಡ್‌ ಗಾತ್ರದ ಸೇನಾ ಪಡೆಯನ್ನು ನಿಯೋಜಿಸಿದ ಬಳಿಕ ಉತ್ತರ ಗಡಿಯುದ್ದಕ್ಕೂ ಚೀನಾದ ಸೇನಾ ನಿಯೋಜನೆಯಲ್ಲಿ ಸಾಕಷ್ಟು ಇಳಿಕೆ ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎಲ್ಲ ವಲಯಗಳಲ್ಲೂ ಭಾರತೀಯ ಸೇನೆ ಸನ್ನದ್ಧ

ಎಲ್‌ಎಸಿಯ ಎಲ್ಲ ವಲಯಗಳಲ್ಲೂ ಭಾರತೀಯ ಸೇನೆ ಉತ್ತಮ ರೀತಿಯಲ್ಲಿ ನಿಯೋಜನೆಗೊಂಡಿದ್ದು, ಯಾವುದೇ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

2025ರಲ್ಲಿ ಉತ್ತರ ಗಡಿಯಲ್ಲಿ ಕಾಲಾಳುಪಡೆ, ಟ್ಯಾಂಕ್‌ಗಳು, ಫಿರಂಗಿದಳ ಹಾಗೂ ವಾಯು ರಕ್ಷಣಾ ಪಡೆ ಸೇರಿದಂತೆ ವಿವಿಧ ಯುದ್ಧ ಘಟಕಗಳನ್ನು ಸಮನ್ವಯದೊಂದಿಗೆ ನಿಯೋಜಿಸಲಾಗಿತ್ತು. ಯಾವುದೇ ಪರಿಸ್ಥಿತಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಲು ಈ ವ್ಯವಸ್ಥೆ ನೆರವಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮಾರ್ಚ್ ಮತ್ತು ಜುಲೈ 2025ರಲ್ಲಿ ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ಕಾರ್ಯವಿಧಾನದ 33ನೇ ಮತ್ತು 34ನೇ ಸುತ್ತಿನ ಸಭೆಗಳು ನಡೆದಿದ್ದು, ಭಾರತ-ಚೀನಾ ನಡುವೆ ಹೊಸದಾಗಿ ಮಾತುಕತೆಗಳು ಆರಂಭಗೊಂಡಿವೆ. ಗಡಿ ಸಮಸ್ಯೆ ಪರಿಹಾರಕ್ಕಾಗಿ ವಿಶೇಷ ಪ್ರತಿನಿಧಿಗಳ ಮಟ್ಟದ ಮಾತುಕತೆಯೂ ಪುನರಾರಂಭಗೊಂಡಿದ್ದು, 2024ರ ಡಿಸೆಂಬರ್ ಹಾಗೂ 2025ರ ಆಗಸ್ಟ್‌ನಲ್ಲಿ ಎರಡು ಸುತ್ತಿನ ಮಾತುಕತೆ ನಡೆದಿವೆ ಎಂದು ವರದಿ ತಿಳಿಸಿದೆ.

ಭಾರತ ಮತ್ತು ಚೀನಾ ನಡುವಿನ ಹೆಚ್ಚಿದ ರಾಜತಾಂತ್ರಿಕ ಹಾಗೂ ಸೇನಾ ಸಂಪರ್ಕವು ಸಂಘರ್ಷದ ಬದಲು ಪಾಲುದಾರಿಕೆ ಮತ್ತು ಶಾಂತಿಯ ಮೂಲಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಬದ್ಧತೆಯನ್ನು ಬಲಪಡಿಸುವ ನಿರೀಕ್ಷೆಯಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಮೋದಿ–ಶಿ ಮಾತುಕತೆಯಲ್ಲಿ ಎಲ್‌ಎಸಿ ಪ್ರಸ್ತಾಪವಿಲ್ಲ

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ನಡುವೆ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ವ್ಯಾಪಾರ ಕೊರತೆ ಕಡಿಮೆ ಮಾಡುವುದು, ಭಯೋತ್ಪಾದನೆ ಸೇರಿದಂತೆ ವಿವಿಧ ಸವಾಲುಗಳನ್ನು ಎದುರಿಸುವುದು ಹಾಗೂ ಬಹುಪಕ್ಷೀಯ ವೇದಿಕೆಗಳಲ್ಲಿ ನ್ಯಾಯಸಮ್ಮತ ವ್ಯಾಪಾರ ಖಚಿತಪಡಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆದಿದೆ. ಆದರೆ ಎಲ್‌ಎಸಿ ವಿಚಾರ ಈ ಮಾತುಕತೆಯಲ್ಲಿ ಪ್ರಸ್ತಾಪವಾಗಿಲ್ಲ ಎಂದು ವರದಿ ತಿಳಿಸಿದೆ.

‘ಆಪರೇಷನ್ ಸಿಂಧೂರ್’ನಲ್ಲಿ ವಾಯುಪಡೆಯ ಪಾತ್ರಕ್ಕೆ ಒತ್ತು

ರಕ್ಷಣಾ ಸಚಿವಾಲಯವು ‘ಆಪರೇಷನ್ ಸಿಂಧೂರ್’ನಲ್ಲಿ ಭಾರತೀಯ ವಾಯುಪಡೆಯ ಪಾತ್ರಕ್ಕೂ ವರದಿಯಲ್ಲಿ ವಿಶೇಷ ಒತ್ತು ನೀಡಿದೆ. ಪಾಕಿಸ್ತಾನದಾದ್ಯಂತ ಇರುವ ಭಯೋತ್ಪಾದಕ ನೆಲೆಗಳ ಮೇಲೆ ನಿಖರ ದಾಳಿ ನಡೆಸಲಾಗಿದ್ದು, ನೂರ್ ಖಾನ್ ಮತ್ತು ರಹೀಂ ಯಾರ್ ಖಾನ್ ವಾಯುನೆಲೆಗಳಂತಹ ಸ್ಥಳಗಳನ್ನು ಗುರಿಯಾಗಿಸಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಪಾಕಿಸ್ತಾನದಿಂದ ನಡೆದ ಪ್ರತಿದಾಳಿ ಡ್ರೋನ್ ಮತ್ತು ಮಾನವರಹಿತ ವೈಮಾನಿಕ ವಾಹನಗಳ ದಾಳಿಯ ಸಂದರ್ಭದಲ್ಲಿ ಭಾರತೀಯ ವಾಯುಪ್ರದೇಶದ ರಕ್ಷಣೆಯಲ್ಲಿಯೂ ವಾಯುಪಡೆ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಲಾಗಿದೆ.

ಪದರಿತ ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಸ್ವದೇಶಿ ಆಕಾಶ ಕ್ಷಿಪಣಿ ವ್ಯವಸ್ಥೆ, ಪೆಚೋರಾ ಮತ್ತು ಒಎಸ್ಎ-ಎಕೆ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ನಿಯೋಜಿಸಲಾಗಿತ್ತು. ಸಮಗ್ರ ವಾಯು ಕಮಾಂಡ್ ಮತ್ತು ನಿಯಂತ್ರಣ ವ್ಯವಸ್ಥೆಯು ಕ್ಷಣಕ್ಷಣದ ಸಮನ್ವಯಕ್ಕೆ ನೆರವಾಗಿ, ವೈಮಾನಿಕ ಬೆದರಿಕೆಗಳನ್ನು ನಿಷ್ಕ್ರಿಯಗೊಳಿಸಲು ಹಾಗೂ ಸಂಘರ್ಷದ ಸಂದರ್ಭದಲ್ಲಿ ಜಾಲಾಧಾರಿತ ಕಾರ್ಯಾಚರಣೆಗಳನ್ನು ಮುಂದುವರಿಸಲು ಸಹಕಾರಿಯಾಯಿತು ಎಂದು ವರದಿ ತಿಳಿಸಿದೆ.

314 ಕಿ.ಮೀ. ದೂರದಿಂದ ಪಾಕಿಸ್ತಾನದ ವಿಮಾನ ಹೊಡೆದುರುಳಿಸಿದ ಎಸ್-400

ಎಸ್-400 ಘಟಕದ ಕಾರ್ಯಾಚರಣೆಯೊಂದರಲ್ಲಿ ಪಾಕಿಸ್ತಾನದ ವಿಶೇಷ ಕಾರ್ಯಾಚರಣಾ ವಿಮಾನವನ್ನು 314 ಕಿ.ಮೀ. ದೂರದಿಂದ ಯಶಸ್ವಿಯಾಗಿ ಗುರಿಯಾಗಿಸಿ ನಾಶಪಡಿಸಲಾಯಿತು ಎಂದು ರಕ್ಷಣಾ ಸಚಿವಾಲಯದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತೀಯ ರಾಡಾರ್ ವ್ಯವಸ್ಥೆಯು ಬೆದರಿಕೆಯನ್ನು ನಿಖರವಾಗಿ ಪತ್ತೆಹಚ್ಚಿ, ದೂರಗಾಮಿ ಭೂಮಿಯಿಂದ ಆಕಾಶಕ್ಕೆ ಹಾರಿಸುವ ಕ್ಷಿಪಣಿಯನ್ನು ಅದರ ಗರಿಷ್ಠ ವ್ಯಾಪ್ತಿಯವರೆಗೆ ಮಾರ್ಗದರ್ಶನ ಮಾಡಿತು ಎಂದು ವರದಿಯಲ್ಲಿ ಹೇಳಲಾಗಿದೆ. ಈ ಕಾರ್ಯಾಚರಣೆಯು ಭಾರತೀಯ ವಾಯು ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಸಚಿವಾಲಯ ತಿಳಿಸಿದೆ.

ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ

ಜಮ್ಮು-ಕಾಶ್ಮೀರದ ಭದ್ರತಾ ಪರಿಸ್ಥಿತಿಯೂ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ರಕ್ಷಣಾ ಸಚಿವಾಲಯದ ವರದಿ ಹೇಳಿದೆ. ಸೇನೆಯ ನಿರಂತರ ಪ್ರಯತ್ನಗಳಿಂದ ಹಿಂಸಾಚಾರದ ಮಟ್ಟ ಕಡಿಮೆಯಾಗಿದ್ದು, ಪ್ರತಿಭಟನೆಗಳು ಇಳಿಕೆಯಾಗಿವೆ ಮತ್ತು ಕಲ್ಲುತೂರಾಟದ ಯಾವುದೇ ಘಟನೆ ವರದಿಯಾಗಿಲ್ಲ ಎಂದು ತಿಳಿಸಲಾಗಿದೆ.

ಜನತೆ ಅಭಿವೃದ್ಧಿಯ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದು, ಸರ್ಕಾರ ಹಾಗೂ ಭಾರತೀಯ ಸೇನೆಯ ವಿವಿಧ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ವರದಿ ಹೇಳಿದೆ.

‘ಆಪರೇಷನ್ ಸಿಂಧೂರ್’ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ ಮತ್ತು ನಿಯಂತ್ರಣ ರೇಖೆ ಪ್ರದೇಶಗಳಲ್ಲಿನ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿತ್ತು. ಮೇ 10 ಮತ್ತು 12, 2025ರಂದು ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ ಮಟ್ಟದಲ್ಲಿ ನಡೆದ ಮಾತುಕತೆಗಳ ಬಳಿಕ ಪರಿಸ್ಥಿತಿ ಬಹುತೇಕ ಸ್ಥಿರಗೊಂಡಿದೆ. ಆದಾಗ್ಯೂ, ಅನಿಶ್ಚಿತತೆ ಇನ್ನೂ ಮುಂದುವರಿದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande