
ನವದೆಹಲಿ, 14 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ಪಾಕಿಸ್ತಾನದಿಂದ ಸರಕುಗಳ ಆಮದಿನ ಮೇಲಿನ ನಿರ್ಬಂಧವನ್ನು ತಪ್ಪಿಸಲು ನಡೆಸಿದ ಯತ್ನವನ್ನು ಬಯಲಿಗೆಳೆದಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ), ಪಾಕಿಸ್ತಾನ ಮೂಲದ 362 ಮೆಟ್ರಿಕ್ ಟನ್ಗೂ ಅಧಿಕ ಖರ್ಜೂರವನ್ನು ವಶಪಡಿಸಿಕೊಂಡಿದೆ. ಡಿಆರ್‌ಐ ಕೈಗೊಂಡಿರುವ ವಿಶೇಷ ಕಾರ್ಯಾಚರಣೆ ‘ಆಪರೇಷನ್ ಡೀಪ್ ಮ್ಯಾನಿಫೆಸ್ಟ್’ ಅಡಿ ಈ ಕ್ರಮ ಕೈಗೊಳ್ಳಲಾಗಿದೆ.
ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ನೀಡಿರುವ ಮಾಹಿತಿಯ ಪ್ರಕಾರ, ಗುಪ್ತಚರ ಮಾಹಿತಿ ಆಧರಿಸಿ ಡಿಆರ್‌ಐ ಅಧಿಕಾರಿಗಳು ಮಹಾರಾಷ್ಟ್ರದ ನಾಸಿಕ್‌ನ ಅಂಬಾಡ್‌ನಲ್ಲಿರುವ ಸರಕು ಸಾಗಣೆ ಕೇಂದ್ರದಲ್ಲಿ ಮುಂಬೈ ಮೂಲದ ಕಂಪನಿಯೊಂದು ಆಮದು ಮಾಡಿಕೊಂಡಿದ್ದ ಖರ್ಜೂರ ತುಂಬಿದ 13 ಕಂಟೇನರ್‌ಗಳನ್ನು ತಡೆದಿದ್ದಾರೆ. ಆಮದಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಸರಕುಗಳ ಮೂಲ ದೇಶವನ್ನು ಸಂಯುಕ್ತ ಅರಬ್ ಗಣರಾಜ್ಯ (ಯುಎಇ) ಎಂದು ನಮೂದಿಸಲಾಗಿತ್ತು.
ಪ್ರಾಥಮಿಕ ತನಿಖೆಯಲ್ಲಿ ಸರಕುಗಳ ನೈಜ ಮೂಲವನ್ನು ಮರೆಮಾಚಲು ವ್ಯವಸ್ಥಿತವಾಗಿ ಮರುಸಾಗಣೆ ಪ್ರಕ್ರಿಯೆ ನಡೆಸಿರುವುದು ಪತ್ತೆಯಾಗಿದೆ. ತನಿಖೆಯ ಪ್ರಕಾರ, ಈ ಖರ್ಜೂರಗಳನ್ನು ಮೊದಲು ಪಾಕಿಸ್ತಾನದ ಕರಾಚಿ ಬಂದರಿನಿಂದ ಯುಎಇಯ ಜೆಬೆಲ್ ಅಲಿ ಬಂದರಿಗೆ ಸಾಗಿಸಲಾಗಿತ್ತು. ಬಳಿಕ ಅಲ್ಲಿ ಸರಕುಗಳನ್ನು ಮತ್ತೊಂದು ಕಂಟೇನರ್‌ಗೆ ವರ್ಗಾಯಿಸಿ ಭಾರತಕ್ಕೆ ಕಳುಹಿಸಲಾಗಿತ್ತು.
ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಪಾಕಿಸ್ತಾನಿ ನಾಗರಿಕರು ನಡೆಸುತ್ತಿದ್ದ ಕೆಲವು ಸಂಸ್ಥೆಗಳ ಪಾತ್ರವೂ ಇರುವುದಾಗಿ ತನಿಖೆಯಿಂದ ತಿಳಿದುಬಂದಿದೆ. ಸರಕುಗಳ ನೈಜ ಮೂಲ ಮತ್ತು ದಾಖಲೆಗಳಲ್ಲಿ ನಮೂದಿಸಿರುವ ಮಾಹಿತಿಯ ನಡುವಿನ ವ್ಯತ್ಯಾಸವನ್ನು ಗಂಭೀರವಾಗಿ ಪರಿಗಣಿಸಿರುವ ಡಿಆರ್‌ಐ, ಸಂಪೂರ್ಣ ಸರಕನ್ನು ವಶಪಡಿಸಿಕೊಂಡು ಮುಂದಿನ ತನಿಖೆ ಆರಂಭಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರವು 2025ರ ಮೇ 2ರಿಂದ ಪಾಕಿಸ್ತಾನದಿಂದ ಬರುವ ಅಥವಾ ಪಾಕಿಸ್ತಾನ ಮೂಲದ ಎಲ್ಲ ಸರಕುಗಳ ನೇರ ಮತ್ತು ಪರೋಕ್ಷ ಆಮದು ಹಾಗೂ ಸಾಗಣೆಯ ಮೇಲೆ ಸಂಪೂರ್ಣ ನಿರ್ಬಂಧ ವಿಧಿಸಿತ್ತು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಮೂರನೇ ದೇಶಗಳ ಮಾರ್ಗದ ಮೂಲಕ ಪಾಕಿಸ್ತಾನ ಮೂಲದ ಸರಕುಗಳನ್ನು ಭಾರತಕ್ಕೆ ತಂದು ಆಮದು ನಿರ್ಬಂಧವನ್ನು ತಪ್ಪಿಸುವ ಪ್ರಯತ್ನಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಇದೇ ಹಿನ್ನೆಲೆಯಲ್ಲಿ ‘ಆಪರೇಷನ್ ಡೀಪ್ ಮ್ಯಾನಿಫೆಸ್ಟ್’ ಅಡಿ ಇಂತಹ ಸರಕುಗಳನ್ನು ಗುರುತಿಸಿ, ತಡೆದು ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ಡಿಆರ್‌ಐ ನಡೆಸುತ್ತಿದೆ.
ತಪ್ಪು ಘೋಷಣೆ, ಮರುಸಾಗಣೆ ಹಾಗೂ ದಾಖಲೆಗಳಲ್ಲಿ ತಿರುಚಾಟ ನಡೆಸುವ ಮೂಲಕ ವ್ಯಾಪಾರ ನಿರ್ಬಂಧಗಳನ್ನು ತಪ್ಪಿಸಲು ಮಾಡುವ ಪ್ರಯತ್ನಗಳ ವಿರುದ್ಧ ಕ್ರಮ ಮುಂದುವರಿಯಲಿದೆ ಎಂದು ಡಿಆರ್‌ಐ ಸ್ಪಷ್ಟಪಡಿಸಿದೆ. ನಾಸಿಕ್‌ನಲ್ಲಿ ನಡೆದಿರುವ ಈ ಕಾರ್ಯಾಚರಣೆಯು ನಿರ್ಬಂಧಿತ ಸರಕುಗಳ ಪರೋಕ್ಷ ಆಮದನ್ನು ತಡೆಯುವುದರ ಜತೆಗೆ, ಸುಂಕ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ ಖಚಿತಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.