
ವಿಜಯಪುರ, 14 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಮುಂದಿನ ವಿಧಾನಸಭಾ ಚುನಾವಣೆಯನ್ನೂ ಕಾಂಗ್ರೆಸ್ ಪಕ್ಷವು ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲೇ ಎದುರಿಸಲಿದೆ ಎಂದು ಕೈಗಾರಿಕಾ ಸಚಿವ ಡಾ.ಎಂ.ಬಿ. ಪಾಟೀಲ ಸ್ಪಷ್ಟಪಡಿಸಿದರು.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ಗೆ ಎರಡು ಕಣ್ಣುಗಳಿದ್ದಂತೆ. ಈ ಇಬ್ಬರು ಹಿರಿಯ ನಾಯಕರ ಮಾರ್ಗದರ್ಶನದೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ಎಲ್ಲ ನಾಯಕರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಲಾಗುವುದು ಎಂದರು.
“ಸಿದ್ದರಾಮಯ್ಯ ಅವರು ಇಂದು ನಮ್ಮ ನಾಯಕರು, ನಾಳೆಯೂ ನಮ್ಮ ನಾಯಕರು. ಹಿಂದೆಯೂ ಅವರ ಅವಶ್ಯಕತೆ ಇತ್ತು, ಮುಂದೆಯೂ ಅವರ ಮಾರ್ಗದರ್ಶನ ನಮಗೆ ಅಗತ್ಯವಿದೆ” ಎಂದು ಎಂ.ಬಿ. ಪಾಟೀಲ ಹೇಳಿದರು.
ಯತ್ನಾಳ ವಿರುದ್ಧ ಎಂ.ಬಿ. ಪಾಟೀಲ ವಾಗ್ದಾಳಿ
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿದ ಸಚಿವರು, “ಬಾಯಿಗೆ ಬಂದಂತೆ ಮಾತನಾಡುವ ರೋಗ ಯತ್ನಾಳ ಅವರನ್ನು ಕಾಡುತ್ತಿದೆ. ಅವರ ಬಗ್ಗೆ ಇನ್ನೂ ಕೀಳುಮಟ್ಟದಲ್ಲಿ ಟೀಕೆ ಮಾಡಬಹುದು. ಆದರೆ ಅದು ನನ್ನ ಸಂಸ್ಕೃತಿಯಲ್ಲ” ಎಂದು ಹೇಳಿದರು.
ಸಿದ್ದರಾಮಯ್ಯ ಅವರನ್ನು ವಿರೋಧಿಸಿ ತಾವು, ಸಚಿವ ಸತೀಶ ಜಾರಕಿಹೊಳಿ ಹಾಗೂ ಜಮೀರ್ ಅಹ್ಮದ್ ಅವರು ಸಹಿ ಹಾಕಿದ್ದೇವೆ ಎಂಬ ಯತ್ನಾಳ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ಯಾವುದೇ ತಲೆಬುಡವಿಲ್ಲ. ಆ ರೀತಿಯ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ ಎಂದರು.
“ಯತ್ನಾಳ ಅವರಿಗೆ ನಾಲಿಗೆಗೂ ಮೆದುಳಿಗೂ ಸಂಪರ್ಕವಿಲ್ಲ. ಅವರು ಹಿಂದೆ ನಮಾಜ್ ಟೋಪಿ ಹಾಕಿಕೊಂಡು, ಶಿರ್ಖುರ್ಮಾ ಸೇವಿಸಿ ಈಗ ಹಿಂದೂತ್ವದ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಟೀಕಿಸಿದರು.
ಯತ್ನಾಳ ಅವರು ಹಿಂದೆ ವಿಧಾನ ಪರಿಷತ್ ಸದಸ್ಯರಾಗಲು ತಾವು ಬೆಂಬಲ ನೀಡಿದ್ದಾಗಿ ಹೇಳಿದ ಎಂ.ಬಿ. ಪಾಟೀಲ, ನಂತರ ಅವರು ಯಡಿಯೂರಪ್ಪ ಅವರ ಬೆಂಬಲ ಪಡೆದು ಬಿಜೆಪಿ ಸೇರಿದರು. ಅವರು ಬಿಜೆಪಿ ಸೇರುವಲ್ಲಿ ಯಡಿಯೂರಪ್ಪ ಅವರ ಪಾತ್ರವಿತ್ತು ಎಂದು ಹೇಳಿದರು.
“ಯತ್ನಾಳ ಅವರ ಹೊಗಳಿಕೆಯ ಸರ್ಟಿಫಿಕೇಟ್ ನನಗೆ ಅಗತ್ಯವಿಲ್ಲ. ಸಿದ್ದೇಶ್ವರ ಸ್ವಾಮೀಜಿ ಅವರೇ ನನಗೆ ಸರ್ಟಿಫಿಕೇಟ್ ನೀಡಿದ್ದಾರೆ. ಪ್ರಾಣಿ–ಪಕ್ಷಿಗಳೂ ನನಗೆ ಆಶೀರ್ವಾದ ನೀಡುತ್ತಿವೆ. ಹೀಗಿರುವಾಗ ಯತ್ನಾಳ ಅವರಿಂದ ಹೊಗಳಿಸಿಕೊಳ್ಳುವ ಅಗತ್ಯ ನನಗಿಲ್ಲ” ಎಂದು ಸಚಿವರು ವ್ಯಂಗ್ಯವಾಡಿದರು.
ಯತ್ನಾಳ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸುವ ಸಂದರ್ಭದಲ್ಲಿ ತಾವು ಬೆಂಬಲಿಸಿದ್ದೆ. ಆದರೆ ಅವರು ಬಿಜೆಪಿ ಸೇರಿದ ಬಳಿಕ ಅವರ ಪರವಾಗಿ ತಾವು ಎಂದಿಗೂ ರಾಜಕೀಯವಾಗಿ ಬೆಂಬಲ ನೀಡಿಲ್ಲ. ಯತ್ನಾಳ ಅವರ ಕಾರಣದಿಂದಲೇ ತಾವು ಹಲವು ರೀತಿಯ ಅಪಪ್ರಚಾರವನ್ನು ಎದುರಿಸಬೇಕಾಯಿತು ಎಂದು ಹೇಳಿದರು.
ಸಂಘ ಪರಿವಾರದ ವಿರುದ್ಧವೂ ಟೀಕೆ
ಸಂಘ ಪರಿವಾರದವರು ತಮ್ಮ ಕೇಂದ್ರ ಕಚೇರಿಯಲ್ಲಿಯೇ ತ್ರಿವರ್ಣ ಧ್ವಜ ಹಾರಿಸಿಲ್ಲ ಎಂದು ಆರೋಪಿಸಿದ ಸಚಿವರು, ಈ ವಿಷಯವನ್ನೂ ಯತ್ನಾಳ ಅವರು ಪ್ರಶ್ನಿಸಲಿ ಎಂದು ಹೇಳಿದರು.
ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಶತಸಿದ್ಧ ಎಂದು ಎಂ.ಬಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಟಿಕೆಟ್ ಸಿಗದ ಪರಿಸ್ಥಿತಿಯಲ್ಲಿ ಯತ್ನಾಳ ಅವರು ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಬ್ಲ್ಯಾಕ್ಮೇಲ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, “ಜೆಸಿಬಿ ಪಕ್ಷ ಸ್ಥಾಪಿಸಿ ಎಲ್ಲ ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇನೆ” ಎಂಬ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಗಣೇಶ ಮೂರ್ತಿಗಳ ವಿಸರ್ಜನೆಗೆ ಶಾಶ್ವತ ಹೊಂಡ
ವಿಜಯಪುರ ನಗರದ ಐತಿಹಾಸಿಕ ತಾಜ್ ಬಾವಡಿ ಸಂರಕ್ಷಣೆ ಹಾಗೂ ಪುನರುಜ್ಜೀವನ ಕಾಮಗಾರಿಯ ಹಿನ್ನೆಲೆಯಲ್ಲಿ ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಸಂಸ್ಥೆಯ ₹19 ಕೋಟಿ ಸಿಎಸ್ಆರ್ ಅನುದಾನದಡಿ ತಾಜ್ ಬಾವಡಿ ಸಂರಕ್ಷಣೆ ಮತ್ತು ಪುನರುಜ್ಜೀವನ ಕಾಮಗಾರಿ ಕೈಗೊಳ್ಳಲಾಗಿದೆ. ಈ ಪೈಕಿ ₹9 ಕೋಟಿ ಅನುದಾನ ಬಿಡುಗಡೆಯಾಗಿದೆ.
ತಾಜ್ ಬಾವಡಿ ಪುನರುಜ್ಜೀವನಗೊಂಡಿರುವುದರಿಂದ ಅದರ ಸಂರಕ್ಷಣೆಯ ದೃಷ್ಟಿಯಿಂದ ಇನ್ನು ಮುಂದೆ ಅಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡುವುದು ಸೂಕ್ತವಲ್ಲ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ತಾಜ್ ಬಾವಡಿಯ ಹೊರಭಾಗದಲ್ಲಿ ವಿಸರ್ಜನಾ ಹೊಂಡ ನಿರ್ಮಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಹಾಗೂ ಗಣೇಶ ಮಂಡಳಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದಲ್ಲದೆ, ವಿಜಯಪುರದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಜಿಲ್ಲಾ ಕೇಂದ್ರ ಕಾರಾಗೃಹದ ವಿಶಾಲ ಆವರಣದಲ್ಲಿ ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೆಗಾಗಿ ಶಾಶ್ವತ ಹೊಂಡ ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಈ ವ್ಯವಸ್ಥೆಯನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಬರ ಪರಿಸ್ಥಿತಿ:
ಸಂಪುಟದಲ್ಲಿ ಪ್ರಬಲ ಪ್ರತಿಪಾದನೆ
ವಿಜಯಪುರ ಜಿಲ್ಲೆಯಲ್ಲಿ ವ್ಯಾಪಕ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸಭೆಯಲ್ಲಿಯೂ ಈ ವಿಚಾರವನ್ನು ತಾವು ಪ್ರಬಲವಾಗಿ ಪ್ರತಿಪಾದಿಸಿರುವುದಾಗಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.
ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆ ಕೊರತೆ, ಕೃಷಿ ಚಟುವಟಿಕೆಗಳ ಮೇಲೆ ಉಂಟಾಗಿರುವ ಪರಿಣಾಮ ಹಾಗೂ ರೈತರ ಸಂಕಷ್ಟದ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ವಿಜಯಪುರ ಜಿಲ್ಲೆಯ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಸಚಿವ ಸಂಪುಟದಲ್ಲಿ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು.
ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಆಧಾರದ ಮೇಲೆಯೇ ಬರ ಘೋಷಣೆ ಮಾಡಬೇಕಾಗುತ್ತದೆ. ಬರ ಪರಿಸ್ಥಿತಿ ನಿರ್ಧರಿಸುವ ಪ್ರಕ್ರಿಯೆಯಲ್ಲಿ ಉಪಗ್ರಹ ಆಧಾರಿತ ಮಾಹಿತಿಯನ್ನೂ ಪರಿಗಣಿಸಲಾಗುತ್ತಿದೆ. ಸರ್ಕಾರವು ನಿಗದಿತ ಮಾನದಂಡಗಳ ಪ್ರಕಾರ ಪ್ರಕ್ರಿಯೆ ನಡೆಸುತ್ತಿದೆ ಎಂದು ಸಚಿವರು ವಿವರಿಸಿದರು.
ವಿಜಯಪುರ ಜಿಲ್ಲೆಯಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಬರದಿಂದಾಗಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಚರ್ಚಿಸಲಾಗುತ್ತಿದೆ ಎಂದು ಎಂ.ಬಿ. ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲೆಯ ರಾಜಕೀಯ ಬೆಳವಣಿಗೆಗಳು, ಮುಂದಿನ ಚುನಾವಣೆಯ ಕಾರ್ಯತಂತ್ರ, ಗಣೇಶೋತ್ಸವದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಬರ ಪರಿಸ್ಥಿತಿ ಸೇರಿದಂತೆ ಹಲವು ವಿಷಯಗಳ ಕುರಿತು ಸಚಿವರು ಮಾತನಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande