
ವಿಜಯಪುರ, 14 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಎತ್ತಿನ ನೇಗಿಲಿನಿಂದ ಕೃಷಿ ಮಾಡುವ ಮೂಲಕ ಮಣ್ಣು, ಪರಿಸರ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಕೊಡುಗೆ ನೀಡುತ್ತಿರುವ ಜೋಡೆತ್ತಿನ ರೈತರನ್ನು ‘ದೇವರು ಮೆಚ್ಚುವ ನೇಗಿಲಯೋಗಿಗಳು’ ಎಂದು ಗುರುತಿಸಿ ಗೌರವಿಸುವ ಕಾರ್ಯಕ್ರಮ ಬಸವನಬಾಗೇವಾಡಿ ತಾಲೂಕಿನ ನಂದಿಹಾಳ ಪಿ.ಯು. ಗ್ರಾಮದಲ್ಲಿ ನಡೆಯಿತು.
ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಪ್ರೇರಣೆಯಿಂದ ಕೃಷಿ ಪದವೀಧರರು ಆರಂಭಿಸಿರುವ ನಂದಿ ಕೂಗು ಅಭಿಯಾನದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮದ ಜೋಡೆತ್ತಿನ ಕೃಷಿಕರಿಗೆ ಅಭಿನಂದನಾ ಪತ್ರ ನೀಡಿ ಸತ್ಕರಿಸುವ ಮೂಲಕ ಸಾಂಪ್ರದಾಯಿಕ ಕೃಷಿ ಪದ್ಧತಿಯ ಮಹತ್ವವನ್ನು ಸಾರಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಂದಿ ಕೂಗು ಅಭಿಯಾನದ ರೂವಾರಿಗಳಾದ ಬಸವರಾಜ ಎನ್. ಬಿರಾದಾರ, ಎತ್ತಿನ ನೇಗಿಲಿನಿಂದ ಉಳುಮೆ ಮಾಡುವ ರೈತರು ಕೇವಲ ಕೃಷಿಕರಲ್ಲ, ಪಂಚ ಮಹಾಭೂತಗಳ ಸಂರಕ್ಷಣೆಯೊಂದಿಗೆ ನಾಗರಿಕತೆಯ ವಿಕಾಸಕ್ಕೆ ಕಾರಣರಾದ ‘ನೇಗಿಲಯೋಗಿಗಳು’ ಎಂದು ಬಣ್ಣಿಸಿದರು.
ಎತ್ತಿನ ಕೃಷಿಕರ ಕೊಡುಗೆಯನ್ನು ನಿರ್ಲಕ್ಷಿಸಿ ರೂಪಿಸಲಾಗುತ್ತಿರುವ ವಿವಿಧ ಯೋಜನೆಗಳ ಪರಿಣಾಮವಾಗಿ ಮಣ್ಣಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಸ್ವಾತಂತ್ರ್ಯ ಪೂರ್ವದಲ್ಲಿ ಮಣ್ಣಿನ ಸರಾಸರಿ ಸಾವಯವ ಇಂಗಾಲದ ಪ್ರಮಾಣ ಸುಮಾರು ಶೇ.1ರಷ್ಟಿತ್ತು. ಅದು ಈಗ ಶೇ.0.33ಕ್ಕೆ ಕುಸಿದಿದೆ ಎಂದು ಅವರು ಉಲ್ಲೇಖಿಸಿದರು.
ಮಣ್ಣಿನ ಫಲವತ್ತತೆ ಕುಸಿತ, ಹವಾಮಾನ ವೈಪರೀತ್ಯ ಹಾಗೂ ಪ್ರಕೃತಿ ವಿಕೋಪಗಳ ಹೆಚ್ಚಳದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಕೃಷಿ ಜ್ಞಾನ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳ ಸಂರಕ್ಷಣೆ ಅತ್ಯಗತ್ಯವಾಗಿದೆ ಎಂದರು.
ಜೋಡೆತ್ತಿನ ಕೃಷಿಕರಿಂದ ವಿಕಾಸಗೊಂಡಿರುವ ಬಯಲುಸೀಮೆಯ ಗ್ರಾಮೀಣ ಬದುಕನ್ನು ಅದೇ ಕೃಷಿ ಸಂಸ್ಕೃತಿಯ ಮೂಲಕ ಉಳಿಸಿಕೊಳ್ಳಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು. ಜೋಡೆತ್ತಿನ ಕೃಷಿಕರು ಸಂಪೂರ್ಣವಾಗಿ ಕೃಷಿಯಿಂದ ದೂರವಾದರೆ ಮುಂದಿನ ದಿನಗಳಲ್ಲಿ ಗ್ರಾಮೀಣ ಆರ್ಥಿಕತೆ, ಮಣ್ಣಿನ ಆರೋಗ್ಯ ಮತ್ತು ಸ್ವಾವಲಂಬನೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನಕ್ಕೆ ಕಾನೂನು ಜಾರಿಗೆ ಆಗ್ರಹ
ನಂದಿಹಾಳ ಗ್ರಾಮದ ಹಿರಿಯರಾದ ಬಸವರಾಜ ಮನಗೂಳಿ ಮಾತನಾಡಿ, ನಂದಿ ಕೃಷಿ ಸಂಸ್ಕೃತಿಯ ಪುನಶ್ಚೇತನಕ್ಕಾಗಿ ಬಯಲುಸೀಮೆಯ ಗ್ರಾಮಗಳ ಎಲ್ಲ ಸಮಾಜಗಳ ಜನರು ಒಗ್ಗೂಡಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಹೆಸರಿನಲ್ಲಿ ‘ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನ ಕಾನೂನು’ ಜಾರಿಗೆ ತರಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟರು. ರಾಜ್ಯದ ಬಜೆಟ್ನಲ್ಲಿ ಶೇ.10ರಷ್ಟು ಅನುದಾನವನ್ನು ಈ ಉದ್ದೇಶಕ್ಕೆ ಮೀಸಲಿಟ್ಟು, ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ₹11,000 ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಇದರೊಂದಿಗೆ ನಂದಿ ಆಧಾರಿತ ವಿದ್ಯುತ್, ಗ್ಯಾಸ್, ಅಡುಗೆ ಎಣ್ಣೆ, ಔಷಧಿ, ಗೊಬ್ಬರ ಹಾಗೂ ಗುಣಮಟ್ಟದ ಆಹಾರ ಉತ್ಪಾದನೆಗೆ ಪ್ರೋತ್ಸಾಹ ನೀಡುವ ಯೋಜನೆಗಳನ್ನು ರೂಪಿಸಬೇಕು ಎಂಬುದು ಕಾನೂನಿನ ಉದ್ದೇಶವಾಗಬೇಕು ಎಂದು ತಿಳಿಸಿದರು.
ಈ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲು ನಂದಿಹಾಳ ಗ್ರಾಮದಿಂದ ಕನಿಷ್ಠ 50 ಎತ್ತಿನ ಬಂಡಿಗಳ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ, ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನ ಕಾನೂನು ಜಾರಿಗೆ ಆಗ್ರಹಿಸಿ ಮುಖ್ಯಮಂತ್ರಿ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸುವುದಾಗಿ ಬಸವರಾಜ ಮನಗೂಳಿ ತಿಳಿಸಿದರು.
ಗ್ರಾಮಗಳ ಸ್ವಾವಲಂಬನೆಗೆ ಜೋಡೆತ್ತಿನ ಕೃಷಿ ಅಗತ್ಯ
ನಿವೃತ್ತ ಕೃಷಿ ವಿಸ್ತರಣಾ ನಿರ್ದೇಶಕರಾದ ಡಾ. ಆರ್.ಬಿ. ಬೆಳ್ಳಿ ಮಾತನಾಡಿ, ಜೋಡೆತ್ತಿನ ಕೃಷಿಕರ ಸಂಖ್ಯೆಯನ್ನು ಹೆಚ್ಚಿಸಿ ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಸಮಗ್ರ ಪ್ರಯತ್ನಗಳು ನಡೆಯದಿದ್ದರೆ ಮುಂಬರುವ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಂದ ಜನರು ವಲಸೆ ಹೋಗುವ ಪರಿಸ್ಥಿತಿ ಎದುರಾಗಬಹುದು ಎಂದು ಹೇಳಿದರು.
ಸಾಂಪ್ರದಾಯಿಕ ಕೃಷಿ ಪದ್ಧತಿಗಳಲ್ಲಿ ಅಡಗಿರುವ ಜ್ಞಾನವನ್ನು ಆಧುನಿಕ ಕೃಷಿ ವಿಜ್ಞಾನದೊಂದಿಗೆ ಸಮನ್ವಯಗೊಳಿಸುವ ಅಗತ್ಯವಿದೆ. ರೈತರು, ಕೃಷಿ ತಜ್ಞರು, ಸರ್ಕಾರ ಹಾಗೂ ಸಮಾಜ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಸಾಧ್ಯ ಎಂದರು.
ನಂದಿ ಸಂತತಿ ಹೆಚ್ಚಿಸಲು ಸಂಕಲ್ಪ
ಶ್ರೀ ಕೊಡೇಕಲ್ ಬಸವೇಶ್ವರ ದೇವಸ್ಥಾನದ ಪೀಠಾಧಿಪತಿಗಳಾದ ಶ್ರೀ ಸಂಗಯ್ಯ ಸ್ವಾಮೀಜಿ ಮಾತನಾಡಿ, ನಂದಿ ಆಗಮ ಲೀಲೆ ಎಂಬ ಪುರಾಣ ಮಂಗಳವಾಗುವ ದಿನದಂದು ಗ್ರಾಮದ ಜೋಡೆತ್ತಿನ ಕೃಷಿಕರು ಒಂದಾಗಿ ನಂದಿ ಸಂತತಿ ಹೆಚ್ಚಿಸುವ ಕಾನೂನು ಜಾರಿಗೆ ತರಲು ಸಂಕಲ್ಪ ಮಾಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಜೋಡೆತ್ತುಗಳು ಗ್ರಾಮೀಣ ಕೃಷಿ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು, ಅವುಗಳ ಸಂರಕ್ಷಣೆ ಹಾಗೂ ಕೃಷಿಕರ ಗೌರವವನ್ನು ಕಾಪಾಡುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಓಂ ಶಾಂತಿಯ ಬಿ.ಕೆ. ಸುವರ್ಣಾ ಅಕ್ಕನವರು, ಡಾ. ಶ್ರೀಶೈಲ ಗೋಟ್ಯಾಳ, ಡಾ. ಸುಭಾಸ ಅಸ್ಕಿ, ಅರವಿಂದ ಕವಲಗಿ, ಉಮೇಶ ಕೌಲಗಿ, ಅಮರೇಶ ಭೈರಗೊಂಡ, ಅಭಿಷೇಕ ಬಿರಾದಾರ, ಮಲ್ಲು ದೊಡ್ಡಮನಿ, ವಿಶ್ವನಾಥ ಮನಗೂಳಿ, ಮಲ್ಲು ಶಿವರಾಯಗೊಳ, ಧರೆಪ್ಪ ಅವರಸಂಗ, ಬಸು ಜೋಗಿ, ಹೊನ್ನಪ್ಪ ಹಿರೆಕುರುಬರ, ಕಾಂತು ಕರಡಿ, ಪರಸು ಕರಭಂಟನಾಳ, ಕುಮಾರ ಕೋಳೂರ, ಸಂಗಪ್ಪ ಬೆಂಕಿ, ಮಲ್ಲಪ್ಪ ಕುಮಸಿ ಸೇರಿದಂತೆ ಗ್ರಾಮಸ್ಥರು, ರೈತರು ಹಾಗೂ ಅಭಿಯಾನದ ಕಾರ್ಯಕರ್ತರು ಉಪಸ್ಥಿತರಿದ್ದರು.
ಜೋಡೆತ್ತಿನ ಕೃಷಿಕರನ್ನು ಗೌರವಿಸುವ ಮೂಲಕ ಅವರ ಕೃಷಿ ಸೇವೆಗೆ ಮಾನ್ಯತೆ ನೀಡುವುದರ ಜೊತೆಗೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಮಣ್ಣಿನ ಫಲವತ್ತತೆ ಹಾಗೂ ಗ್ರಾಮೀಣ ಸ್ವಾವಲಂಬನೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ನಡೆದಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande