
ಬೆಂಗಳೂರು, 14 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ವಿರೋಧ ಪಕ್ಷದ ನಾಯಕರು ಮನೆಯಲ್ಲಿ ಮೀನು ಸೇವಿಸಿದರೆ ಸನಾತನ ಧರ್ಮಕ್ಕೆ ಅಪಾಯ ಬಂದಿದೆ ಎಂದು ಆರೋಪಿಸುವ ಬಿಜೆಪಿ, ಬಿಜೆಪಿ ಮುಖ್ಯಮಂತ್ರಿಯೊಬ್ಬರು ದೇವಸ್ಥಾನದೊಳಗೆ ಮೀನು ಸೇವಿಸಿದಾಗ ಅದನ್ನು ಸಂಪ್ರದಾಯ ಎಂದು ಸಮರ್ಥಿಸಿಕೊಳ್ಳುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹೇಳಿಕೆ ನೀಡಿರುವ ಅವರು, ಮೀನು ಒಂದೇ, ನಂಬಿಕೆ ಒಂದೇ; ಬದಲಾಗಿರುವುದು ರಾಜಕೀಯ ಪಕ್ಷ ಮಾತ್ರ ಎಂದು ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ಮೀನು ಸೇವನೆಯ ವಿಚಾರದಲ್ಲಿ ಬಿಜೆಪಿ ವ್ಯಕ್ತಪಡಿಸಿದ್ದ ಆಕ್ರೋಶ ಹಾಗೂ ನೀಡಿದ್ದ ಉಪದೇಶಗಳು ಈಗ ಎಲ್ಲಿಗೆ ಹೋದವು ಎಂದು ಪ್ರಶ್ನಿಸಿರುವ ಹರಿಪ್ರಸಾದ್, ಇದು ಎಂದಿಗೂ ಮೀನು ಅಥವಾ ಧರ್ಮದ ವಿಚಾರವಾಗಿರಲಿಲ್ಲ. ರಾಜಕೀಯ ಲಾಭಕ್ಕೆ ತಕ್ಕಂತೆ ಧರ್ಮವನ್ನು ಬಳಸಿಕೊಳ್ಳುವವರ ದ್ವಂದ್ವ ನೀತಿಯೇ ಇದರ ಹಿಂದಿದೆ ಎಂದು ಟೀಕಿಸಿದ್ದಾರೆ.
ಧರ್ಮವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಬಾರದು. ನಂಬಿಕೆ ಯಾರೊಬ್ಬರ ಖಾಸಗಿ ಸ್ವತ್ತಲ್ಲ. ಸನಾತನ ಧರ್ಮಕ್ಕೆ ಬಿಜೆಪಿಯ ರಕ್ಷಣೆಯ ಪ್ರಮಾಣಪತ್ರದ ಅಗತ್ಯವೂ ಇಲ್ಲ ಎಂದು ಅವರು ಹೇಳಿದ್ದಾರೆ.
ಆಯ್ದ ವಿಚಾರಗಳ ಮೇಲೆ ಮಾತ್ರ ಆಕ್ರೋಶ ವ್ಯಕ್ತಪಡಿಸುವುದನ್ನು ನಿಲ್ಲಿಸಬೇಕು. ಎಲ್ಲರಿಗೂ ಒಂದೇ ಮಾನದಂಡ ಅನ್ವಯಿಸಬೇಕು. ಇಲ್ಲವಾದರೆ ಈ ವಿಚಾರ ಧರ್ಮದ ಬಗ್ಗೆ ಅಲ್ಲ, ಕೇವಲ ರಾಜಕೀಯದ ಬಗ್ಗೆ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಬಿ.ಕೆ. ಹರಿಪ್ರಸಾದ್ ಬಿಜೆಪಿಯನ್ನು ಟೀಕಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.