
ಬೆಂಗಳೂರು, 14 ಸೆಪ್ಟೆಂಬರ್ (ಹಿ.ಸ.)
ಗಣೇಶ ಹಬ್ಬದ ದಿನ ಮಗನ ಹೆಸರು ರಿವೀಲ್ ಮಾಡಿದ ನಟ ಡಾಲಿ ಧನಂಜಯ್
ತಮ್ಮ ಮಗನಿಗೆ ಡಾಲಿ ಧನಂಜಯ್ ಹಾಗೂ ಅವರ ಪತ್ನಿ “ಎರೆಯ” ಎಂದು ಹೆಸರಿಟ್ಟಿದ್ದಾರೆ.
ಗೌರಿ-ಗಣೇಶ ಹಬ್ಬದ ಸಂಭ್ರಮದ ನಡುವೆ ನಟ ಡಾಲಿ ಧನಂಜಯ್ ತಮ್ಮ ಮಗನ ಹೆಸರನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ವಿಶೇಷ ಅಂದರೆ, ಕರ್ನಾಟಕದ ನಕ್ಷೆಯ ಮಧ್ಯದಲ್ಲಿ ಮಗನ ಹೆಸರಿರುವ ವಿಶೇಷ ಡಾಲರ್ ಮಾಡಿಸಿ, ಅದನ್ನು ತೋರಿಸುವ ಮೂಲಕ ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ.
ಈ ಹೆಸರಿನ ಹಿಂದೆ ಕೂಡ ಒಂದು ಸುಂದರವಾದ ಅರ್ಥ ಮತ್ತು ಐತಿಹಾಸಿಕ ಹಿನ್ನೆಲೆ ಇದೆ.
“ಎರೆಯ” ಎಂಬುದು ಪುರಾತನ ಕನ್ನಡ ಪರಂಪರೆಯ ಗೌರವಪೂರ್ಣ ಪದ.
ಇದರ ಅರ್ಥ ಒಡೆಯ, ಸ್ವಾಮಿ, ಅಧಿಪತಿ ಎಂಬುದು.
ಅಷ್ಟೇ ಅಲ್ಲ, ಇತಿಹಾಸದ ಪುಟಗಳಲ್ಲೂ ಈ ಹೆಸರು ವಿಶೇಷ ಸ್ಥಾನ ಪಡೆದಿದೆ.
ಚಾಲುಕ್ಯರ ಪ್ರಸಿದ್ಧ ಮಹಾರಾಜ ಇಮ್ಮಡಿ ಪುಲಕೇಶಿ ಅವರ ಬಾಲ್ಯದ ಹೆಸರೂ “ಎರೆಯ” ಎಂದು ಉಲ್ಲೇಖಿಸಲಾಗುತ್ತದೆ.
ಇಂತಹ ಪಾರಂಪರಿಕ ಹಾಗೂ ಶಕ್ತಿಯುತ ಅರ್ಥವನ್ನು ಹೊಂದಿರುವ ಹೆಸರನ್ನೇ ತಮ್ಮ ಪುಟ್ಟ ಮಗನಿಗೆ ಇಟ್ಟಿದ್ದಾರೆ ಡಾಲಿ ಧನಂಜಯ್.
ಮಗನನ್ನು ಯಾವಾಗ ಪರಿಚಯಿಸುತ್ತೀರಿ?
ಮಗನ ಹೆಸರು ಏನು? ಎಂದು ಅಭಿಮಾನಿಗಳು, ಅವರನ್ನು ಪ್ರೀತಿಸುವವರು ಹಲವು ದಿನಗಳಿಂದ ಕೇಳುತ್ತಲೇ ಇದ್ದರು.
ಅದಕ್ಕೆ ಉತ್ತರವಾಗಿ, ಈ ವಿಶೇಷ ಹಬ್ಬದ ದಿನವೇ ತಮ್ಮ ಮಗನನ್ನು ಹೆಸರಿನ ಮೂಲಕ ಪರಿಚಯಿಸಿದ್ದಾರೆ ಡಾಲಿ ಧನಂಜಯ್.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.