
ಯಾದಗಿರಿ, 13 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ನವಿಲುಗಳನ್ನು ಬೇಟೆಯಾಡಿ ಸ್ಥಳದಲ್ಲೇ ಮಾಂಸ ಬೇಯಿಸಲು ಸಿದ್ಧತೆ ಮಾಡಿಕೊಂಡಿದ್ದ ಆರೋಪದ ಮೇಲೆ ಏಳು ಮಂದಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಹತ್ತಿಕುಣಿ ಅರಣ್ಯ ಪ್ರದೇಶದ ಸರ್ವೇ ನಂ.30ರ ಮೋಟ್ನಳ್ಳಿ–ಬಗ್ಗಲುಮಡು ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಆರ್ಎಫ್ಒ ಬುರಾನುದ್ಧಿನ್ ಹಾಗೂ ಮಂಜುನಾಥ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದೆ.
ದಾಳಿ ವೇಳೆ 6 ನಾಡ ಬಂದೂಕು, 2 ಬ್ಯಾಟರಿ, ಕೊಡಲಿ ಹಾಗೂ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಬೇಟೆಯಾಡಿದ್ದ 2 ನವಿಲುಗಳ ಮಾಂಸ, 12 ಜೀವಂತ ಏಡಿಗಳು, 2 ಜೀವಂತ ಆಮೆಗಳು ಹಾಗೂ ಅಡುಗೆ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತರನ್ನು ಕಲಬುರಗಿ ಜಿಲ್ಲೆಯ ಭೀಮನಹಳ್ಳಿ ಹಾಗೂ ಅಲ್ಲೂರು ಗ್ರಾಮದ ನಿವಾಸಿಗಳಾದ ನಿಂಗಪ್ಪ, ಮಲ್ಲಪ್ಪ, ಕಾಂತಪ್ಪ, ಬಸವರಾಜ, ವಾಸುದೇವ, ಕರಿಯಪ್ಪ ಹಾಗೂ ಯಲ್ಲಾಲಿಂಗ ಎಂದು ಗುರುತಿಸಲಾಗಿದೆ.
ಅರಣ್ಯಾಧಿಕಾರಿಗಳ ಹೇಳಿಕೆ: ಆರೋಪಿಗಳು ಅರಣ್ಯ ಪ್ರದೇಶದಲ್ಲಿ ನಾಡ ಬಂದೂಕು ಬಳಸಿ ವನ್ಯಜೀವಿಗಳನ್ನು ಬೇಟೆಯಾಡಿ, ಸ್ಥಳದಲ್ಲೇ ಅಡುಗೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಬೇಟೆಗೆ ಬಳಸಿದ ಸಾಮಗ್ರಿಗಳು ಹಾಗೂ ವನ್ಯಜೀವಿಗಳ ಅವಶೇಷಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R