ದುನಿಯಾ ವಿಜಯ್ ನಿರ್ದೇಶನದ ಸಿಟಿಲೈಟ್ಸ್ ಚಿತ್ರದ ಟ್ರೇಲರ್ ಬಿಡುಗಡೆ
ಬೆಂಗಳೂರು, 13 ಸೆಪ್ಟೆಂಬರ್ (ಹಿ.ಸ.): ದುನಿಯಾ ವಿಜಯ್ ನಿರ್ದೇಶನದ ಸಿಟಿಲೈಟ್ಸ್ ಚಿತ್ರದ ಟ್ರೇಲರ್ ಬಿಡುಗಡೆ ವಿನಯ್ ರಾಜ್‌ಕುಮಾರ್-ಮೋನಿಷಾ ನಟನೆಯ ''ಸಿಟಿಲೈಟ್ಸ್''ಗೆ ಶಿವರಾಜ್ ಕುಮಾರ್ ಬೆಂಬಲ ಸ್ಯಾಂಡಲ್‌ವುಡ್ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಸಿನಿಮಾದ ಟ್ರೇಲರ್
ಚಿತ್ರ ತಂಡ


ಬೆಂಗಳೂರು, 13 ಸೆಪ್ಟೆಂಬರ್ (ಹಿ.ಸ.):

ದುನಿಯಾ ವಿಜಯ್ ನಿರ್ದೇಶನದ ಸಿಟಿಲೈಟ್ಸ್ ಚಿತ್ರದ ಟ್ರೇಲರ್ ಬಿಡುಗಡೆ

ವಿನಯ್ ರಾಜ್‌ಕುಮಾರ್-ಮೋನಿಷಾ ನಟನೆಯ 'ಸಿಟಿಲೈಟ್ಸ್'ಗೆ ಶಿವರಾಜ್ ಕುಮಾರ್ ಬೆಂಬಲ

ಸ್ಯಾಂಡಲ್‌ವುಡ್ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ದುನಿಯಾ ವಿಜಯ್ ಪುತ್ರಿ ಮೋನಿಷಾ ಹಾಗೂ ವಿನಯ್ ರಾಜ್​ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿಟಿಲೈಟ್ಸ್ ಟ್ರೇಲರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಿಲೀಸ್ ಮಾಡಿದರು. ಸೆಪ್ಟೆಂಬರ್ 18ಕ್ಕೆ ಸಿನಿಮಾ ಬಿಡುಗಡೆ ಆಗಲಿದ್ದು ಸಿನಿಮಾದ ಕಥಾಹಂದರ ಏನು ಎಂಬುದರ ಝಲಕ್ ಈ ಟ್ರೇಲರ್​ನಲ್ಲಿ ಕಾಣಿಸಿದೆ.

ಸಿನಿಮಾದ ಟ್ರೈಲರ್ ನೋಡ್ತಿದ್ರೆ ಗೊತ್ತಾಗುತ್ತೆ ಇದು ದುನಿಯಾ ವಿಜಯ್ ಫ್ಲೇವರ್‌ನ ಸಿನಿಮಾ ಎನ್ನುವುದು. ಪಕ್ಕಾ ಮಾಸ್, ಕ್ರೈಮ್, ರಕ್ತ ಸಿಟಿಲೈಟ್ಸ್ ನಲ್ಲೂ ಇದೆ. ವಿನಯ್ ಸಿಕ್ಕಾಪಟ್ಟೆ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಲಾಂಗ್ ಹಿಡಿದು ಅಬ್ಬರಿಸಿದ್ದಾರೆ.

ಇನ್ನೂ ವಿಶೇಷ ಎಂದರೆ ಈ ಸಿನಿಮಾ ಮೂಲಕ ವಿನಯ್ ಅವರಿಗೆ ಹೊಸ ಟೈಟಲ್ ಸಿಕ್ಕಿದೆ. 'ಸ್ಯಾಂಡಲ್ ಮಯೂರ' ಎನ್ನುವ ಬಿರುದನ್ನು ನೀಡಲಾಗಿದೆ. ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಶಿವರಾಜ್​ಕುಮಾರ್, ‘ಭೂಗತ ಜಗತ್ತಿನ ಸಿನಿಮಾ ಎಂದರೆ ಶಿವಣ್ಣ ನೆನಪಾಗ್ತಾರೆ ಅಂತ ಹೇಳುತ್ತಾರೆ. ಇನ್ಮೇಲೆ ಶಿವಣ್ಣ ಜೊತೆಗೆ ವಿನಯ್ ಕೂಡ ನೆನಪಾಗುತ್ತಾನೆ. ನನ್ನ ತಮ್ಮನ ಮಗ ಎಂಬ ಕಾರಣಕ್ಕೆ ನಾನು ಬೆಂಬಲ ನೀಡುತ್ತಿಲ್ಲ. ಅವನಲ್ಲಿ ಪ್ರತಿಭೆ ಇದೆ. ನಾನು ಈ ಸಿನಿಮಾಗಾಗಿ ಕಾಯುತ್ತಿದ್ದೇನೆ. ಖಂಡಿತವಾಗಿಯೂ ಈ ಚಿತ್ರ ಹಿಟ್ ಆಗುತ್ತದೆ. ಮಾಸ್ತಿ ಅವರ ಸಂಭಾಷಣೆ ಚೆನ್ನಾಗಿದೆ. ವಿಜಯ್ ಅವರು ಸಲಗ ಚಿತ್ರದಿಂದ, ಭೀಮ ಚಿತ್ರದಿಂದ ಸಿಟಿ ಲೈಟ್ಸ್ ತನಕ ತಾಂತ್ರಿಕವಾಗಿ ತುಂಬ ಚೆನ್ನಾಗಿ ಸಿನಿಮಾ ಮಾಡುತ್ತಾ ಬಂದಿದ್ದಾರೆ. ಹೊಸಬರಿಗೆ ಅವಕಾಶ ಕೊಡುತ್ತಿರುವುದು ನನಗೆ ಹೆಚ್ಚು ಖುಷಿ ನೀಡುತ್ತಿದೆ. ಇಂಥ ಒಳ್ಳೆಯ ಸಿನಿಮಾ ಮಾಡಿದ್ದಕ್ಕೆ ಧನ್ಯವಾದಗಳು’ ಎಂದರು.

ಗೀತಾ ಶಿವರಾಜ್ ಕುಮಾರ್ ಮಾತನಾಡಿ, 'ಈ 'ಟ್ರೈಲರ್ ನೋಡಿದ್ರೆ ಓಂ ಸಿನಿಮಾ ರೀತಿ ಆಗುತ್ತೆ ಅಂತ ನನಗೆ ಅನಿಸುತ್ತದೆ. ವಿನಯ್​ನ ಈ ಸಿನಿಮಾದಲ್ಲಿ ಬೇರೆ ರೀತಿ ತೋರಿಸಿದ್ದಾರೆ’ ಎಂದರು.

ಮೋನಿಷಾ ಮಾತನಾಡಿ, 'ನನ್ನನ್ನು ನಂಬಿ ಇಷ್ಟು ದೊಡ್ಡ ಪಾತ್ರ ಕೊಟ್ಟಿದ್ದಕ್ಕೆ ನನ್ನ ತಂದೆಗೆ, ನಿರ್ದೇಶಕರಿಗೆ ಧನ್ಯವಾದ ಹೇಳುತ್ತೇನೆ. ನಮ್ಮ ತಂದೆಗೆ ಪ್ರೀತಿ ನೀಡಿದ ರೀತಿಯಲ್ಲೇ ನನಗೂ ಪ್ರೀತಿ ನೀಡಿ’ ಎಂದು ಕೇಳಿಕೊಂಡರು.

ನಟ ವಿನಯ್ ರಾಜ್​ಕುಮಾರ್ ಮಾತನಾಡಿ, ‘ಹಾಡು, ಟ್ರೇಲರ್ ಹೇಗಿದೆ ಎಂಬುದನ್ನು ಜನರು ನೋಡಿದ್ದಾರೆ. ಈಗ ಸಿನಿಮಾ ಹೇಗಿದೆ ಅಂತ ಜನರು ನೋಡಿ ಹೇಳಬೇಕು. ಈ ಸಿನಿಮಾ ಮಾಡಿದ ಮೇಲೆ ಬೆಂಗಳೂರಿನಲ್ಲಿ ಕಷ್ಟಪಟ್ಟು ಜೀವನ ಮಾಡುತ್ತಿರುವ ಪ್ರತಿಯೊಬ್ಬರ ಮೇಲೂ ನನಗೆ ಗೌರವ ಹೆಚ್ಚಾಗಿದೆ’ ಎಂದು ಹೇಳಿದರು.

ಇನ್ನೂ ವಿಶೇಷ ಎಂದರೆ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರಿ ನಟಿಸಿದ್ದಾರೆ. ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿರುವ ಉಮಾಶ್ರಿ ದುನಿಯಾ ವಿಜಯ್ ಅವರಿಗಾಗಿ ಸಿಟಿಲೈಟ್ಸ್ ಗೆ ಬಣ್ಣ ಹಚ್ಚಿದ್ದಾರೆ. ಸಿನಿಮಾದ ಬಗ್ಗೆ ಮಾತನಾಡಿದ ಹಿರಿಯ ನಟಿ ಉಮಾಶ್ರೀ, 'ದುನಿಯಾ ವಿಜಯ್ ಅವರಿಗೆ ನಾನೆ ಈ ಪಾತ್ರ ಮಾಡಬೇಕು ಎನ್ನುವ ಆಸೆ. ಹಾಗಾಗಿ ನಟಿಸಿದ್ದೇನೆ. ವಿನಯ್ ತುಂಬಾ ಮಾತಾನಡಲ್ಲ, ತನ್ನ ಕೆಲಸವಾಯ್ತು ತಾನಾಯ್ತು ಅಂತ ಇರ್ತಾರೆ. ಎಂಥ ದೊಡ್ಡ ಕುಟುಂಬದಿಂದ ಬಂದ ಮಗು ಹೀಗಾ ಅಂತ ಅನಿಸುತ್ತೆ. ಯಾಕೆಂದ್ರೆ ಸ್ವಲ್ಪ ಇದ್ದರೆ ಸಾಕು ತಲೆ ನಿಲ್ಲಲ್ಲ ಎನ್ನುವ ಈ ಕಾಲದಲ್ಲಿ ಇಂಥ ಹುಡುಗರು ಇದ್ದಾರಾ ಅಂತ ಅನಿಸುತ್ತೆ. ವಿನಯ್ ಬಹುದೊಡ್ಡ ಕಲಾವಿದನಾಗಿ ಮೂಡಿ ಬರುತ್ತಾನೆ. ಮೋನಿಷಾ ಕೂಡ ತುಂಬಾ ಚೆನ್ನಾಗಿ ನಟಿಸಿದ್ದಾರೆ. ವಿಜಯ್ ಕಥೆಗಳ ಆಯ್ಕೆ ಶೈಲಿ ಚೆನ್ನಾಗಿದೆ. ಮಾಯಾನಗರಿ ಬೆಂಗಳೂರಿಗೆ ಬದುಕನ್ನು ಅರಸಿ ಬಂದ ಮಕ್ಕಳ ಸ್ಥಿತಿ ಹೇಗಿರುತ್ತೆ ಎನ್ನುವುದನ್ನು ಈ ಸಿನಿಮಾದಲ್ಲಿ ಕಟ್ಟಿ ಕೊಟ್ಟಿದ್ದಾರೆ' ಎಂದು ಹೇಳಿದರು.

ಇನ್ನೂ ಸಿನಿಮಾದಲ್ಲಿ ಖ್ಯಾತ ಡೈಲಾಗ್ ರೈಟರ್ ಮಾಸ್ತಿ ಕೂಡ ನಟಿಸಿರುವುದು ವಿಶೇಷ. ಶಿವಣ್ಣ ಅವರ ಫ್ಯಾನ್ ಪುನೀತ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಶಿವಸೇನಾ ಕ್ಯಾಮರಾ ವರ್ಕ್ ಚಿತ್ರಕ್ಕಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande