
ಬೆಂಗಳೂರು, 13 ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ನಾಯಕನನ್ನು ಬೆಳೆಸಲು ಮುಂದಾಗಬೇಕು ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.
ನಗರದ ಗಾಂಧಿ ಭವನದಲ್ಲಿ ನಡೆದ ರಾಷ್ಟ್ರೀಯ ಹಿಂದುಳಿದ ಸಂಘಟನೆಯ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗ ಎಂದರೆ ಕೇವಲ ಕುರುಬ ಸಮುದಾಯಕ್ಕೆ ಸೀಮಿತವಲ್ಲ.
ಉಪ್ಪಾರ, ನೇಕಾರ, ಈಡಿಗ ಸೇರಿದಂತೆ ಹಲವು ಸಣ್ಣ ಸಮುದಾಯಗಳಿವೆ. ಈ ಸಮುದಾಯಗಳ ನಾಯಕರನ್ನು ಹಿಂದುಳಿದ ವರ್ಗಗಳ ನಾಯಕತ್ವಕ್ಕೆ ಬೆಳೆಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಆಸಕ್ತಿ ವಹಿಸಬೇಕು ಎಂದು ಹೇಳಿದರು.
ರಾಷ್ಟ್ರೀಯ ಅಹಿಂದ ಸಂಘಟನೆಯನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಬಲಪಡಿಸುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಮತ್ತೊಬ್ಬ ಅಹಿಂದ ನಾಯಕನನ್ನು ಬೆಳೆಸುವ ಜವಾಬ್ದಾರಿಯನ್ನು ಸಂಘಟನೆ ವಹಿಸಬೇಕು ಎಂದರು.
ಅಹಿಂದ ಮುಖಂಡ ಹಾಗೂ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಣ್ಣ ಎಸ್. ಶಿವಳ್ಳಿ ಮಾತನಾಡಿ, 2028ರ ವಿಧಾನಸಭಾ ಚುನಾವಣೆಯ ವೇಳೆಗೆ ಅಹಿಂದ ನಾಯಕನ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಅಹಿಂದ ಸಂಘಟನೆ ಕಾರ್ಯನಿರ್ವಹಿಸಲಿದೆ. ಸಂಘಟನೆಯ ನೇತೃತ್ವವನ್ನು ಸಿ.ಎಂ.ಇಬ್ರಾಹಿಂ ವಹಿಸಲಿದ್ದಾರೆ ಎಂದು ತಿಳಿಸಿದರು.
ಅಹಿಂದ ಮುಖಂಡ ಲೋಹಿತ ನಾಯಕ ಮಾತನಾಡಿ, ಸಿದ್ದರಾಮಯ್ಯ ಅವರು ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಮತ್ತೊಬ್ಬ ಪರ್ಯಾಯ ಹಿಂದುಳಿದ ವರ್ಗಗಳ ನಾಯಕನ ಬೆಳವಣಿಗೆಗೆ ಅವರು ಪ್ರಮುಖ ಪಾತ್ರ ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಅಹಿಂದ ಮುಖಂಡ ಮದನ್, ದೇವರಾಜ ಅರಸು ಅವರ ಮರಿಮೊಮ್ಮಗ ಸಮೃದ್ಧ ಸೂರಜ್ ಹೆಗಡೆ, ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ ಕೆ.ಎಂ., ಕವಿತಾ ಬಿ. ನಾಯಕ, ಹನುಮಂತಪ್ಪ ಅರಸನಕೇರಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R