ಸಾದಹಳ್ಳಿ ಕೆಳ ಸೇತುವೆ ಕಾಮಗಾರಿ ಆರಂಭ: ಮಂಗಳವಾರದಿಂದ ಸಂಚಾರ ದಟ್ಟಣೆ ಸಾಧ್ಯತೆ
ಮಂಗಳವಾರದಿಂದ ಸಂಚಾರ ದಟ್ಟಣೆ ಸಾಧ್ಯತೆ
ಸಾದಹಳ್ಳಿ ಕೆಳ ಸೇತುವೆ ಕಾಮಗಾರಿ ಆರಂಭ: ಮಂಗಳವಾರದಿಂದ ಸಂಚಾರ ದಟ್ಟಣೆ ಸಾಧ್ಯತೆ


ಬೆಂಗಳೂರು, 13 ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ನಗರದ ಪ್ರಮುಖ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಾದಹಳ್ಳಿ ಅಂಡರ್ಪಾಸ್ ಕಾಮಗಾರಿ ಮತ್ತೆ ಆರಂಭಗೊಂಡಿದ್ದು, ಕಾಮಗಾರಿ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚಾರ ದಿಕ್ಕು ಬದಲಾವಣೆ ಮಾಡಲಾಗಿದೆ.

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಸದ್ಯ ಬಹುತೇಕರು ಊರುಗಳಿಗೆ ತೆರಳಿರುವುದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆ ಇದೆ. ಆದರೆ ರಜೆ ಮುಗಿದು ಮಂಗಳವಾರದಿಂದ ಸಹಜ ಸಂಚಾರ ಆರಂಭವಾದ ಬಳಿಕ ಈ ಭಾಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಬರವು ಟೋಲ್ ಸಮೀಪ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವತಿಯಿಂದ ಅಂಡರ್ಪಾಸ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಗಾಗಿ ಭಾರಿ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕಾಮಗಾರಿ ಸ್ಥಳದ ಕೆಲ ಮೀಟರ್ಗಳ ಮುಂಚೆಯೇ ತಡೆಗೋಡೆಗಳನ್ನು ನಿರ್ಮಿಸಿ, ಸಂಚಾರ ದಿಕ್ಕು ಬದಲಾವಣೆ ಕುರಿತು ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.

ಸಾದಹಳ್ಳಿ ಅಂಡರ್ಪಾಸ್ ಕಾಮಗಾರಿ ಕಳೆದ ಕೆಲ ವರ್ಷಗಳಿಂದ ವಿವಿಧ ಕಾರಣಗಳಿಂದ ವಿಳಂಬವಾಗಿತ್ತು. ಇದೀಗ ಕಾಮಗಾರಿ ಪುನರಾರಂಭಗೊಂಡಿದ್ದು, ವೇಗವಾಗಿ ಸಾಗುತ್ತಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಈ ಭಾಗದಲ್ಲಿ ಸಂಚಾರ ವ್ಯವಸ್ಥೆ ಮತ್ತಷ್ಟು ಸುಧಾರಿಸುವ ನಿರೀಕ್ಷೆ ಸ್ಥಳೀಯರಲ್ಲಿದೆ.

ವಾಹನ ಸವಾರರಿಗೆ ಪರ್ಯಾಯ ಮಾರ್ಗಅಂಡರ್ಪಾಸ್ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಹಾಗೂ ದೇವನಹಳ್ಳಿ ಕಡೆಗೆ ತೆರಳುವ ವಾಹನ ಸವಾರರು ಬದಲಾದ ಸಂಚಾರ ವ್ಯವಸ್ಥೆಯನ್ನು ಪಾಲಿಸುವಂತೆ ಸೂಚಿಸಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು NHAI ಹಲವು ಕಡೆಗಳಲ್ಲಿ ಮಾರ್ಗ ಬದಲಾವಣೆ ಹಾಗೂ ಎಚ್ಚರಿಕೆ ಸೂಚನಾ ಫಲಕಗಳನ್ನು ಅಳವಡಿಸಿದೆ.

ಅಂಡರ್ಪಾಸ್ ಕಾಮಗಾರಿ ನಡೆಯುತ್ತಿರುವ ಸ್ಥಳದ ಸಮೀಪದಲ್ಲೇ ಹೊಸ ಮಾಲ್ವೊಂದರ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆಯಿದೆ. ಮಾಲ್ ಆರಂಭವಾದ ಬಳಿಕ ಈ ಭಾಗದಲ್ಲಿ ವಾಹನಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ಸಂಚಾರ ದಟ್ಟಣೆ ಕುರಿತ ಆತಂಕವೂ ಎದುರಾಗಿದೆ.

ಹೀಗಾಗಿ ಸಾದಹಳ್ಳಿ, ವಿಮಾನ ನಿಲ್ದಾಣ ಹಾಗೂ ದೇವನಹಳ್ಳಿ ಮಾರ್ಗದಲ್ಲಿ ಸಂಚರಿಸುವವರು ಮುನ್ನೆಚ್ಚರಿಕೆಯಿಂದ ಹೆಚ್ಚುವರಿ ಸಮಯ ಮೀಸಲಿಡುವಂತೆ ಸೂಚಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande