
ಮಂಡ್ಯ, 13 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಗಣೇಶೋತ್ಸವದ ಸ್ವಾಗತ ಕಾರ್ಯಕ್ರಮದ ವೇಳೆ ಕಬ್ಬಿಣದ ರಾಡ್ ತಲೆಗೆ ಬಿದ್ದು ಮಂಡ್ಯ ಶಾಸಕ ಗಣಿಗ ಪಿ. ರವಿಕುಮಾರ್ ಗಾಯಗೊಂಡ ಘಟನೆ ಶನಿವಾರ ನಗರದ ಮರಿಗೌಡ ಬಡಾವಣೆಯಲ್ಲಿ ನಡೆದಿದೆ.
ಕಾರ್ಯಕ್ರಮದಲ್ಲಿ ಸ್ಕ್ರೀನ್ ಎಳೆಯುವ ಸಂದರ್ಭದಲ್ಲಿ ಕಬ್ಬಿಣದ ರಾಡ್ವೊಂದು ಶಾಸಕರ ತಲೆಗೆ ಬಿದ್ದಿದೆ. ಘಟನೆಯಲ್ಲಿ ಗಾಯಗೊಂಡ ಅವರನ್ನು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ತುರ್ತು ಚಿಕಿತ್ಸಾ ಘಟಕದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ವೈದ್ಯರು ಸಿಟಿ ಸ್ಕ್ಯಾನ್ ಸೇರಿದಂತೆ ಅಗತ್ಯ ತಪಾಸಣೆ ನಡೆಸಿದರು. ತಲೆಗೆ ಹೊಲಿಗೆ ಹಾಕಲಾಗಿದ್ದು, ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.
ಘಟನೆ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ಶಾಸಕರ ಆರೋಗ್ಯ ವಿಚಾರಿಸಿದರು. ಸಾರ್ವಜನಿಕರು, ಮುಖಂಡರು ಹಾಗೂ ಕಾರ್ಯಕರ್ತರು ಆಸ್ಪತ್ರೆಗೆ ಆಗಮಿಸಿದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇದಕ್ಕೂ ಮುನ್ನ, ಕಾರ್ಯಕ್ರಮದ ಆಯೋಜಕರು ಅಥವಾ ನಿರ್ವಹಣಾ ಸಂಸ್ಥೆಯ ನಿರ್ಲಕ್ಷ್ಯದಿಂದ ಘಟನೆ ನಡೆದಿದೆಯೇ ಎಂಬ ಚರ್ಚೆ ನಡೆದಿತ್ತು. ಅಲ್ಲದೆ, ಶಾಸಕ ಗಣಿಗ ರವಿಕುಮಾರ್ ಅವರು ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಘಟನೆ ಹಿಂದೆ ಷಡ್ಯಂತ್ರವಿದೆಯೇ ಎಂಬ ಅನುಮಾನಗಳೂ ವ್ಯಕ್ತವಾಗಿದ್ದವು.
ಆದರೆ, ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಶಾಸಕ ಗಣಿಗ ರವಿಕುಮಾರ್ ಅವರು “ನನ್ನ ಮೇಲೆ ಯಾವುದೇ ಷಡ್ಯಂತ್ರ ನಡೆದಿಲ್ಲ. ಸ್ಕ್ರೀನ್ ಎಳೆಯುವ ಸಂದರ್ಭದಲ್ಲಿ ಕಬ್ಬಿಣದ ರಾಡ್ ತಲೆಯ ಮೇಲೆ ಬಿದ್ದಿದೆ.
ಸಣ್ಣ ಪ್ರಮಾಣದಲ್ಲಿ ಗಾಯವಾಗಿದ್ದು, ಹೊಲಿಗೆ ಹಾಕಲಾಗಿದೆ. ವೈದ್ಯರು ಕೆಲ ದಿನ ವಿಶ್ರಾಂತಿಗೆ ಸೂಚಿಸಿದ್ದಾರೆ. ನಾನು ಆರೋಗ್ಯವಾಗಿದ್ದೇನೆ. ಯಾರೂ ಆತಂಕಪಡಬೇಕಿಲ್ಲ” ಎಂದು ಸ್ಪಷ್ಟಪಡಿಸಿದರು.
“ಯಾವುದೇ ಸಮಸ್ಯೆ ಇಲ್ಲ. ಯಾರು ಗಾಬರಿಯಾಗಬೇಡಿ. ಕೆಲ ದಿನ ವಿಶ್ರಾಂತಿ ಪಡೆಯುತ್ತೇನೆ” ಎಂದು ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R