
ಬೆಂಗಳೂರು, 13 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಈ ಇಬ್ಬರನ್ನು ಬದಿಗೆ ಸರಿಸಿ ತಾವು ಅಧಿಕಾರಕ್ಕೆ ಬರಬಹುದೇ ಎಂಬ ಲೆಕ್ಕಾಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.
ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಬಿಜೆಪಿ ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಹಾಗೂ ಅವರ ಬೆಂಬಲಿಗರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ರಾಜಕೀಯ ಹೇಳಿಕೆಗಳಿಗೆ ತಿರುಗೇಟು ನೀಡಿದರು.
“ಅಶೋಕ್ ಮತ್ತು ವಿಜಯೇಂದ್ರ ಅವರ ಕಥೆ ಏನೇ ಇರಲಿ. ಕುಮಾರಸ್ವಾಮಿ ಇವರಿಬ್ಬರನ್ನು ಕೆಳಗಿಳಿಸಿ ತಮಗೆ ಏನಾದರೂ ಸಿಗಬಹುದೇ ಎಂದು ನೋಡುತ್ತಿದ್ದಾರೆ. ಹೀಗಾಗಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಬಾಂಬ್ ಹಾಕುತ್ತೇನೆ ಎನ್ನುತ್ತಿದ್ದಾರೆ” ಎಂದು ಶಿವಕುಮಾರ್ ಹೇಳಿದರು.
ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ದೊಡ್ಡ ಸಚಿವ ಸ್ಥಾನ ದೊರೆತಿದೆ. ಅದರ ಮೂಲಕ ಕರ್ನಾಟಕದ 50 ಸಾವಿರ ಜನರಿಗೆ ಉದ್ಯೋಗ ದೊರೆಯುವಂತೆ ಮಾಡಲಿ. ಅಗತ್ಯವಿದ್ದರೆ ಮಂಡ್ಯದಲ್ಲಿಯೇ ಭೂಸ್ವಾಧೀನ ಮಾಡಿಕೊಡಲು ಸಿದ್ಧ ಎಂದು ಅವರು ಹೇಳಿದರು.
“ನನ್ನನ್ನು ಅಧಿಕಾರದಿಂದ ಇಳಿಸಿಬಿಡುತ್ತೇನೆ, ದೆಹಲಿಯಿಂದ ಬಾಂಬ್ ಹಾಕಿಬಿಡುತ್ತೇನೆ, ಅಲ್ಲೋಲ ಕಲ್ಲೋಲ ಮಾಡಿಬಿಡುತ್ತೇನೆ ಎಂದು ಮಾತನಾಡುತ್ತಿದ್ದಾರೆ. ಅವರಿಗೆ ದೊರೆತಿರುವ ಅಧಿಕಾರವನ್ನು ಕರ್ನಾಟಕದ ಜನರ ಹಿತಕ್ಕಾಗಿ ಬಳಸಲಿ” ಎಂದು ಶಿವಕುಮಾರ್ ತಿರುಗೇಟು ನೀಡಿದರು.
‘ಅಲ್ಲೋಲ ಕಲ್ಲೋಲ’ದ ಬಗ್ಗೆ ಹೇಳಬೇಕೇ?
ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವುದಾಗಿ ಹೇಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, “ಅದೇನೋ ಅಲ್ಲೋಲ ಕಲ್ಲೋಲ ಆಗಿದೆಯಲ್ಲ. ಅದನ್ನು ನಾನು ಬಿಡಿಸಿ ಹೇಳಬೇಕೆ? ದಿನವೂ ನಾವು ದೂರದರ್ಶನದಲ್ಲಿ ನೋಡುತ್ತಿದ್ದೇವಲ್ಲ” ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಸಭಿಕರೊಬ್ಬರು ಪೆನ್‌ಡ್ರೈವ್ ಎಂದು ಕೂಗಿದಾಗ, ಶಿವಕುಮಾರ್ ಅವರು ಆ ವಿಚಾರದ ಬಗ್ಗೆ ಮಾತನಾಡಲು ನಿರಾಕರಿಸಿದರು.
“ನಮಗೆ ಪೆನ್‌ಡ್ರೈವ್ ವಿಚಾರ ಬೇಡ. ಅವರುಗಳು ಏನು ಬೇಕಾದರೂ ಮಾಡಿಕೊಳ್ಳಲಿ. ಕೇಂದ್ರ ಕಾರಾಗೃಹದ ವಿಚಾರವೆಲ್ಲ ಅವರವರದ್ದು. ಅದೆಲ್ಲವೂ ಅವರ ಸಿದ್ಧಾಂತ. ಅವರಿಂದ ಯಾರ್ಯಾರ ಕುಟುಂಬ ಏನಾಯಿತು ಎಂಬುದರ ಬಗ್ಗೆ ಈಗ ಮಾತನಾಡುವುದು ಬೇಡ” ಎಂದರು.
‘ನಮ್ಮನ್ನು ಸಿಬಿಐಗೆ ಬೇಕಾದರೂ ಒಪ್ಪಿಸಲಿ’
ತಮ್ಮ ವಿರುದ್ಧ ಯಾವುದೇ ತನಿಖೆ ನಡೆಸಿದರೂ ತಾವು ಹೆದರುವುದಿಲ್ಲ ಎಂದು ಶಿವಕುಮಾರ್ ಹೇಳಿದರು.
“ನಮ್ಮನ್ನು ಏನು ಬೇಕಾದರೂ ಮಾಡಲಿ. ಬೇಕಾದರೆ ಸೀಳಿ ಇಡಲಿ, ಸಿಬಿಐಗೆ ತೆಗೆದುಕೊಂಡು ಹೋಗಲಿ. ಯಾವ ತನಿಖೆ ಬೇಕಾದರೂ ಮಾಡಲಿ. ಆದರೆ ಅವರ ವಿರುದ್ಧ ತನಿಖೆ ನಡೆದಾಗ ನ್ಯಾಯಾಲಯಕ್ಕೆ ಹೋಗಿ ಏಕೆ ತಡೆಯಾಜ್ಞೆ ತರುತ್ತಿದ್ದಾರೆ?” ಎಂದು ಪ್ರಶ್ನಿಸಿದರು.
“ನೀವು ಎಲ್ಲರೂ ಒಂದೇ ತಂಡವಲ್ಲವೇ? ಈ ಸ್ಥಾನದಲ್ಲಿದ್ದುಕೊಂಡು ದ್ವೇಷ ಬೇಡ ಎಂಬ ಕಾರಣಕ್ಕೆ ನಾನು ಆ ವಿಚಾರಗಳಿಗೆ ಹೋಗಿಲ್ಲ. ಯಾರಿಗೂ ತೊಂದರೆ ಆಗಬಾರದು ಎಂಬುದು ನನ್ನ ಆಶಯ. ಅಧಿಕಾರವನ್ನು ಸಕಾರಾತ್ಮಕವಾಗಿ ಬಳಸಬೇಕು. ಅಧಿಕಾರ ದುರುಪಯೋಗಪಡಿಸಿಕೊಳ್ಳಲು ಅಲ್ಲ. ಹತ್ತು ಜನರಿಗೆ ಒಳ್ಳೆಯದನ್ನು ಮಾಡಲು ಅಧಿಕಾರ ಬಳಸಬೇಕು ಎಂಬುದು ನನ್ನ ಬದ್ಧತೆ” ಎಂದು ಹೇಳಿದರು.
ಹತ್ತು ದಿನಗಳ ಕಾಲ ವಿಧಾನಮಂಡಲದ ಅಧಿವೇಶನ ನಡೆಸಲು ಬಿಡಲಿಲ್ಲ. ನಂತರವೂ ಪಾದಯಾತ್ರೆ ನಡೆಸಿದರು. ಈಗ ಕರೆದಿರುವ ಅಧಿವೇಶನದಲ್ಲಿ ಬೇರೆ ವಿಚಾರಗಳನ್ನು ಚರ್ಚಿಸದೆ ಕೇವಲ ರೈತರ ವಿಚಾರದ ಬಗ್ಗೆ ಮಾತ್ರ ಚರ್ಚಿಸಬೇಕು ಎಂದು ಹೇಳುತ್ತಿದ್ದಾರೆ ಎಂದು ಶಿವಕುಮಾರ್ ಟೀಕಿಸಿದರು.
ಕಸ್ತೂರಿ ರಂಗನ್ ವರದಿ ಜಾರಿಗೆ ತಂದವರು ಯಾರು ಎಂಬುದರ ಬಗ್ಗೆಯೂ ಚರ್ಚಿಸಲಿ. ಚರ್ಚೆ ಮಾಡಬೇಕೋ ಬೇಡವೋ ಎಂಬುದು ಅವರಿಗೆ ಬಿಟ್ಟ ವಿಚಾರ. ಬಳಿಕ ಅವರು ಗದೆ ಬೀಸಲಿ ಅಥವಾ ಬಾಣ ಬಿಡಲಿ. ಅದನ್ನು ಎದುರಿಸಲು ಕಾಂಗ್ರೆಸ್ ಪಕ್ಷ, ತಾವು ಹಾಗೂ ಪಕ್ಷದ ಕಾರ್ಯಕರ್ತರು ಸಿದ್ಧರಿದ್ದಾರೆ ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.