ಗಜೇಂದ್ರಗಡ ಪಟ್ಟಣದಲ್ಲಿ ಅಗ್ನಿ ಅವಘಡ,
ಗದಗ, 13 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್:- ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಪ್ಲಾಸ್ಟಿಕ್ ಪೈಪ್ ಹಾಗೂ ಕಿರಾಣಿ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದ ಗೋಡೌನ್ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಆತಂಕದ ವಾತಾವರಣ ನಿರ್ಮಾಣವಾಯಿತು. ಗೋಡೌನ್ನಲ್ಲಿದ್ದ ಅಪಾರ ಪ್ರಮಾಣದ ಸಾಮಗ್ರಿಗಳು ಬೆಂಕಿಯ ಕೆನ್ನಾಲಿಗ
ಫೋಟೋ


ಗದಗ, 13 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಪ್ಲಾಸ್ಟಿಕ್ ಪೈಪ್ ಹಾಗೂ ಕಿರಾಣಿ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದ ಗೋಡೌನ್ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಆತಂಕದ ವಾತಾವರಣ ನಿರ್ಮಾಣವಾಯಿತು. ಗೋಡೌನ್ನಲ್ಲಿದ್ದ ಅಪಾರ ಪ್ರಮಾಣದ ಸಾಮಗ್ರಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟುಹೋಗಿವೆ.

ಗಜೇಂದ್ರಗಡ ಪಟ್ಟಣದಲ್ಲಿರುವ ಗೋಡೌನ್ನಲ್ಲಿ ಪ್ಲಾಸ್ಟಿಕ್ ಪೈಪ್ಗಳು ಹಾಗೂ ಕಿರಾಣಿ ವ್ಯಾಪಾರಕ್ಕೆ ಸಂಬಂಧಿಸಿದ ವಿವಿಧ ವಸ್ತುಗಳನ್ನು ದಾಸ್ತಾನು ಮಾಡಲಾಗಿತ್ತು. ಏಕಾಏಕಿ ಗೋಡೌನ್ನಿಂದ ಹೊಗೆ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ತೀವ್ರವಾಗಿ ವ್ಯಾಪಿಸಿದೆ ಎನ್ನಲಾಗಿದೆ. ಬೆಂಕಿಯ ತೀವ್ರತೆಗೆ ಗೋಡೌನ್ನಲ್ಲಿದ್ದ ವಸ್ತುಗಳು ಒಂದೊಂದಾಗಿ ಬೆಂಕಿಗಾಹುತಿಯಾಗಿವೆ.

ಅಗ್ನಿ ಅವಘಡದ ಪರಿಣಾಮ ದಟ್ಟ ಕಪ್ಪು ಹೊಗೆ ಆವರಿಸಿಕೊಂಡಿದ್ದು, ಸುತ್ತಮುತ್ತಲಿನ ನಿವಾಸಿಗಳು ಹಾಗೂ ಸ್ಥಳೀಯ ವ್ಯಾಪಾರಿಗಳಲ್ಲಿ ಆತಂಕ ಮೂಡಿತು. ಬೆಂಕಿ ಮತ್ತಷ್ಟು ಪ್ರದೇಶಕ್ಕೆ ವ್ಯಾಪಿಸಬಹುದೆಂಬ ಭೀತಿಯಿಂದ ಸ್ಥಳೀಯರು ಆತಂಕಗೊಂಡಿದ್ದರು.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಬೆಂಕಿಯ ತೀವ್ರತೆಯನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಗೋಡೌನ್ನಲ್ಲಿ ಪ್ಲಾಸ್ಟಿಕ್ ಪೈಪ್ ಸೇರಿದಂತೆ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳಿದ್ದ ಹಿನ್ನೆಲೆಯಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗೆ ಸವಾಲು ಎದುರಾಯಿತು.

ಮಹೇಶ್ ಪಾಟೀಲ್ ಸೇರಿದಂತೆ ಕಿರಾಣಿ ವ್ಯಾಪಾರಿಗೆ ಸೇರಿದ ವಸ್ತುಗಳು ಬೆಂಕಿಗಾಹುತಿಯಾಗಿರುವುದಾಗಿ ತಿಳಿದುಬಂದಿದೆ. ಘಟನೆಯಿಂದ ವ್ಯಾಪಾರಿಗೆ ಭಾರಿ ಪ್ರಮಾಣದ ನಷ್ಟ ಉಂಟಾಗಿರುವ ಸಾಧ್ಯತೆ ಇದೆ. ಆದರೆ, ನಿಖರವಾಗಿ ಎಷ್ಟು ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದೆ ಎಂಬುದು ಸಂಬಂಧಪಟ್ಟ ಅಧಿಕಾರಿಗಳ ಪರಿಶೀಲನೆಯ ಬಳಿಕ ತಿಳಿದುಬರಬೇಕಿದೆ.

ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿತೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬ ಬಗ್ಗೆ ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಕಾರ್ಯಾಚರಣೆ ಮುಂದುವರಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande