ಇ.ಡಿ. ದಾಳಿ ರಾಜಕೀಯ ಪ್ರೇರಿತ: ಬಿಜೆಪಿ ವಿರುದ್ಧ ಸಚಿವ ಶರಣಪ್ರಕಾಶ್ ಪಾಟೀಲ್ ವಾಗ್ದಾಳಿ
ಗದಗ, 13 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್:- ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗದಗನಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಗದಗದಲ್ಲಿ ಮಾತನಾಡಿದ ಅವರು, ಕ
ಫೋಟೋ


ಗದಗ, 13 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:- ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗದಗನಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಗದಗದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಿರೋಧ ಪಕ್ಷದ ನಾಯಕರನ್ನು ಬೆದರಿಸುವ ಹಾಗೂ ರಾಜಕೀಯವಾಗಿ ಬಗ್ಗುಬಡಿಯುವ ಉದ್ದೇಶದಿಂದ ಇ.ಡಿ., ಆದಾಯ ತೆರಿಗೆ ಇಲಾಖೆ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಕಳೆದ ಹಲವು ವರ್ಷಗಳಿಂದ ಇದೇ ರೀತಿಯ ಚಾಳಿ ಮುಂದುವರಿದಿದೆ ಎಂದು ಟೀಕಿಸಿದರು. ತನಿಖಾ ಸಂಸ್ಥೆಗಳ ದಾಳಿಗಳ ಕುರಿತು ಇತಿಹಾಸವನ್ನು ಗಮನಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ವಿರೋಧ ಪಕ್ಷದ ನಾಯಕರ ಮೇಲೆಯೇ ಕ್ರಮಗಳು ನಡೆದಿರುವುದು ಕಂಡುಬರುತ್ತದೆ ಎಂದು ಹೇಳಿದರು.

ವಿರೋಧ ಪಕ್ಷದವರ ಮೇಲೆ ಇ.ಡಿ., ಐಟಿ ದಾಳಿ ಮೂಲಕ ತೊಂದರೆ ನೀಡುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿ ನಾಯಕರ ಮೇಲೆ ಇ.ಡಿ., ಐಟಿ ಅಥವಾ ಸಿಐಡಿ ತನಿಖೆಗಳು ನಡೆದಿವೆಯೇ? ಎಂದು ಪ್ರಶ್ನಿಸಿದ ಅವರು, ಸತೀಶ್ ಜಾರಕಿಹೊಳಿ ಅವರ ಮೇಲಿನ ಇ.ಡಿ. ಕ್ರಮ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದರು.

ದೇಶದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಸಚಿವರು ಕಿಡಿಕಾರಿದರು. ವಿರೋಧ ಪಕ್ಷದ ನಾಯಕರನ್ನು ಬಗ್ಗುಬಡಿಯಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

ಮೋದಿ ಸರ್ಕಾರ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಿದ ಶರಣಪ್ರಕಾಶ್ ಪಾಟೀಲ್, ಜೆನ್-ಜಿ ಪೀಳಿಗೆಯ ಬಳಿಕ ಕೇಂದ್ರ ಸರ್ಕಾರ ಹತಾಶಗೊಂಡು ಇಂತಹ ಕ್ರಮಗಳಿಗೆ ಮುಂದಾಗುತ್ತಿದೆ ಎಂದು ಟೀಕಿಸಿದರು.

ಇದೇ ವೇಳೆ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ವಿಚಾರದಲ್ಲಿಯೂ ಸಚಿವರು ತೀವ್ರ ವಾಗ್ದಾಳಿ ನಡೆಸಿದರು. 2019ರಿಂದ 2023ರವರೆಗೆ ಬಿಜೆಪಿ ಆಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಜನರಿಗೆ ಎಲ್ಲವೂ ಗೊತ್ತಿದೆ. ಹೀಗಾಗಿ ಕಾಂಗ್ರೆಸ್ಗೆ ಬಿಜೆಪಿ ನಾಯಕರು ನೀತಿ ಪಾಠ ಹೇಳುವ ಅಗತ್ಯವಿಲ್ಲ ಎಂದು ಹೇಳಿದರು.

ಬಿಜೆಪಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಜನರು ಸಾಯುವಾಗ ಹೆಣದ ಮೇಲೆ ಹಣ ಮಾಡಿದ ನಾಲಾಯಕರಿಂದ ಕಾಂಗ್ರೆಸ್ ಪಾಠ ಕಲಿಯಬೇಕಿಲ್ಲ. ಬಿಜೆಪಿಗರು ನಮಗೆ ನೀತಿ ಪಾಠ ಹೇಳುವ ಅವಶ್ಯಕತೆ ಇಲ್ಲ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸತೀಶ್ ಜಾರಕಿಹೊಳಿ ಅವರ ಮೇಲಿನ ಇ.ಡಿ. ದಾಳಿ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯ ಪ್ರೇರಿತ ಕ್ರಮವೆಂದು ಪರಿಗಣಿಸುತ್ತಿದೆ. ಕೇಂದ್ರದ ತನಿಖಾ ಸಂಸ್ಥೆಗಳ ಕಾರ್ಯವೈಖರಿ ಕುರಿತು ಕಾಂಗ್ರೆಸ್ ನಾಯಕರು ನಿರಂತರವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಇದೀಗ ಗದಗನಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್ ಕೂಡ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande