
ನವದೆಹಲಿ, 13 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಸಂಘರ್ಷಪೀಡಿತ ಪ್ರದೇಶಗಳು ಸೇರಿದಂತೆ ಎಲ್ಲೆಡೆ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಂತೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಾಯಕರು ಕರೆ ನೀಡಿದ್ದಾರೆ. ಸಾಂಸ್ಕೃತಿಕ ಆಸ್ತಿಗಳ ನಾಶ ಹಾಗೂ ಅಕ್ರಮ ಸಾಗಣೆಯನ್ನು ತಡೆಯುವುದು ಮತ್ತು ಜನಸಮುದಾಯಗಳ ಇತಿಹಾಸ ಹಾಗೂ ಅಸ್ಮಿತೆಯನ್ನು ಸಂರಕ್ಷಿಸುವುದು ಅತ್ಯಂತ ಮುಖ್ಯ ಎಂದು ನಾಯಕರು ಒತ್ತಿ ಹೇಳಿದ್ದಾರೆ.
ಭಾರತದ ಅಧ್ಯಕ್ಷತೆಯಲ್ಲಿ ನಡೆದ ಎರಡು ದಿನಗಳ ಬ್ರಿಕ್ಸ್ ಶೃಂಗಸಭೆಯ ಮೊದಲ ದಿನ ಅಂಗೀಕರಿಸಲಾದ ‘ನವ ದೆಹಲಿ ಘೋಷಣಾಪತ್ರ’ದಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಬ್ರಿಕ್ಸ್ ಸಂಸ್ಕೃತಿ ಸಚಿವರ 11ನೇ ಸಭೆಯಲ್ಲಿ ‘ಭೋಪಾಲ್ ಘೋಷಣೆ’ ಅಂಗೀಕರಿಸಿರುವುದನ್ನು ನಾಯಕರು ಸ್ವಾಗತಿಸಿದ್ದಾರೆ. ಜನರ ನಡುವಿನ ಸಹಕಾರ ಹೆಚ್ಚಿಸುವುದು ಹಾಗೂ ಸದಸ್ಯ ರಾಷ್ಟ್ರಗಳ ನಡುವಿನ ಬಾಂಧವ್ಯ ಬಲಪಡಿಸುವಲ್ಲಿ ಸಂಸ್ಕೃತಿಯ ಪ್ರಮುಖ ಪಾತ್ರವನ್ನು ಘೋಷಣಾಪತ್ರದಲ್ಲಿ ಪುನರುಚ್ಚರಿಸಲಾಗಿದೆ.
ಶೃಂಗಸಭೆಯ ಮೊದಲ ದಿನದ ಚರ್ಚೆಯ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನವ ದೆಹಲಿ ಘೋಷಣಾಪತ್ರವನ್ನು ಅಂಗೀಕರಿಸಿರುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ಅಬುಧಾಬಿಯ ಯುವರಾಜ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸೇರಿದಂತೆ ಬ್ರಿಕ್ಸ್ ರಾಷ್ಟ್ರಗಳ ಪ್ರಮುಖ ನಾಯಕರು ಉಪಸ್ಥಿತರಿದ್ದರು.
ಸಂಘರ್ಷದಿಂದ ಬಾಧಿತ ಪ್ರದೇಶಗಳಲ್ಲಿಯೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಸಾಂಸ್ಕೃತಿಕ ಆಸ್ತಿಗಳ ನಾಶ ಹಾಗೂ ಅಕ್ರಮ ಸಾಗಣೆಯನ್ನು ತಡೆಯುವ ಮೂಲಕ ಬಾಧಿತ ಸಮುದಾಯಗಳ ಇತಿಹಾಸ ಮತ್ತು ಅಸ್ಮಿತೆಯನ್ನು ಕಾಪಾಡಬಹುದು ಎಂದು ಘೋಷಣೆಯಲ್ಲಿ ಹೇಳಲಾಗಿದೆ.
ಅಲ್ಲದೆ, ಸಾಂಸ್ಕೃತಿಕ ಪರಂಪರೆ, ಪುರಾವಸ್ತುಗಳು ಹಾಗೂ ಆಧ್ಯಾತ್ಮಿಕ, ಪೂರ್ವಜರ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿರುವ ವಸ್ತುಗಳನ್ನು ಅವುಗಳ ಮೂಲ ದೇಶಗಳಿಗೆ ಮರಳಿಸುವ ಅಗತ್ಯವನ್ನೂ ನಾಯಕರು ಒತ್ತಿ ಹೇಳಿದ್ದಾರೆ.
ಸಾಂಸ್ಕೃತಿಕ ಸಂಸ್ಥೆಗಳ ನಡುವೆ ಸಹಕಾರಕ್ಕೆ ಒತ್ತು
ವಸ್ತುಸಂಗ್ರಹಾಲಯಗಳು, ದಾಖಲೆ ಸಂಗ್ರಹಾಲಯಗಳು, ಗ್ರಂಥಾಲಯಗಳು ಹಾಗೂ ಇತರ ಸಂಬಂಧಿತ ಸಾಂಸ್ಕೃತಿಕ ಸಂಸ್ಥೆಗಳ ನಡುವೆ ಮಾಹಿತಿ ಮತ್ತು ದಾಖಲೆಗಳ ವಿನಿಮಯದ ಮೂಲಕ ಬ್ರಿಕ್ಸ್ ರಾಷ್ಟ್ರಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವಂತೆ ನಾಯಕರು ಕರೆ ನೀಡಿದ್ದಾರೆ.
ಸಾಂಸ್ಕೃತಿಕ ಹಾಗೂ ಸೃಜನಶೀಲ ಕೈಗಾರಿಕೆಗಳಲ್ಲಿ ಮಾಹಿತಿ ವಿನಿಮಯ ಮತ್ತು ಉತ್ತಮ ಕಾರ್ಯವಿಧಾನಗಳ ಹಂಚಿಕೆಯನ್ನು ಉತ್ತೇಜಿಸುವುದಾಗಿ ಘೋಷಣೆಯಲ್ಲಿ ತಿಳಿಸಲಾಗಿದೆ. ಕಲಾವಿದರು ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದವರ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗೂ ಆದ್ಯತೆ ನೀಡುವ ಬಗ್ಗೆ ಒಪ್ಪಿಗೆ ವ್ಯಕ್ತಪಡಿಸಲಾಗಿದೆ.
ಬಹುರಾಷ್ಟ್ರೀಯ ನಾಮನಿರ್ದೇಶನಕ್ಕೆ ಉತ್ತೇಜನ
ಸಂಬಂಧಿತ ಯುನೆಸ್ಕೊ ಒಪ್ಪಂದಗಳು ಮತ್ತು ಕಾರ್ಯಕ್ರಮಗಳ ಅಡಿಯಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ಜಂಟಿ ಬಹುರಾಷ್ಟ್ರೀಯ ನಾಮನಿರ್ದೇಶನಗಳ ಸಾಧ್ಯತೆಗಳನ್ನು ಅನ್ವೇಷಿಸಲು ಬ್ರಿಕ್ಸ್ ರಾಷ್ಟ್ರಗಳು ಉತ್ತೇಜನ ನೀಡಿವೆ.
ಸಾಂಸ್ಕೃತಿಕ ಕೈಗಾರಿಕೆಗಳು ಮತ್ತು ಸಂಪನ್ಮೂಲಗಳ ಅಭಿವೃದ್ಧಿಗಾಗಿ ಬಹುಪಕ್ಷೀಯ ವೇದಿಕೆಗಳು ಸೇರಿದಂತೆ ಬ್ರಿಕ್ಸ್ ರಾಷ್ಟ್ರಗಳ ನಡುವೆ ಮತ್ತಷ್ಟು ಸಹಕಾರಕ್ಕೆ ಉತ್ತೇಜನ ನೀಡುವ ಬಗ್ಗೆಯೂ ಘೋಷಣೆಯಲ್ಲಿ ಪ್ರಸ್ತಾಪಿಸಲಾಗಿದೆ. ಬ್ರಿಕ್ಸ್ ಸಾಂಸ್ಕೃತಿಕ ಮಹೋತ್ಸವ ಹಾಗೂ ‘ವೇವ್ಸ್ ಬಜಾರ್’ ಆಯೋಜಿಸಿರುವುದನ್ನೂ ಸದಸ್ಯ ರಾಷ್ಟ್ರಗಳು ಸ್ವಾಗತಿಸಿವೆ.
ಬ್ರಿಕ್ಸ್ ಸದಸ್ಯ ರಾಷ್ಟ್ರಗಳು
ಬ್ರಿಕ್ಸ್‌ನ ಮೂಲ ಸದಸ್ಯ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ನಂತರ ಸಂಘಟನೆ ವಿಸ್ತರಣೆಯಾಗಿದೆ. 2024ರಲ್ಲಿ ಈಜಿಪ್ಟ್, ಇಥಿಯೋಪಿಯಾ, ಇರಾನ್, ಸಂಯುಕ್ತ ಅರಬ್ ಎಮಿರೇಟ್ಸ್ ಹಾಗೂ ಸೌದಿ ಅರೇಬಿಯಾ ಸೇರ್ಪಡೆಯಾದವು. 2025ರಲ್ಲಿ ಇಂಡೋನೇಷ್ಯಾ ಸದಸ್ಯ ರಾಷ್ಟ್ರವಾಯಿತು.
ಬೆಲಾರಸ್, ಬೊಲಿವಿಯಾ, ಕಜಕಿಸ್ತಾನ, ಕ್ಯೂಬಾ, ಮಲೇಷ್ಯಾ, ನೈಜೀರಿಯಾ, ಥಾಯ್ಲೆಂಡ್, ಉಗಾಂಡಾ, ಉಜ್ಬೇಕಿಸ್ತಾನ ಮತ್ತು ವಿಯೆಟ್ನಾಂ ಕಳೆದ ವರ್ಷ ಬ್ರಿಕ್ಸ್ ಪಾಲುದಾರ ರಾಷ್ಟ್ರಗಳಾಗಿ ಸೇರ್ಪಡೆಯಾದವು.
ಬ್ರಿಕ್ಸ್ ಎರಡು ದಶಕಗಳ ಸ್ಮರಣಾರ್ಥ ಅಂಚೆ ಚೀಟಿಗಳು
ಬ್ರಿಕ್ಸ್ ಎರಡು ದಶಕಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸೆ.12ರಂದು ನವದೆಹಲಿಯ ಭಾರತ ಮಂಟಪದಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಎರಡು ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಾಯಿತು.
ಈ ಎರಡೂ ಅಂಚೆ ಚೀಟಿಗಳು 2026ರಲ್ಲಿ ಭಾರತದ ಬ್ರಿಕ್ಸ್ ಅಧ್ಯಕ್ಷತೆಯ ಆದ್ಯತೆಗಳನ್ನು ಪ್ರತಿಬಿಂಬಿಸುತ್ತವೆ. ‘ಸ್ಥಿತಿಸ್ಥಾಪಕತೆ, ನವೋದ್ಯಮ, ಸಹಕಾರ ಮತ್ತು ಸ್ಥಿರತೆಗಾಗಿ ನಿರ್ಮಾಣ’ ಎಂಬುದು ಅಧ್ಯಕ್ಷತೆಯ ಪ್ರಮುಖ ಆಶಯವಾಗಿದೆ.
ಒಂದು ಅಂಚೆ ಚೀಟಿಯು ಪರಸ್ಪರ ಗೌರವ, ತಿಳುವಳಿಕೆ ಮತ್ತು ಏಕತೆಯ ಮನೋಭಾವದ ವೇದಿಕೆಯಾಗಿ ಬ್ರಿಕ್ಸ್ ಹೊರಹೊಮ್ಮಿರುವುದನ್ನು ಬಿಂಬಿಸುತ್ತದೆ. ಮತ್ತೊಂದು ಅಂಚೆ ಚೀಟಿಯು ಭಾರತದ ಅಧ್ಯಕ್ಷತೆಯ ‘ಮಾನವತೆ ಮೊದಲು’ ಹಾಗೂ ‘ಜನಕೇಂದ್ರಿತ’ ದೃಷ್ಟಿಕೋನ ಮತ್ತು ಲಾಂಛನವನ್ನು ಪ್ರತಿಬಿಂಬಿಸುತ್ತದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.