






ಬಳ್ಳಾರಿ, 12 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಬಡ ಜನತೆ ಹಾಗೂ ಗ್ರಾಮೀಣ ಭಾಗದ ನಾಗರಿಕರ ಸಮಸ್ಯೆಗಳಿಗೆ ಮನೆ ಬಾಗಿಲಲ್ಲೇ ಪರಿಹಾರ ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ ನೂತನ ‘ಪ್ರಜಾಸೇವೆ ಇಲಾಖೆ’ ಅಸ್ತಿತ್ವಕ್ಕೆ ಬಂದಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಕರೆ ನೀಡಿದರು.
ಬಳ್ಳಾರಿ ತಾಲ್ಲೂಕಿನ ರೂಪನಗುಡಿಯ ಗ್ರಾಪಂ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪ್ರಜಾಸೇವೆ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಜಾಸೇವಾ ಆಂದೋಲನ ಸಭೆಯು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು, ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ನಾಗರಿಕರ ಮೂಲಭೂತ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಆಯೋಜಿಸಲಾಗುವ ಪ್ರಮುಖ ವೇದಿಕೆಯಾಗಿದೆ. ದೇಶದಲ್ಲೇ ಪ್ರಥಮ ಬಾರಿಗೆ ಇಂತಹ ಪ್ರತ್ಯೇಕ ಸಚಿವಾಲಯ ರಾಜ್ಯದಲ್ಲಿ ಸ್ಥಾಪನೆಯಾಗಿದ್ದು, ಕಟ್ಟಕಡೆಯ ಗ್ರಾಮಗಳ ಬಡವರಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಬಳ್ಳಾರಿಯಲ್ಲಿ ಸಲ್ಲಿಕೆಯಾದ 800ಕ್ಕೂ ಹೆಚ್ಚು ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಚುರುಕಾಗಿದ್ದು, ಬಾಕಿ ಅರ್ಜಿಗಳ ಸ್ಥಿತಿಗತಿಯನ್ನು ಕೇವಲ 15 ದಿನಗಳಲ್ಲಿ ಅರ್ಜಿದಾರರ ಮನೆ ವಿಳಾಸಕ್ಕೆ ನೇರವಾಗಿ ಪತ್ರದ ಮೂಲಕ ಅಥವಾ ದೂರವಾಣಿ ಮೂಲಕ ತಲುಪಿಸಲಾಗುತ್ತದೆ. ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು 1902 ಉಚಿತ ಸಹಾಯವಾಣಿ ಆರಂಭಿಸಲಾಗಿದ್ದು, ಫೋನ್ ಕರೆ ಮೂಲಕವೇ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಒಗ್ಗೂಡಿ ಸ್ಥಳೀಯ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಮತ್ತು ಆಡಳಿತಾತ್ಮಕವಾಗಿ ಹೇಗೆ ಪರಿಹರಿಸಿಕೊಳ್ಳಬೇಕು ಎಂಬ ಅರಿವು ಮೂಡಿಸುವುದು ಪ್ರಜಾಸೇವಾ ಸಭೆಯ ಉದ್ದೇಶವಾಗಿದ್ದು, ಪ್ರತಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಪ್ರತಿ ತಿಂಗಳ 2ನೇ ಹಾಗೂ 4ನೇ ಶನಿವಾರ ಸಾರ್ವಜನಿಕ ಕುಂದುಕೊರತೆ ಸಭೆಗಳು ನಡೆಯಲಿವೆ. ಇದರ ಸದುಪಯೋಗಪಡೆದುಕೊಳ್ಳಬೇಕೆಂದು ತಿಳಿಸಿದರು.
ಮುಖ್ಯಮಂತ್ರಿಗಳ ಸಂದೇಶ ಓದಿದ ಶಾಸಕ ಬಿ.ನಾಗೇಂದ್ರ:
ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಲಿಖಿತ ಸಂದೇಶವನ್ನು ಓದಿದ ಶಾಸಕ ಬಿ.ನಾಗೇಂದ್ರ, ಬಳ್ಳಾರಿ ಗ್ರಾಮೀಣ ಕ್ಷೇತ್ರ ಸೇರಿದಂತೆ ಇಡೀ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಸರ್ಕಾರದ ಗುರಿಯಾಗಿದೆ. ಪಿಂಚಣಿ, ಪಹಣಿ, ವಸತಿ, ನಿವೇಶನ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಸಾರ್ವಜನಿಕರ ಮನೆಬಾಗಿಲಿಗೆ ಬರುತ್ತಿದ್ದಾರೆ, ಎಂದು ಸಂದೇಶದಲ್ಲಿ ತಿಳಿಸಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಅವರು ಮಾತನಾಡಿ, ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ನಿಮ್ಮ ಸಹಕಾರ ಎಂಬ ಧ್ಯೇಯದೊಂದಿಗೆ ತಿಂಗಳಲ್ಲಿ ಪ್ರತಿ ಶನಿವಾರ ಶಾಸಕರು ಮತ್ತು ಉಸ್ತುವಾರಿ ಸಚಿವರು ಹೋಬಳಿ ಮಟ್ಟಕ್ಕೆ ತೆರಳಿ ಜನರ ಅಹವಾಲುಗಳನ್ನು ಆಲಿಸುತ್ತಿದ್ದಾರೆ. ಜನರು ಸಲ್ಲಿಸುವ ಅಹವಾಲುಗಳಿಗೆ ಅಧಿಕಾರಿಗಳು ಕಾನೂನಿನ ಚೌಕಟ್ಟನ್ನು ಮೀರಿ, ಮಾನವೀಯತೆ ಹಾಗೂ ಬಲವಾದ ಇಚ್ಛಾಶಕ್ತಿಯಿಂದ ಸ್ಪಂದಿಸಿ ಪರಿಹಾರ ಕಲ್ಪಿಸಬೇಕೆಂದು ಹೇಳಿದರು.
ಗ್ಯಾರಂಟಿ ಯೋಜನೆಗಳು ನುಡಿದಂತೆ ನಡೆದ ಸರ್ಕಾರಕ್ಕೆ ಸಾಕ್ಷಿ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವ ಮೂಲಕ ‘ನುಡಿದಂತೆ ನಡೆದ ಸರ್ಕಾರ’ ಎನಿಸಿಕೊಂಡಿದೆ. ರಾಜ್ಯದ ತಾಯಂದಿರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ, ತಲಾ 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ, ಮನೆ ಯಜಮಾನಿಗೆ ತಿಂಗಳಿಗೆ ರೂ.2000 ನೀಡುವ ಗೃಹಲಕ್ಷ್ಮಿ, ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಹಾಗೂ ಯುವಜನತೆಗೆ ನೆರವಾಗುವ ಯುವನಿಧಿ ಯೋಜನೆಗಳು ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಯಶಸ್ವಿಯಾಗಿ ತಲುಪುತ್ತಿವೆ ಎಂದರು.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಾರ್ವಜನಿಕರ ಕುಂದುಕೊರತೆಗಳಿಗೆ ಕೇವಲ ಕಾಗದದ ರೂಪದಲ್ಲಿ ಸೀಮಿತವಾಗದೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ‘ಪ್ರಜಾಸೇವಾ ಆಂದೋಲನ’ 2ನೇಯ ಸಭೆಯನ್ನು ರೂಪನಗುಡಿ ಹೋಬಳಿಯಲ್ಲಿ ಆಯೋಜಿಸಲಾಗಿದೆ ಎಂದರು.
ಹಿಂದಿನ ಐಪಿಜಿಆರ್ಎಸ್ ಹಾಗೂ ಜನಸ್ಪಂದನ ವ್ಯವಸ್ಥೆಗಳಲ್ಲಿ ಅರ್ಜಿಗಳು ಕಚೇರಿ ಹಂತದಲ್ಲೇ ಮುಕ್ತಾಯವಾಗುತ್ತಿದ್ದ ಬಗ್ಗೆ ಪ್ರಸ್ತಾಪಿಸಿದ ಅವರು, ಹೊಸ ವ್ಯವಸ್ಥೆಯಡಿ ತಹಶೀಲ್ದಾರ್, ಎಸಿ ಹಾಗೂ ಡಿಸಿ ನೇತೃತ್ವದಲ್ಲಿ ಪರಿಶೀಲನೆ ನಡೆಯಲಿದೆ. ಕಳೆದ ವಾರ ವಿಜಯನಗರ ಜಿಲ್ಲೆಯಲ್ಲಿ ಚಾಲನೆ ಪಡೆದ ಈ ಆಂದೋಲನವನ್ನು ಪ್ರತಿ ಶನಿವಾರ ಎಲ್ಲಾ ಹೋಬಳಿಗಳಲ್ಲಿ ಮತ್ತು ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ವಿಸ್ತರಿಸಲಾಗುವುದು ಎಂದು ಹೇಳಿದರು.
ಕಳೆದ ಸಭೆಯಲ್ಲಿ ಸ್ವೀಕರಿಸಲಾದ ಸುಮಾರು 740 ಅರ್ಜಿಗಳ ಪೈಕಿ, ಸ್ಥಳದಲ್ಲೇ ಬಗೆಹರಿಯುವ, ಕಾಲಾವಕಾಶ ಬೇಕಾದ ಮತ್ತು ಸರ್ಕಾರದ ನೀತಿ ನಿರ್ಧಾರಕ್ಕೆ ಒಳಪಡುವ ವಿಷಯಗಳೆಂದು ವರ್ಗೀಕರಿಸಿ ಈಗಾಗಲೇ ಎರಡು ಬಾರಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ. ಪ್ರಜಾಸೇವಾ ಆಂದೋಲನದಡಿ ಬರುವ ಪ್ರತಿ ಅರ್ಜಿಯನ್ನು ಐಪಿಜಿಆರ್ಎಸ್ನಲ್ಲಿ ದಾಖಲಿಸಿಕೊಂಡು, ಅರ್ಜಿದಾರರಿಗೆ ಸಮರ್ಪಕ ಪರಿಹಾರ ಸಿಕ್ಕ ಬಳಿಕವೇ ಕಡತವನ್ನು ಮುಕ್ತಾಯಗೊಳಿಸಲಾಗುವುದು ಎಂದು ತಿಳಿಸಿದರು.
ಅಹವಾಲು ಸ್ವೀಕಾರ:
ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ ಸ್ಥಳದಲ್ಲೇ ಪರಿಹರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ, ನೂರಾರು ಸಾರ್ವಜನಿಕರು ಭಾಗವಹಿಸಿ ತಮ್ಮ ದೈನಂದಿನ ಸಮಸ್ಯೆ ಹಾಗೂ ಅಹವಾಲುಗಳನ್ನು ಮುಖಂಡರು ಮತ್ತು ಶಾಸಕರ ಮುಂದೆ ತೋಡಿಕೊಂಡರು. ಸಭೆಯಲ್ಲಿ ಬಂದ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಶಾಸಕ ಬಿ.ನಾಗೇಂದ್ರ ಅವರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ವೇದಿಕೆಗೆ ಕರೆಸಿ ಸಮಸ್ಯೆಗಳನ್ನು ತಕ್ಷಣವೇ ಇತ್ಯರ್ಥಪಡಿಸುವಂತೆ ಸೂಚನೆ ನೀಡಿದರು.
ಮೂವರು ಹೆಣ್ಣುಮಕ್ಕಳೊಂದಿಗೆ ಬದುಕಲು ಸೂರಿಲ್ಲದೆ ಪರದಾಡುತ್ತಿರುವ ಗ್ರಾಮದ ಮಹಿಳೆಯೊಬ್ಬರು ತಮ್ಮ ಅಂಗವಿಕಲ ಮಗಳಿಗೆ ಹಾಗೂ ತಮಗೆ ಸರ್ಕಾರದಿಂದ ಬರಬೇಕಾದ ಪಿಂಚಣಿ ಮತ್ತು ಗೃಹಲಕ್ಷ್ಮಿ ಯೋಜನೆಯ ರೂ.2,000 ಹಣ ಸರಿಯಾಗಿ ತಲುಪದಿರುವುದನ್ನು ಗಮನಕ್ಕೆ ತಂದರು. ತಾಂತ್ರಿಕ ಕಾರಣಗಳಿಂದ ಹಣ ಜಮೆಯಾಗದಿರುವುದನ್ನು ಗಮನಿಸಿದ ಶಾಸಕರು, ತಕ್ಷಣವೇ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳನ್ನು ಕರೆಸಿ, ಅರ್ಜಿಗಳನ್ನು ಪಡೆದು ಬಾಕಿ ಇರುವ ಹಣವನ್ನು ಶೀಘ್ರವಾಗಿ ಮಂಜೂರು ಮಾಡಿಸಲು ಸೂಚಿಸಿದರು.
ಕಬರಸ್ತಾನ್ಗೆ ಕಾಂಪೌಂಡ್ ಗೋಡೆ ನಿರ್ಮಾಣ ಮಾಡುವ ಕುರಿತು ಬಂದ ಮನವಿಗೆ ಪ್ರತಿಕ್ರಿಯಿಸಿ, ಈ ಕುರಿತು ವಕ್ಫ್ ಬೋರ್ಡ್ ಅಧ್ಯಕ್ಷರೊಂದಿಗೆ ಚರ್ಚಿಸಿ ಅನುದಾನ ಮತ್ತು ಕಾಮಗಾರಿಯ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಹಿಂದೆ ಸರ್ಕಾರದಿಂದ ಮಂಜೂರಾಗಿದ್ದ 5 ಎಕರೆ ಜಮೀನಿನ ಜಾಗ ಗುರುತಿಸುವಿಕೆ ಮತ್ತು ಪಹಣಿ ವಿತರಣೆ ವಿಳಂಬವಾಗಿರುವ ಬಗ್ಗೆ ದೂರುಗಳು ಕೇಳಿಬಂದವು. ಇದಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಸಂಜೀವರಾಯನಕೋಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಸಂಚರಿಸುವ ರಸ್ತೆಗಳು, ಶಾಲಾ ಕಟ್ಟಡಗಳು, ಬಸ್ ನಿಲ್ದಾಣ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಸಾರ್ವಜನಿಕರು ಪ್ರಸ್ತಾಪಿಸಿದರು. ನೀರಿನ ಬೋರ್ವೆಲ್ ಮತ್ತು ಪೈಪ್ಲೈನ್ ಕಾಮಗಾರಿಗಳ ಅಗತ್ಯತೆ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಶೀಘ್ರ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು. ಹಲವು ವರ್ಷಗಳಿಂದ ಸ್ವಂತ ಮನೆಯಿಲ್ಲದೆ ಬಾಡಿಗೆ ಹಾಗೂ ಶೆಡ್ಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಆಶ್ರಯ ಯೋಜನೆಗಳಡಿ ಮನೆಗಳನ್ನು ಮಂಜೂರು ಮಾಡಲು ಅರ್ಜಿಗಳನ್ನು ಸ್ವೀಕರಿಸಲಾಯಿತು. ರೂಪನಗುಡಿ, ಆಸುಂಡಿ ರೈತರಿಗೆ ಹಿಂಗಾರು ಬೆಳೆ ಹಾನಿ ಪರಿಹಾರ ಸಂಬಂಧಿದಂತೆ ಮನವಿ ಸಲ್ಲಿಸಿದರು. ಸರ್ಕಾರದ ಮಟ್ಟದಲ್ಲಿ ಈಗಾಗಲೇ ಮಾತುಕತೆ ನಡೆದಿದೆ. ನಿಯಮಾನುಸಾರ ಯಾವುದೇ ಗೊಂದಲವಿಲ್ಲದೆ ಪಾವತಿಯಾಗಲಿದೆ ಎಂದು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್