
ನವದೆಹಲಿ, 12 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:18ನೇ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಲೇಷ್ಯಾ ಪ್ರಧಾನಿ ದಾತೋ ಸೆರಿ ಅನ್ವರ್ ಬಿನ್ ಇಬ್ರಾಹಿಂ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಈ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಲೇಷ್ಯಾಗೆ ಭೇಟಿ ನೀಡಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಆಗಿರುವ ಪ್ರಗತಿಯನ್ನು ಇಬ್ಬರೂ ನಾಯಕರು ಪರಿಶೀಲಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಕುರಿತು ಚರ್ಚೆ ನಡೆಸಿದರು.
ಭಾರತಕ್ಕೆ ಆಗಮಿಸಿದ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲುದಾರ ರಾಷ್ಟ್ರವಾಗಿ ಮಲೇಷ್ಯಾ ಭಾಗವಹಿಸುತ್ತಿರುವುದನ್ನು ಅವರು ಶ್ಲಾಘಿಸಿದರು.
ವ್ಯಾಪಾರ ಮತ್ತು ಹೂಡಿಕೆ, ರಕ್ಷಣಾ ಹಾಗೂ ಭದ್ರತೆ, ಅರೆವಾಹಕ ಉದ್ಯಮ, ಮೂಲಸೌಕರ್ಯ, ಡಿಜಿಟಲ್ ಆರ್ಥಿಕತೆ, ಇಂಧನ, ಹಣಕಾಸು ತಂತ್ರಜ್ಞಾನ, ಶಿಕ್ಷಣ, ಪ್ರವಾಸೋದ್ಯಮ ಹಾಗೂ ಜನರ ನಡುವಿನ ಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರದ ಪ್ರಗತಿಯನ್ನು ಉಭಯ ದೇಶಗಳ ಪ್ರಧಾನಮಂತ್ರಿಗಳ ಕಚೇರಿಗಳು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಮಾತುಕತೆ ವೇಳೆ ಮಲೇಷ್ಯಾದ ಸಬಾಹ್ ರಾಜ್ಯದ ಕೋಟಾ ಕಿನಾಬಾಲುವಿನಲ್ಲಿ ಭಾರತದ ಮಹಾವಾಣಿಜ್ಯ ದೂತಾವಾಸ ಕಚೇರಿ ಸ್ಥಾಪಿಸಲು ಮಲೇಷ್ಯಾ ಸರ್ಕಾರ ಸಮ್ಮತಿಸಿರುವುದನ್ನು ಪ್ರಧಾನಿ ಅನ್ವರ್ ಇಬ್ರಾಹಿಂ ತಿಳಿಸಿದರು.
ಭಾರತ-ಆಸಿಯಾನ್ ಸಂಬಂಧಗಳನ್ನು ಬಲಪಡಿಸುವಲ್ಲಿ ಮಲೇಷ್ಯಾ ನೀಡುತ್ತಿರುವ ನಿರಂತರ ಸಹಕಾರವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಪ್ರಾದೇಶಿಕ ಹಾಗೂ ಜಾಗತಿಕ ಮಹತ್ವದ ವಿವಿಧ ವಿಚಾರಗಳ ಬಗ್ಗೆಯೂ ಉಭಯ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಭಾರತ-ಮಲೇಷ್ಯಾ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.