ಬದಲಿ ಕೃಷಿ ಕ್ರಾಂತಿ: ‘ದೃಢ ಕರ್ನಾಟಕ ಸಂಕಲ್ಪ’ ದಡಿ ಸಾಗುತ್ತಿದೆ ಪ್ರಗತಿಯ ರಥ
ಬಳ್ಳಾರಿ, 12 ಸೆಪ್ಟೆಂಬರ್ (ಹಿ.ಸ.) ‘ಉಳುವ ಯೋಗಿಯ ನೋಡಲ್ಲಿ’ ಎಂಬ ಮಾತಿನಂತೆ ರೈತ ದೇಶದ ಬೆನ್ನೆಲುಬು. ಮಾನವಕುಲಕ್ಕೆ ಅನ್ನ ನೀಡುವ ರೈತ ಕೇವಲ ಜೀವನಾಧಾರವಲ್ಲ, ಇಡೀ ದೇಶದ ಆರ್ಥಿಕತೆಯ ಮೂಲಸ್ತಂಭ. ಪ್ರತಿಯೊಬ್ಬ ಮನುಷ್ಯನ ದೈನಂದಿನ ಆಹಾರದ ಅಗತ್ಯವನ್ನು ಪೂರೈಸುವಲ್ಲಿ ರೈತರ ಪಾತ್ರ ಅಪಾರವಾದದ್ದು. ಆರ್ಥಿ
ಬದಲಿ ಕೃಷಿ ಕ್ರಾಂತಿ: ‘ದೃಢ ಕರ್ನಾಟಕ ಸಂಕಲ್ಪ’ ದಡಿ ಸಾಗುತ್ತಿದೆ ಪ್ರಗತಿಯ ರಥ


ಬಳ್ಳಾರಿ, 12 ಸೆಪ್ಟೆಂಬರ್ (ಹಿ.ಸ.)

‘ಉಳುವ ಯೋಗಿಯ ನೋಡಲ್ಲಿ’ ಎಂಬ ಮಾತಿನಂತೆ ರೈತ ದೇಶದ ಬೆನ್ನೆಲುಬು. ಮಾನವಕುಲಕ್ಕೆ ಅನ್ನ ನೀಡುವ ರೈತ ಕೇವಲ ಜೀವನಾಧಾರವಲ್ಲ, ಇಡೀ ದೇಶದ ಆರ್ಥಿಕತೆಯ ಮೂಲಸ್ತಂಭ. ಪ್ರತಿಯೊಬ್ಬ ಮನುಷ್ಯನ ದೈನಂದಿನ ಆಹಾರದ ಅಗತ್ಯವನ್ನು ಪೂರೈಸುವಲ್ಲಿ ರೈತರ ಪಾತ್ರ ಅಪಾರವಾದದ್ದು.

ಆರ್ಥಿಕತೆ ಮತ್ತು ಸಮಾಜದಲ್ಲಿ ರೈತನ ಪಾತ್ರ ಬಹಳ ಪ್ರಾಮುಖ್ಯವಾಗಿದೆ. ದೇಶದ ಕೋಟ್ಯಂತರ ಜನರಿಗೆ ದಿನನಿತ್ಯದ ಆಹಾರ ಧಾನ್ಯಗಳನ್ನು ಉತ್ಪಾದಿಸಿ ಆಹಾರ ಭದ್ರತೆ ಒದಗಿಸುತ್ತಾನೆ. ಜಿಡಿಪಿಗೆ (ಉಆP) ಗಣನೀಯ ಕೊಡುಗೆ ನೀಡುವುದರ ಜೊತೆಗೆ, ಕೈಗಾರಿಕೆಗಳಿಗೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು (ಉದಾ: ಹತ್ತಿ, ಕಬ್ಬು) ಒದಗಿಸುತ್ತಾನೆ. ಗ್ರಾಮೀಣ ಭಾರತದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಜನರಿಗೆ ಕೃಷಿ ಕ್ಷೇತ್ರವೇ ಪ್ರಮುಖ ಉದ್ಯೋಗ ಮೂಲವಾಗಿದೆ.

ರೈತನ ಬದುಕಿಗೆ ಭೂಮಿ ಬುನಾದಿಯಾದರೆ, ನೀರು ಅವನ ಬೆಳೆಯ ಜೀವರಸ. ಜನಸಂಖ್ಯಾ ಸ್ಫೋಟದಿಂದಾಗಿ ಆಹಾರ ಪೂರೈಕೆಯಲ್ಲಿ ಏರುಪೇರು ಉಂಟಾದಾಗ, ಕೃಷಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡುವುದು ಅತ್ಯಗತ್ಯವಾಯಿತು. ಈ ನಿಟ್ಟಿನಲ್ಲಿ ಕೃಷಿ ತಂತ್ರಜ್ಞಾನ, ನೀರಿನ ಸಮರ್ಥ ನಿರ್ವಹಣೆ ಹಾಗೂ ಆಧುನಿಕ ಯಂತ್ರೋಪಕರಣಗಳ ಬಳಕೆಯ ಮೂಲಕ ರೈತರ ಶ್ರಮಕ್ಕೆ ತಕ್ಕ ಬೆಲೆ ಸಿಗುವಂತೆ ಮಾಡಲು ಹಲವು ರೈತಪರ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ರಾಜ್ಯದಲ್ಲಿ ಸರ್ಕಾರ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಐತಿಹಾಸಿಕ ಸಂದರ್ಭದಲ್ಲಿ, ಸೆಪ್ಟೆಂಬರ್ 10 ರಂದು ಆಯೋಜಿಸಲಾದ “ದೃಢ ಕರ್ನಾಟಕದ ಸಂಕಲ್ಪ - ಶತಕದ ಪಥ, ಪ್ರಗತಿಯ ರಥ” ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರವು ರಾಜ್ಯದ ಕೃಷಿ ಕ್ಷೇತ್ರಕ್ಕೆ ನೂತನ ಚೈತನ್ಯ ತುಂಬಲು ಹಾಗೂ ರೈತರ ಜೀವನಮಟ್ಟವನ್ನು ಸುಧಾರಿಸಲು ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ನಾಡಿಗೆ ಸಮರ್ಪಿಸಿದ್ದಾರೆ.

*ಅನ್ನದಾತನ ಸಬಲೀಕರಣಕ್ಕೆ ‘ಶತಕದ ಪಥ'ದ ಪ್ರಮುಖ ಕೃಷಿ ಕೊಡುಗೆಗಳು:*

*ಶೂನ್ಯ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ*: ಪ್ರಸಕ್ತ ವರ್ಷದಲ್ಲಿ ರಾಜ್ಯದ ಒಟ್ಟು 28.63 ಲಕ್ಷ ರೈತರಿಗೆ ಶೂನ್ಯ ಹಾಗೂ ತೀರ ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲವನ್ನು ಒದಗಿಸಲು ರೂ. 25,652 ಕೋಟಿ ಅನುದಾನವನ್ನು ಕಾಯ್ದಿರಿಸಲಾಗಿದೆ.

*ನೀರಾವರಿ ಯೋಜನೆಗಳಿಗೆ ಆಸರೆ*: ‘ಅನ್ನ ನೀಡುವ ಭೂಮಿಗೆ ನೀರಿನ ಆಸರೆ' ನೀಡುವ ಉದ್ದೇಶದಿಂದ ಒಟ್ಟು 121 ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದಕ್ಕಾಗಿ ರೂ. 17,073 ಕೋಟಿ ಹಣವನ್ನು ಮೀಸಲಿಡಲಾಗಿದೆ.

ಕರ್ನಾಟಕ ಸರ್ಕಾರದ ‘ಅವಕಾಶಗಳ ಹೆದ್ದಾರಿ’ ಯೋಜನೆಯಡಿ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಕ್ಷೇತ್ರದ ಸಮಗ್ರ ಪ್ರಗತಿಗಾಗಿ ಹಲವಾರು ಹೊಸ ಯೋಜನೆಗಳನ್ನು ರೂಪಿಸಲಾಗಿದೆ. ಕೃಷಿಯನ್ನು ಬರೀ ಜೀವನೋಪಾಯವನ್ನಾಗಿ ನೋಡದೆ, ಅದನ್ನು ತಂತ್ರಜ್ಞಾನ ಆಧಾರಿತ ಮತ್ತು ಸುಸ್ಥಿರ ಆದಾಯ ತರುವ ಉದ್ಯಮವನ್ನಾಗಿ ಪರಿವರ್ತಿಸುವುದು ಈ ನೀತಿಗಳ ಮೂಲ ಉದ್ದೇಶವಾಗಿದೆ. ಸರ್ಕಾರದ ಹೊಸ ಕೃಷಿ ನೀತಿಗಳು, ತಂತ್ರಜ್ಞಾನ ಮತ್ತು ಗ್ರಾಮೀಣ ಜೀವನದ ಸಮ್ಮಿಲನವನ್ನು ಪರಿಚಯಿಸುವ ಪ್ರಮುಖ ಯೋಜನೆಗಳ ವಿವರಣೆ ಇಲ್ಲಿದೆ.

*ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ* -

*ಯಂತ್ರೋಪಕರಣಗಳ ಬಾಡಿಗೆ ಗೆ ಶೇ. 50 ರಷ್ಟು ಸಹಾಯಧನ*: 3 ಎಕರೆವರೆಗೆ ಜಮೀನು ಹೊಂದಿರುವ ಸಣ್ಣ ಮತ್ತು ಮಧ್ಯಮ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಪಡೆಯಲು ವಾರ್ಷಿಕ ಗರಿಷ್ಠ ರೂ. 4,500 ರವರೆಗೆ ಸಹಾಯಧನ ದೊರೆಯಲಿದೆ.

*ಡಿಜಿಟಲ್ ಬುಕಿಂಗ್* : ರೈತರು

ಮೊಬೈಲ್ ಮೂಲಕವೇ ಅಗತ್ಯ ಯಂತ್ರಗಳನ್ನು ನೇರವಾಗಿ ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದ್ದು, ಇದರಿಂದ ಸಮಯ, ಶ್ರಮ ಮತ್ತು ವೆಚ್ಚ ಉಳಿತಾಯವಾಗಲಿದೆ.

*ಸಿಎಂ ರೈತ ಚೈತನ್ಯ - ಡಿಜಿಟಲ್ ಕೃಷಿ ಮಿಷನ್ ಮತ್ತು ತಂತ್ರಜ್ಞಾನ ಅಭಿಯಾನ* - ಡ್ರೋನ್ ಮತ್ತು ಉಪಗ್ರಹ ತಂತ್ರಜ್ಞಾನ: ಆಧುನಿಕ ಡ್ರೋನ್ ಹಾಗೂ ಉಪಗ್ರಹ ಆಧಾರಿತ ಬೆಳೆ ಸಮೀಕ್ಷೆ ನಡೆಸಿ ಬೆಳೆಗಳ ವಿಸ್ತೀರ್ಣ, ಬೆಳವಣಿಗೆ ಹಾಗೂ ಕೀಟಬಾಧೆಯ ನಿಖರ ಮಾಹಿತಿಯನ್ನು ರೈತರಿಗೆ ಸಕಾಲದಲ್ಲಿ ನೀಡಲಾಗುತ್ತದೆ.

*ಮಾರುಕಟ್ಟೆ ದರಗಳ ನೇರ ಮಾಹಿತಿ*: ಮಾರುಕಟ್ಟೆಯಲ್ಲಿನ ನವೀಕರಿಸಿದ ದರಗಳ ಕುರಿತು ಮಾಹಿತಿ ಒದಗಿಸುವುದರಿಂದ ರೈತರು ಬೆಳೆಗಳನ್ನು ಯಾವ ಮಾರುಕಟ್ಟೆಯಲ್ಲಿ ಮತ್ತು ಯಾವ ಸಮಯದಲ್ಲಿ ಮಾರಾಟ ಮಾಡಬೇಕೆಂದು ಸಕಾಲದಲ್ಲಿ ನಿರ್ಧಾರ ಕೈಗೊಳ್ಳಬಹುದು.

*ಸಮಗ್ರ ಮಳೆಯಾಶ್ರಿತ ಹಾಗೂ ಶುಷ್ಕ ಪ್ರದೇಶಗಳ ಕೃಷಿ ನೀತಿ - ಶುಷ್ಕ ಭೂಮಿಗೆ ಸುಸ್ಥಿರ ಬಲ* : ರಾಜಸ್ಥಾನದ ನಂತರ ದೇಶದಲ್ಲೇ ಎರಡನೇ ಅತಿ ದೊಡ್ಡ ಒಣಭೂಮಿ ಹೊಂದಿರುವ ಕರ್ನಾಟಕದಲ್ಲಿ ಜಲಸಂರಕ್ಷಣೆ, ಮಣ್ಣಿನ ಸಾವಯವ ಇಂಗಾಲದ ಮರುಸ್ಥಾಪನೆ ಮತ್ತು ಹವಾಮಾನ ಸ್ನೇಹಿ ಕೃಷಿಗೆ ಒತ್ತು ನೀಡಲಾಗುತ್ತಿದೆ.

*ಆದಾಯ ಹೆಗ್ಗಳಿಕೆಗೆ ಮಾರ್ಗ*: ಪಶುಸಂಗೋಪನೆ ಹಾಗೂ ವೃಕ್ಷ ಆಧಾರಿತ ಕೃಷಿಯನ್ನು ಉತ್ತೇಜಿಸುವ ಮೂಲಕ ಮಳೆಯಾಶ್ರಿತ ರೈತರಿಗೆ ಪೂರಕ ಆದಾಯ ಸೃಷ್ಟಿಸಲಾಗುತ್ತಿದೆ.

*ಗ್ಲೋಬಲ್ ಮಾರುಕಟ್ಟೆಗೆ ‘ಕೃಷಿ ರಫ್ತು ಅಭಿಯಾನ'ಕೆಪೆಕ್ ಸಂಸ್ಥೆಯ ಬಲವರ್ಧನೆ* : ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ರಫ್ತಿಗೆ ಹೊಸ ವೇಗ ನೀಡಲು ‘ಕೆಪೆಕ್' ಸಂಸ್ಥೆಯನ್ನು ಆರ್ಥಿಕವಾಗಿ ಹಾಗೂ ರಚನಾತ್ಮಕವಾಗಿ ಸಜ್ಜುಗೊಳಿಸಲಾಗುತ್ತಿದೆ.

*ವಿಶೇಷ ಉತ್ಪನ್ನಗಳ ರಫ್ತು*: ರಾಜ್ಯದ ಮಾವು, ದಾಳಿಂಬೆ, ರಾಗಿ, ಸಿರಿಧಾನ್ಯಗಳು, ಅಕ್ಕಿ ಹಾಗೂ ತೊಗರಿ ಬೇಳೆಗೆ ಗ್ರೇಡಿಂಗ್ ಮತ್ತು ಬ್ರಾಂಡಿAಗ್ ಸೌಲಭ್ಯ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೆಲೆ ದೊರಕಿಸಲಾಗುತ್ತಿದೆ.

*ಪಿಎಂ ಕುಸುಮ್* – *ಸೌರಶಕ್ತಿಯ ಸುವರ್ಣ ಸ್ಪರ್ಶ ದಕ್ಷಿಣ ಭಾರತದಲ್ಲೇ ಪ್ರಥಮ* : ರಾಜ್ಯದಲ್ಲಿ 1,80,003 ಕ್ಕೂ ಹೆಚ್ಚು ರೈತರ ಪಂಪ್ಸೆಟ್ಗಳನ್ನು ಸೌರ ವಿದ್ಯುದೀಕರಣಗೊಳಿಸುವ ಮೂಲಕ ಕರ್ನಾಟಕವು ದಕ್ಷಿಣ ಭಾರತದಲ್ಲೇ ಪ್ರಥಮ ಹಾಗೂ ದೇಶದಲ್ಲೇ 5ನೇ ಸ್ಥಾನ ಪಡೆದುಕೊಂಡಿದೆ.

*ಉಚಿತ ನೀರಾವರಿ ಸೌಲಭ್ಯ* : ರೈತರ ವಿದ್ಯುತ್ ವೆಚ್ಚವನ್ನು ಸಂಪೂರ್ಣ ಕಡಿಮೆ ಮಾಡಿ ನೀರಾವರಿಯನ್ನು ಅತ್ಯಂತ ಲಾಭದಾಯಕವಾಗಿಸಲಾಗಿದೆ.

*ತೇಗದ ಸಿರಿ* : ದೀರ್ಘಕಾಲೀನ ಆರ್ಥಿಕ ಭದ್ರತೆ ನೀಡುವ ಮರಗಳ ಬೆಳೆಸುವಿಕೆಯನ್ನು ಪ್ರೋತ್ಸಾಹಿಸಲು ‘ತೇಗದ ಸಿರಿ’ ಯೋಜನೆಯನ್ನು ರೂಪಿಸಲಾಗಿದೆ. ರೈತರು ತಮ್ಮ ಜಮೀನಿನ ರಸ್ತೆಯ ಅಕ್ಕ ಪಕ್ಕ ಅಥವಾ ಖಾಲಿ ಜಾಗಗಳಲ್ಲಿ ತೇಗದಂತಹ ಬೆಲೆಬಾಳುವ ಮರಗಳನ್ನು ಬೆಳೆಸುವ ಮೂಲಕ ಭವಿಷ್ಯದಲ್ಲಿ ಉತ್ತಮ ಆರ್ಥಿಕ ಲಾಭ ಪಡೆಯಬಹುದು. ಇದು ರೈತರ ಆದಾಯ ಹೆಚ್ಚಿಸುವುದಷ್ಟೇ ಅಲ್ಲದೆ, ಪರಿಸರ ಸಮತೋಲನ ಮತ್ತು ಅರಣ್ಯೀಕರಣಕ್ಕೂ ಬೆಂಬಲ ನೀಡುತ್ತದೆ. ರೈತರು ಬೆಳುಯುವ ಇಂತಹ ತೇಗದ ಮರಗಳಿಗೆ ಶೇಕಡ 70ರಷ್ಟು ರೈತರು ಹಾಗೂ ಶೇಕಡ 30 ರಷ್ಟು ಸರ್ಕಾರ ಬಳಸಿಕೊಳ್ಳಲಿದೆ. ಇದರಿಂದ ರೈತರ ಆರ್ಥಿಕತೆ ಸುಧಾರಿಸುವಲ್ಲಿ ಎರಡು ಮಾತಿಲ್ಲ.

*ಮುಖ್ಯಮಂತ್ರಿಗಳ ಆಶಯ*:

ಭೂಮಿ, ನೀರು, ಆಧುನಿಕ ತಂತ್ರಜ್ಞಾನ ಹಾಗೂ ನೇರ ಮಾರುಕಟ್ಟೆ ಸಂಪರ್ಕಗಳ ಸಮನ್ವಯದೊಂದಿಗೆ ಪ್ರತಿಯೊಬ್ಬ ರೈತನ ಶ್ರಮಕ್ಕೆ ತಕ್ಕ ಮೌಲ್ಯ ದೊರೆಯಬೇಕು. ‘ದೃಢ ಕರ್ನಾಟಕ' ಸಂಕಲ್ಪವು ಬರಿ ಆಡಳಿತದ ಮೈಲಿಗಲ್ಲಷ್ಟೇ ಅಲ್ಲ, ಅದು ಪ್ರತಿಯೊಬ್ಬ ಅನ್ನದಾತನ ಬದುಕಿನಲ್ಲಿ ಹೊಸ ಭರವಸೆ ತರುವ ಸುವರ್ಣ ದಾರಿದೀಪ’ವಾಗಿ ರೈತರ ಬಾಳು ಉಜ್ವಲವಾಗಬೇಕು.

ಸರ್ಕಾರದ ಈ ಎಲ್ಲಾ ನೀತಿ ಮತ್ತು ಮಿಷನ್ಗಳು ಕೇವಲ ಯೋಜನೆಗಳಾಗಿ ಉಳಿಯದೆ, ಗ್ರಾಮೀಣ ಕರ್ನಾಟಕದ ಬದುಕನ್ನು ಧನಾತ್ಮಕವಾಗಿ ಬದಲಾಯಿಸುವ ಮಹತ್ವದ ಹೆಜ್ಜೆಗಳಾಗಿವೆ. ತಂತ್ರಜ್ಞಾನ, ರಫ್ತು ಅವಕಾಶ ಹಾಗೂ ಮೂಲಸೌಕರ್ಯಗಳ ಸಮ್ಮಿಲನದಿಂದ ಕೃಷಿ ಕ್ಷೇತ್ರವು ನಿಜವಾದ ‘ಅವಕಾಶಗಳ ಹೆದ್ದಾರಿ'ಯಾಗಿ ಹೊರಹೊಮ್ಮುತ್ತಿದೆ.

ವಿಶೇಷ ಲೇಖನ

ವೈ.ಸಿ.ಸಂಪತ್ ಕುಮಾರ್

ಮುಖ್ಯ ವರದಿಗಾರರು,

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ಬೆಂಗಳೂರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande