
ಬೆಂಗಳೂರು, 11 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಪಡೆಯುವ ‘ಒನ್ ಕರ್ನಾಟಕ ಮೊಬಿಲಿಟಿ’ ಆ್ಯಪ್ ಅನ್ನು ರಾಜ್ಯ ಸರ್ಕಾರ ಪರಿಚಯಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಡಬ್ಲ್ಯೂಕೆಆರ್ಟಿಸಿ) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್ಟಿಸಿ) ಸೇವೆಗಳನ್ನು ಒಂದೇ ಆ್ಯಪ್ನಲ್ಲಿ ಸಂಯೋಜಿಸಲಾಗಿದೆ.
ಹೊಸ ವ್ಯವಸ್ಥೆಯ ಮೂಲಕ ಪ್ರಯಾಣಿಕರು ಒಂದೇ ಲಾಗಿನ್ ಮೂಲಕ ಟಿಕೆಟ್ ಬುಕ್ಕಿಂಗ್, ಹಿಂದಿನ ಬುಕಿಂಗ್ ವಿವರ ವೀಕ್ಷಣೆ ಹಾಗೂ ಸಾರಿಗೆ ಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಿ, ಅವುಗಳ ಸ್ಥಿತಿಯನ್ನು ಪರಿಶೀಲಿಸಬಹುದಾಗಿದೆ.
ಹಂತ ಹಂತವಾಗಿ ಮಾಸಿಕ ಡಿಜಿಟಲ್ ಪಾಸ್ ವ್ಯವಸ್ಥೆಯನ್ನೂ ಪರಿಚಯಿಸಲಾಗುತ್ತಿದ್ದು, ಕ್ಯೂಆರ್ ಕೋಡ್ ಆಧಾರಿತವಾಗಿ ಪಾಸ್ ಪರಿಶೀಲನೆ ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ.
ಇದರ ಜೊತೆಗೆ ವಾಟ್ಸ್ಆ್ಯಪ್ ಮೂಲಕವೂ ಬಸ್ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದೆ. ಪ್ರಸ್ತುತ ಬಿಎಂಟಿಸಿಯನ್ನು ಹೊರತುಪಡಿಸಿ ಕೆಎಸ್ಆರ್ಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ ಮತ್ತು ಕೆಕೆಆರ್ಟಿಸಿ ಬಸ್ಗಳಿಗೆ ವಾಟ್ಸ್ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ.
ಟಿಕೆಟ್ ಬುಕ್ಕಿಂಗ್, ಪಾವತಿ, ದೃಢೀಕರಣ ಹಾಗೂ ರದ್ದತಿ ಪ್ರಕ್ರಿಯೆಗಳನ್ನು ವಾಟ್ಸ್ಆ್ಯಪ್ನಲ್ಲೇ ಪೂರ್ಣಗೊಳಿಸಬಹುದು.
ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚು ಸರಳ, ಸಮಗ್ರ ಹಾಗೂ ತಂತ್ರಜ್ಞಾನ ಸ್ನೇಹಿಯಾಗಿಸುವ ಉದ್ದೇಶದಿಂದ ಈ ಡಿಜಿಟಲ್ ವ್ಯವಸ್ಥೆ ರೂಪಿಸಲಾಗಿದೆ ಎಂದು ತಿಳಿಸಿದರು.
ನಾಲ್ಕೂ ಸಾರಿಗೆ ನಿಗಮಗಳ ಸೇವೆಗಳನ್ನು ಒಂದೇ ವೇದಿಕೆಗೆ ತರುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವುದರ ಜೊತೆಗೆ, ಮುಂದಿನ ದಿನಗಳಲ್ಲಿ ರಾಜ್ಯದ ಸಮಗ್ರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಒಗ್ಗೂಡಿಸುವ ಗುರಿಯನ್ನು ಸರ್ಕಾರ ಹೊಂದಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R