ಅಕ್ರಮ ಬಂದೂಕು ಹೊಂದಿದ್ದರೆ ನ.1ರೊಳಗೆ ಒಪ್ಪಿಸಿ: ಡಿಕೆಶಿ ಎಚ್ಚರಿಕೆ
ಅರಣ್ಯ ಸಿಬ್ಬಂದಿ ಜನರೊಂದಿಗೆ ಸ್ನೇಹ ಬೆಳೆಸಿಕೊಳ್ಳಲಿ:ಡಿಕೆಶಿ
DK shivkumar


ಬೆಂಗಳೂರು, 11 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಪರವಾನಗಿ ಇಲ್ಲದೆ ಅಕ್ರಮವಾಗಿ ಬಂದೂಕು ಹಾಗೂ ಇತರೆ ಶಸ್ತ್ರಾಸ್ತ್ರಗಳನ್ನು ಹೊಂದಿರುವವರು ನವೆಂಬರ್ 1ರೊಳಗೆ ಅವುಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಇಲ್ಲವಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು.

ಬೆಂಗಳೂರಿನ ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅಕ್ರಮ ಶಸ್ತ್ರಾಸ್ತ್ರಗಳನ್ನು ಸ್ವಯಂಪ್ರೇರಣೆಯಿಂದ ಸರ್ಕಾರಕ್ಕೆ ಒಪ್ಪಿಸಿದರೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ ಎಂದು ಭರವಸೆ ನೀಡಿದರು.

‘ಅರಣ್ಯ ಇಲಾಖೆ ಸಿಬ್ಬಂದಿಯ ಪೈಕಿ ಹಲವರು ಪರವಾನಗಿ ಇಲ್ಲದ ಬಂದೂಕುಗಳಿಂದಲೇ ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮ ಹಾಗೂ ಜಾನುವಾರುಗಳ ರಕ್ಷಣೆಗಾಗಿ ಬಂದೂಕು ಇಟ್ಟುಕೊಳ್ಳುವ ಅಗತ್ಯವಿದ್ದರೆ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು’ ಎಂದು ಸೂಚಿಸಿದರು.

ಹಿಂದೆ ತಮ್ಮ ಕ್ಷೇತ್ರದಲ್ಲಿ ಜನರು ಹೊಂದಿದ್ದ 300ಕ್ಕೂ ಹೆಚ್ಚು ನಾಡ ಬಂದೂಕುಗಳನ್ನು ಸರ್ಕಾರಕ್ಕೆ ಒಪ್ಪಿಸುವಂತೆ ಮಾಡಿದ್ದಾಗಿ ತಿಳಿಸಿದ ಅವರು, ರಾಜ್ಯದ ವಿವಿಧೆಡೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ನಾಡ ಬಂದೂಕುಗಳಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆ ಎಂದರು.

ಅರಣ್ಯ ಸಿಬ್ಬಂದಿ ಜನರೊಂದಿಗೆ ಸ್ನೇಹ ಬೆಳೆಸಿಕೊಳ್ಳಲಿಅರಣ್ಯ ಸಂಪತ್ತಿನ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದೆ. ವನ್ಯಜೀವಿಗಳೊಂದಿಗೆ ಸಂಘರ್ಷದ ಸಂದರ್ಭದಲ್ಲಿ ಅನೇಕ ಸಿಬ್ಬಂದಿ ಪ್ರಾಣತ್ಯಾಗ ಮಾಡಿದ್ದಾರೆ ಎಂದರು.

ಅರಣ‌್ಯ ಇಲಾಖೆ ಸಿಬ್ಬಂದಿಯ ಭತ್ಯೆ ಹೆಚ್ಚಿಸುವ ಕುರಿತು ಸಚಿವರು ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಲಾಗುವುದು. ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ, ಪೊಲೀಸ್ ಇಲಾಖೆಯನ್ನು ಒಳಗೊಂಡಂತೆ ಸಮಗ್ರವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅರಣ್ಯ ಅಂಚಿನಲ್ಲಿರುವ ಜನರೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ನೇಹಪೂರ್ವಕ ವಾತಾವರಣ ನಿರ್ಮಿಸಿಕೊಳ್ಳಬೇಕು. ಅರಣ್ಯ ಒತ್ತುವರಿ ಸಮಸ್ಯೆ ಇಂದು ನಿನ್ನೆಯದಲ್ಲ. ಕಾನೂನು ಪ್ರಕಾರ ಸಮಸ್ಯೆ ಬಗೆಹರಿಸಬೇಕು.

ಜನರ ಮೇಲೆ ಅನಗತ್ಯ ಒತ್ತಡ ಹೇರಬಾರದು. ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗದಂತೆ ಕೆಲವೊಂದು ವಿನಾಯಿತಿಗಳನ್ನು ನೀಡುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಕಸ್ತೂರಿ ರಂಗನ್ ವರದಿ ಕುರಿತು ವಿಶೇಷ ಅಧಿವೇಶನಕಸ್ತೂರಿ ರಂಗನ್ ವರದಿಯನ್ನು ಮೂರು–ನಾಲ್ಕು ಬಾರಿ ವಾಪಸ್ ಕಳುಹಿಸಲಾಗಿದೆ. ಕರ್ನಾಟಕಕ್ಕೆ ಒಂದು ರೀತಿಯ ಹಾಗೂ ಕೇರಳಕ್ಕೆ ಮತ್ತೊಂದು ರೀತಿಯ ನ್ಯಾಯ ನೀಡಲಾಗಿದೆ. ಈ ವಿಚಾರದ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

‘ಭೂಮಿ ನಮಗೆ ಸೇರಿದ್ದಲ್ಲ. ಆದರೆ ಅದನ್ನು ಕಾಪಾಡುವುದು ನಮ್ಮ ಕರ್ತವ್ಯ. ಎಷ್ಟೇ ದೊಡ್ಡವರಾದರೂ ಕೊನೆಗೆ ಭೂಮಿಯನ್ನೇ ಸೇರುತ್ತೇವೆ. ಚಿತೆಯಲ್ಲಿ ಸುಡುವ ಮರವೂ ಭೂಮಿಯ ಮೇಲೆಯೇ ಬೆಳೆಯುತ್ತದೆ’ ಎಂದು ಅವರು ಹೇಳಿದರು.

ತೇಗದ ಸಿರಿ ಯೋಜನೆಗೆ ಒತ್ತುತೇಗದ ಸಿರಿ ಯೋಜನೆಯ ಯಶಸ್ಸಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು. ಇದರಿಂದ ರೈತರಿಗೆ ಹೆಚ್ಚಿನ ಲಾಭವಾಗಲಿದೆ.

ಅರಣ್ಯ ಇಲಾಖೆಯ ಆದಾಯ ಹೆಚ್ಚಿಸುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಕೆ.ಎಚ್.ರಂಗನಾಥ್ ಅವರು ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಖಾಸಗಿ ಜಮೀನಿನಲ್ಲಿಯೂ ಶ್ರೀಗಂಧ ಬೆಳೆಯಲು ಅವಕಾಶ ಕಲ್ಪಿಸಿದ್ದರು ಎಂದು ಸ್ಮರಿಸಿದರು.

ನಗರದ ಅರಣ್ಯ ಪ್ರದೇಶಗಳಲ್ಲಿ ಟ್ರೀ ಪಾರ್ಕ್ನಗರ ಪ್ರದೇಶದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಜಾಗಗಳಲ್ಲಿ ಟ್ರೀ ಪಾರ್ಕ್ಗಳನ್ನು ನಿರ್ಮಿಸುವ ಮೂಲಕ ಬೆಂಗಳೂರಿನ ‘ಶ್ವಾಸಕೋಶ’ವನ್ನು ವಿಸ್ತರಿಸುವ ಕೆಲಸ ಮಾಡಲಾಗುವುದು.

ಶಾಲಾ ಮಕ್ಕಳಿಂದ ಗಿಡ ನೆಡುವ ಕಾರ್ಯಕ್ರಮ ಬೆಂಗಳೂರಿನಲ್ಲಿ ಯಶಸ್ವಿಯಾಗಿದ್ದು, ಪಾಲಿಕೆಗಳು ಈ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ಅರಣ್ಯದೊಂದಿಗೆ ತಮ್ಮ ಕುಟುಂಬ ಹಾಗೂ ರಾಜಕೀಯ ಬದುಕಿಗೆ ನಿಕಟ ಸಂಬಂಧವಿದೆ ಎಂದು ಸ್ಮರಿಸಿದ ಡಿ.ಕೆ.ಶಿವಕುಮಾರ್, ಹಿಂದೆ ಅರಣ್ಯ ಸಚಿವರಾಗುವ ಆಸೆ ಹೊಂದಿದ್ದರೂ ವಿವಿಧ ಸಂದರ್ಭಗಳಲ್ಲಿ ಬೇರೆ ಇಲಾಖೆಗಳ ಜವಾಬ್ದಾರಿ ದೊರೆತಿದ್ದನ್ನು ನೆನಪಿಸಿಕೊಂಡರು.

ಕಬಿನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವೇ ಹೊತ್ತಿನಲ್ಲಿ 250ಕ್ಕೂ ಹೆಚ್ಚು ಆನೆಗಳನ್ನು ಕಂಡಿದ್ದಾಗಿ ಹೇಳಿದ ಅವರು, ಕರ್ನಾಟಕ ಅಪಾರ ವನ್ಯಜೀವಿ ಸಂಪತ್ತನ್ನು ಹೊಂದಿರುವ ರಾಜ್ಯವಾಗಿದೆ. ಮನುಷ್ಯ ಮತ್ತು ಹಸಿರಿನ ನಡುವಿನ ಸಂಬಂಧವನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande