

ಬಳ್ಳಾರಿ, 11 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಯುವ ಮತದಾರರು ಪ್ರಜಾಪ್ರಭುತ್ವದ ಪ್ರಮುಖ ಶಕ್ತಿಯಾಗಿದ್ದು, ಪ್ರತಿಯೊಬ್ಬ ಅರ್ಹ ಯುವಕ-ಯುವತಿಯೂ ಮತದಾರರಾಗಿ ನೋಂದಾಯಿಸಿಕೊ0ಡು ತಮ್ಮ ಮತದಾನದ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರು ಕರೆ ನೀಡಿದರು.
ನಗರದ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಸಂಸ್ಥೆಯ ಚುನಾವಣಾ ಸಾಕ್ಷರತಾ ಕ್ಲಬ್, ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ “ಮತದಾರರ ಗುರುತಿನ ಚೀಟಿ ನೋಂದಣಿ ಅಭಿಯಾನ-2026” ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಯುವಜನತೆ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಬೇಕು. ಮತದಾನ ಕೇವಲ ಹಕ್ಕಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಯಾವುದೇ ಪ್ರಲೋಭನೆ, ಧರ್ಮ, ಜಾತಿ, ಭಾಷೆ ಅಥವಾ ಸಮುದಾಯದ ಪ್ರಭಾವಕ್ಕೆ ಒಳಗಾಗದೆ ವಿವೇಚನೆಯಿಂದ ಮತ ಚಲಾಯಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಯುವಜನರಲ್ಲಿ ಚುನಾವಣಾ ಸಾಕ್ಷರತೆ ಮೂಡಿಸುವುದು ಮತ್ತು ಅರ್ಹ ವಿದ್ಯಾರ್ಥಿಗಳನ್ನು ಮತದಾರರಾಗಿ ನೋಂದಾಯಿಸುವುದು ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ತಮ್ಮ ಕುಟುಂಬ ಹಾಗೂ ಸಮಾಜದಲ್ಲಿಯೂ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವಂತೆ ಹೇಳಿದರು.
ಅರ್ಹ ವಯಸ್ಸನ್ನು ತಲುಪಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮತದಾರರಾಗಿ ನೋಂದಾಯಿಸಿಕೊಳ್ಳುವAತೆ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಅರ್ಹ ವಿದ್ಯಾರ್ಥಿಗಳಿಗೆ ಮತದಾರರ ನೋಂದಣಿ ಪ್ರಕ್ರಿಯೆ, ಅಗತ್ಯ ಕ್ರಮಗಳು ಹಾಗೂ ಮತದಾನದ ಮಹತ್ವದ ಕುರಿತು ಅಧಿಕಾರಿಗಳು ಮತ್ತು ಸಾಕ್ಷರತಾ ಕ್ಲಬ್ನ ಸದಸ್ಯರು ಮಾರ್ಗದರ್ಶನ ನೀಡಿದರು.
ಇದೇ ವೇಳೆ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಾಗಿ ಮತದಾರರ ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಎನ್., ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಡಿಎಲ್ಎಂಟಿ ಶಿವಲಿಂಗ ರೆಡ್ಡಿ, ಬಿಐಟಿಎಂ ನಿರ್ದೇಶಕ ವೈ. ಜೆ. ಪೃಥ್ವಿರಾಜ್ ಭೂಪಾಲ್ ಹಾಗೂ ಪ್ರಾಂಶುಪಾಲ ಡಾ. ಯಡವಳ್ಳಿ ಬಸವರಾಜ್ ಸೇರಿದಂತೆ ಹಲವು ಗಣ್ಯರು, ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್