ಅಲೆಮಾರಿ ಸಮುದಾಯಗಳಿಗೆ ಸಿಗದ ಸ್ವಾತಂತ್ರ್ಯ: ಕೊತ್ತೂರು ಮಂಜುನಾಥ್ ಕಳವಳ
ಅಲೆಮಾರಿ ಸಮುದಾಯಗಳಿಗೆ ಸಿಗದ ಸ್ವಾತಂತ್ರ್ಯ: ಕೊತ್ತೂರು ಮಂಜುನಾಥ್ ಕಳವಳ
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಅಲೆಮಾರಿ ಬುಡಕಟ್ಟು ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಭಾಗವಹಿಸಿದ್ದರು.


ಕೋಲಾರ,11 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್: ದೇಶಕ್ಕೆ ಸ್ವಾತಂತ್ರ್ಯ ಬಂದು ಎಂಟು ದಶಕಗಳು ಕಳೆದಿವೆ. ಆದರೆ ಅಲೆಮಾರಿ, ಅರೆ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟು ಸಮುದಾಯಗಳಿಗೆ ಸೂಕ್ತ ಸೂರು, ಭೂಮಿ, ಶಿಕ್ಷಣ ಮತ್ತು ಮೂಲಸೌಕರ್ಯಗಳು ದೊರೆತಿಲ್ಲ. ಹೀಗಾಗಿ ಈ ಸಮುದಾಯಗಳಿಗೆ ನೈಜ ಸ್ವಾತಂತ್ರ್ಯ ಇನ್ನೂ ಮರೀಚಿಕೆಯಾಗಿದೆ. ಆದರೆ ಕಾಂಗ್ರೆಸ್ನಿಂದ ಮಾತ್ರ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರೆಯುವುದು ಸಾಧ್ಯ ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಭವನದಲ್ಲಿ ನಡೆದ ಅಲೆಮಾರಿ-ಅರೆಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟು ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಅಲೆಮಾರಿ ಸಮುದಾಯದ ಜನರು ಇಂದಿಗೂ ನೆಲದ ಮೇಲೆ ಮಲಗುವ ದುಸ್ಥಿತಿಯಲ್ಲಿದ್ದಾರೆ. ಗುಡಿಸಲುಗಳಿಗೆ ಹಾವು, ಚೇಳುಗಳು ನುಗ್ಗದಂತೆ ಮೀನಿನ ಬಲೆಗಳನ್ನು ಕಟ್ಟಿಕೊಂಡು ಬದುಕುವ ಪರಿಸ್ಥಿತಿ ಇದೆ. ಇಂತಹ ಜನರ ಬದುಕಿನಲ್ಲಿ ಬದಲಾವಣೆ ತರಲು ಸರ್ಕಾರಗಳು ಆದ್ಯತೆ ನೀಡಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ತಳಸಮುದಾಯಗಳಿಗೆ ರಾಜಕೀಯ ಶಕ್ತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮಾತ್ರ ಕಟ್ಟಕಡೆಯ ವ್ಯಕ್ತಿಯನ್ನೂ ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯ ಎಂದು ಹೇಳಿದರು.

ಕೋಲಾರ ಕ್ಷೇತ್ರದಲ್ಲಿ ತಮ್ಮ ಸಮುದಾಯದ ಮತಗಳು ಕೇವಲ ೧,೨೦೦ರಿಂದ ೧,೫೦೦ ಇದ್ದರೂ ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡಿ ಶಾಸಕನನ್ನಾಗಿ ಮಾಡಿದೆ. ಇದೀಗ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಸಕರು ಒಮ್ಮತದಿಂದ ನನ್ನನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಇದು ಅಲೆಮಾರಿ ಸಮುದಾಯಕ್ಕೆ ದೊರೆತ ಗೌರವವಾಗಿದೆ.

ಅಲೆಮಾರಿ ಸಮುದಾಯದ ಹೆಸರಿನಲ್ಲಿ ನೂರಾರು ಸಂಘಸ0ಸ್ಥೆಗಳಾಗಿ ಒಡೆದು ಹೋಗದೆ ಎಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕು. ನೂತನ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಂಘಟನೆ ಬಲಪಡಿಸಬೇಕು. ರಾಜಕೀಯವಾಗಿ ನನ್ನನ್ನು ತುಳಿಯಲು ಯತ್ನಿಸುವವರಿಗೆ ಯಾವುದೇ ಹಂತದಲ್ಲಾದರೂ ಮುಖಾಮುಖಿಯಾಗಿ ಎದುರಿಸುವ ಶಕ್ತಿ ನನಗಿದೆ ಎಂದು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್, ಅಲೆಮಾರಿ ಘಟಕದ ನೂತನ ಅಧ್ಯಕ್ಷ ಎಲ್ಲಪ್ಪ, ತಮಿಳುನಾಡಿನ ಮುಖಂಡ ಗೋಪಿನಾಥ್ ಪಳನಿಯಪ್ಪನ್ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande