
ನವದೆಹಲಿ, 11 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:1893ರ ಸೆಪ್ಟೆಂಬರ್ 11 ಭಾರತೀಯ ಇತಿಹಾಸ ಹಾಗೂ ಜಾಗತಿಕ ಆಧ್ಯಾತ್ಮಿಕ ಚಿಂತನೆಯಲ್ಲೇ ಅವಿಸ್ಮರಣೀಯ ದಿನವಾಗಿದೆ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಹೇಳಿದ್ದಾರೆ.
ಸ್ವಾಮಿ ವಿವೇಕಾನಂದರು ಇದೇ ದಿನ ಅಮೆರಿಕದ ಚಿಕಾಗೊದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನ ವೇದಿಕೆಯಿಂದ ನೀಡಿದ ಐತಿಹಾಸಿಕ ಭಾಷಣದ ಮೂಲಕ ಭಾರತದ ಶ್ರೀಮಂತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿನ ಮುಂದೆ ಪ್ರಭಾವಶಾಲಿಯಾಗಿ ಪರಿಚಯಿಸಿದರು ಎಂದು ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
‘ಅಮೆರಿಕದ ಸಹೋದರಿಯರೇ ಮತ್ತು ಸಹೋದರರೇ’ ಎಂದು ತಮ್ಮ ಭಾಷಣವನ್ನು ಆರಂಭಿಸಿದ ವಿವೇಕಾನಂದರು, ಇಡೀ ಮಾನವಕುಲವನ್ನು ಒಂದು ಕುಟುಂಬವೆಂದು ಪರಿಗಣಿಸುವ ಭಾರತೀಯ ಸಂಸ್ಕೃತಿಯ ಉದಾತ್ತ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಿದರು. ವಿವಿಧ ನಂಬಿಕೆಗಳು ಮತ್ತು ಮಾರ್ಗಗಳ ನಡುವೆ ಸಹಬಾಳ್ವೆ, ಪರಸ್ಪರ ಗೌರವ ಹಾಗೂ ಸೌಹಾರ್ದತೆಯ ಸಂದೇಶವನ್ನು ಸಾರಿದರು ಎಂದು ಬಿರ್ಲಾ ಹೇಳಿದ್ದಾರೆ.
ಶತಮಾನಗಳಿಂದ ವಿವಿಧ ಧರ್ಮಗಳು, ನಂಬಿಕೆಗಳು ಮತ್ತು ವಿಚಾರಧಾರೆಗಳಿಗೆ ಭಾರತ ನೀಡಿದ ಸ್ಥಾನವನ್ನು ವಿವೇಕಾನಂದರು ತಮ್ಮ ಭಾಷಣದಲ್ಲಿ ಎತ್ತಿ ತೋರಿಸಿದ್ದರು. ಚಿಕಾಗೊದ ವೇದಿಕೆ ಭಾರತದ ಆತ್ಮಪ್ರಜ್ಞೆ, ಆತ್ಮವಿಶ್ವಾಸ ಹಾಗೂ ಸಾಂಸ್ಕೃತಿಕ ಸಾಮರ್ಥ್ಯವನ್ನು ವಿಶ್ವದ ಮುಂದೆ ಅನಾವರಣಗೊಳಿಸಿದ ಐತಿಹಾಸಿಕ ಕ್ಷಣವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ವಿವೇಕಾನಂದರ ಚಿಂತನೆಗಳು ಪಾಶ್ಚಿಮಾತ್ಯ ಜಗತ್ತಿನ ಗಮನವನ್ನು ಭಾರತೀಯ ತತ್ವಶಾಸ್ತ್ರ, ವೇದಾಂತ ಮತ್ತು ಯೋಗದತ್ತ ಸೆಳೆಯುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಜಾಗತಿಕ ಮಟ್ಟದಲ್ಲಿ ಭಾರತದ ಆಧ್ಯಾತ್ಮಿಕ ಪರಂಪರೆಗೆ ಹೊಸ ಗುರುತನ್ನು ನೀಡುವಲ್ಲಿಯೂ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಬಿರ್ಲಾ ಹೇಳಿದ್ದಾರೆ.
ಸ್ವಾಮಿ ವಿವೇಕಾನಂದರ ಚಿಂತನೆ ಕೇವಲ ಆಧ್ಯಾತ್ಮಿಕ ಬದುಕಿಗೆ ಸೀಮಿತವಾಗಿರಲಿಲ್ಲ. ಯುವಜನರಲ್ಲಿ ಆತ್ಮವಿಶ್ವಾಸ, ಉತ್ತಮ ಗುಣನಡತೆ, ಶಿಸ್ತು, ಶಿಕ್ಷಣ ಮತ್ತು ರಾಷ್ಟ್ರಸೇವೆಯ ಮನೋಭಾವ ಬೆಳೆಸಲು ಅವರು ನಿರಂತರವಾಗಿ ಕರೆ ನೀಡಿದ್ದರು. ರಾಷ್ಟ್ರದ ಪ್ರಗತಿಯು ಅದರ ನಾಗರಿಕರ ಗುಣನಡತೆ, ಸಾಮರ್ಥ್ಯ ಮತ್ತು ಕಾಯಕನಿಷ್ಠೆಯನ್ನು ಅವಲಂಬಿಸಿದೆ ಎಂಬುದು ಅವರ ನಂಬಿಕೆಯಾಗಿತ್ತು ಎಂದು ತಿಳಿಸಿದ್ದಾರೆ.
ಐತಿಹಾಸಿಕ ಚಿಕಾಗೊ ಭಾಷಣದ ಸ್ಮರಣೆಯ ದಿನದಂದು ವಿವೇಕಾನಂದರ ವಿಚಾರಗಳನ್ನು ನಮ್ಮ ಬದುಕಿನ ಭಾಗವಾಗಿಸಿಕೊಳ್ಳುವ ಸಂಕಲ್ಪ ಮಾಡಬೇಕು. ಭಾರತದ ಮಹಾನ್ ಸಾಂಸ್ಕೃತಿಕ ಪರಂಪರೆಯನ್ನು ಅರ್ಥಮಾಡಿಕೊಂಡು ಆಧುನಿಕ ಜ್ಞಾನ-ವಿಜ್ಞಾನ, ನವೋದ್ಯಮ, ಸೇವೆ, ಸೌಹಾರ್ದತೆ ಮತ್ತು ರಾಷ್ಟ್ರ ನಿರ್ಮಾಣದ ಹಾದಿಯಲ್ಲಿ ಮುನ್ನಡೆಯುವುದು ಸ್ವಾಮಿ ವಿವೇಕಾನಂದರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಓಂ ಬಿರ್ಲಾ ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.