ಮೈ ಭಾರತ್ ಪೋರ್ಟಲ್ ನಲ್ಲಿ ವಿಕಸಿತ ಭಾರತ ರಸಪ್ರಶ್ನೆ ಸ್ಪರ್ಧೆ
ಮೈ ಭಾರತ್ ಪೋರ್ಟಲ್ನಲ್ಲಿ 'ವಿಕಸಿತ ಭಾರತ' ರಸಪ್ರಶ್ನೆ ಸ್ಪರ್ಧೆ;
ಮೈ ಭಾರತ್ ಯುವಜನ ಸೇವಾ ಅಧಿಕಾರಿ ಮಹೇಂದ್ರ ರೆಡ್ಡಿ


ಕೋಲಾರ: 11 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ವತಿಯಿಂದ 'ಮೈ ಭಾರತ್' ಪೋರ್ಟಲ್ ಮೂಲಕ 'ವಿಕಸಿತ ಭಾರತ ಯುವ ನಾಯಕರ ಸಂವಾದ ರಸಪ್ರಶ್ನೆ ಸ್ಪರ್ಧೆ' ಆಯೋಜಿಸಲಾಗಿದೆ. ಯುವಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋಲಾರ ಜಿಲ್ಲಾ ಮೈ ಭಾರತ್ ಅಧಿಕಾರಿ ಎ. ಮಹೇಂದ್ರ ರೆಡ್ಡಿ ಮನವಿ ಮಾಡಿದರು.

ಕೋಲಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ ೧೭ರಂದು ಚಾಲನೆಗೊಂಡಿರುವ ಈ ಆನ್ಲೈನ್ ರಸಪ್ರಶ್ನೆ ಸ್ಪರ್ಧೆಯು ಸೆಪ್ಟೆಂಬರ್ ೩೦ರವರೆಗೆ ನಡೆಯಲಿದೆ. ೧೫ ರಿಂದ ೨೯ ವರ್ಷದೊಳಗಿನ ಯುವಕ-ಯುವತಿಯರು ಯಾವುದೇ ಶೈಕ್ಷಣಿಕ ಅರ್ಹತೆಯ ನಿರ್ಬಂಧವಿಲ್ಲದೆ ಇದರಲ್ಲಿ ಭಾಗವಹಿಸಬಹುದು. ಸ್ಪರ್ಧೆಯು ಆನ್ಲೈನ್, ಜಿಲ್ಲಾ ಮತ್ತು ರಾಜ್ಯ ಹಂತಗಳಲ್ಲಿ ನಡೆಯಲಿದ್ದು, ವಿಜೇತರು ೨೦೨೭ರ ಜನವರಿ ೧೦ ರಿಂದ ೧೨ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಧಾನಮಂತ್ರಿ ಅವರೊಂದಿಗೆ ಸಂವಾದ ನಡೆಸುವ ಸದವಕಾಶ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ರಸಪ್ರಶ್ನೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ತಕ್ಷಣವೇ ಇ-ಪ್ರಮಾಣಪತ್ರ ದೊರೆಯಲಿದೆ ಹಾಗೂ ಸ್ಪರ್ಧೆಯಲ್ಲಿ ಉತ್ತೀರ್ಣರಾಗಲು ೫ ಅವಕಾಶಗಳನ್ನು ನೀಡಲಾಗುತ್ತದೆ. ಕೋಲಾರ ಜಿಲ್ಲೆಯಲ್ಲಿ ಮೈ ಭಾರತ್ ಪೋರ್ಟಲ್ ನೋಂದಣಿಗೆ ಒಟ್ಟು ೪೦,೦೦೦ ಗುರಿ ಹೊಂದಲಾಗಿದ್ದು, ಈವರೆಗೆ ೧೪,೫೦೦ (ಸುಮಾರು ಶೇ.೧೪ ರಷ್ಟು) ಯುವಜನರು ನೋಂದಾಯಿಸಿಕೊಂಡಿದ್ದಾರೆ. ರಸಪ್ರಶ್ನೆ ಸ್ಪರ್ಧೆಗಾಗಿ ಜಿಲ್ಲೆಯಿಂದ ೧೦,೦೯೯ ಮಂದಿಯ ಗುರಿ ನಿಗದಿಪಡಿಸಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ತಲುಪುವ ನಿಟ್ಟಿನಲ್ಲಿ ಡಿಡಿಪಿಐ, ಡಿಡಿಪಿಯು, ಎನ್ಎಸ್ಎಸ್ ಹಾಗೂ ಎನ್ಸಿಸಿ ಸಂಯೋಜಕರೊಂದಿಗೆ ಸಮನ್ವಯ ಸಾಧಿಸಲಾಗುತ್ತಿದ್ದು, ಕಳೆದ ನಾಲ್ಕು ದಿನಗಳಲ್ಲಿ ೨೦ಕ್ಕೂ ಹೆಚ್ಚು ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗಿದೆ ಎಂದರು.

'ಮೈ ಭಾರತ್' ಕೇವಲ ರಸಪ್ರಶ್ನೆಗೆ ಸೀಮಿತವಾಗಿಲ್ಲ; ಪೋರ್ಟಲ್ ಮೂಲಕ ಯುವಜನರಿಗೆ ಇಂಟರ್ನ್ಶಿಪ್, ವೃತ್ತಿ ಮಾರ್ಗದರ್ಶನ, ಕೌಶಲ್ಯಾಭಿವೃದ್ಧಿ ಹಾಗೂ ಉಚಿತ ಸರ್ಟಿಫಿಕೇಟ್ ಕೋರ್ಸ್ಗಳಂತಹ ಅನೇಕ ಉದ್ಯೋಗ ಪೂರಕ ಅವಕಾಶಗಳನ್ನು ಒದಗಿಸಲಾಗುತ್ತಿದೆ. ೧೯೭೨ರಿಂದ ಕಾರ್ಯನಿರ್ವಹಿಸುತ್ತಿದ್ದ 'ನೆಹರು ಯುವ ಕೇಂದ್ರ'ವನ್ನು ಇತ್ತೀಚೆಗಷ್ಟೇ 'ಮೈ ಭಾರತ್ ಕೇಂದ್ರ' ಎಂದು ಮರುನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು.

ಹೆಸರು ಬದಲಾವಣೆ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಗ್ರಾಮೀಣ ಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮುಂಬರುವ ದಿನಗಳಲ್ಲಿ ವೃತ್ತಿ ಮಾರ್ಗದರ್ಶನ, ಪರಿಸರ ಮಾಲಿನ್ಯ ನಿಯಂತ್ರಣ, ಪ್ಲಾಸ್ಟಿಕ್ ಬಳಕೆ ನಿಷೇಧ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಜಿಲ್ಲೆಯಾದ್ಯಂತ ವ್ಯಾಪಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande