
ಕೋಲಾರ, 11 ಸೆಪ್ಟೆಂಬರ್ (ಹಿ.ಸ)
ಆ್ಯಂಕರ್ : ತಾಲೂಕಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ವೆಲಗಲಬರ್ರೆ ಗ್ರಾಮದ ದಲಿತ ಚಿಕ್ಕಮುನಿಯಪ್ಪರಿಗೆ ಸೇರುವ ನಿವೇಶನವನ್ನು ಕಬಳಿಸಲು ಬೇನಾಮಿ ಹೆಸರನ್ನು ಸೇರಿಸಿ ಇ-ಸ್ವತ್ತು ಮಾಡಲಾಗಿದೆ. ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನುರಾಧ, ಕಾರ್ಯದರ್ಶಿ ನಾರಾಯಣಸ್ವಾಮಿ, ಕರವಸೂಲಿಗಾರ ಗೋಪಾಲ್ ಹಾಗೂ ಪ್ರಸ್ತುತ ಪಿಡಿಒ ನಾಗರಾಜ್ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮುಂದೆ ಕರ್ನಾಟಕ ಡಾ.ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಡಾ.ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನ ಸಮಿತಿ ಸಂಸ್ಥಾಪಕ ನಾಗನಾಳ ಶಂಕರ್ ಮಾತನಾಡಿ, ೧೯೭೨ ರಲ್ಲಿ ಸ್ವಾತಂತ್ರ ಪೂರ್ವ ಸರ್ಕಾರಿ ವಸತಿ ನಿವೇಶನ ಮಂಜೂರಾತಿ ಯೋಜನೆಯಡಿ ಗ್ರಾಮದ ಸರ್ವೇ ನಂಬರ್ ೧೫ರ ೧೩ನೇ ಕ್ರಮ ಸಂಖ್ಯೆ ನಿವೇಶನವನ್ನು ಚಿಕ್ಕಮುನಿಯಪ್ಪ ಅವರಿಗೆ ಮಂಜೂರಾಗಿದೆ. ಆದರೆ, ಗ್ರಾಮ ಪಂಚಾಯತಿಯವರು ಹಣ ಮಾಡುವ ಉದ್ದೇಶದಿಂದ ಬೇನಾಮಿ ವ್ಯಕ್ತಿಗಳನ್ನು ಸೃಷ್ಟಿಸಿ ಇ ಸ್ವತ್ತು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ವಿಚಾರದ ಬಗ್ಗೆ ಗ್ರಾಮ ಪಂಚಾಯಿತಿಯ ಹಿಂದಿನ ಅಧಿಕಾರಿಗಳಾದ ಪಿಡಿಒ ಅನುರಾಧ, ಕಾರ್ಯದರ್ಶಿ ನಾರಾಯಣಸ್ವಾಮಿ ಅವರಿಗೆ ಹಲವು ಅರ್ಜಿಗಳು ನೀಡಿದ್ದರೂ ಸ್ಪಂದಿಸುತ್ತಿರಲಿಲ್ಲ. ಲೋಕಾಯುಕ್ತ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಇಲ್ಲಿ ಅರ್ಜಿ ನೀಡಲಾಗಿದ್ದು, ಇದರ ಬಗ್ಗೆ ವಿವರಣೆ ನೀಡಲು ವರದಿ ಕೇಳುತ್ತಿದ್ದರು, ಅಧಿಕಾರಿಗಳು ಸ್ಪಂದಿಸದೆ ನಿರ್ಲಕ್ಷ÷್ಯ ತೋರುತ್ತಿದ್ದಾರೆ. ಫಲಾನುಭವಿ ಚಿಕ್ಕಮುನಿಯಪ್ಪರಿಗೆ ಒಂದು ವಾರದ ಒಳಗಡೆ ಹಕ್ಕು ಪತ್ರ, ಇ ಖಾತೆ ಮಾಡಿಕೊಟ್ಟು, ಇದರ ಬಗ್ಗೆ ನಿರ್ಲಕ್ಷ ತೋರಿರುವ ಅಧಿಕಾರಿಗಳ ವಿರುದ್ಧ ತನಿಖೆ ಮಾಡಿ ಕಾನೂನು ಕ್ರಮ ಕೈಗೊಂಡು, ಬಡ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಜಿಲ್ಲಾ ಪಂಚಾಯಿತಿ ಮುಂದೆ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಡಾ.ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನ ಸಮಿತಿಯ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಶಶಿಕುಮಾರ್, ಪದಾಧಿಕಾರಿಗಳಾದ ಡಿಎಸ್ಎಸ್ ಮನೋಹರ್, ಆಂಜಿ, ನಡುಪಲ್ಲಿ ವೆಂಕಟೇಶ್, ರಮೇಶ್, ಅಮೀರ್ ಪಾಷ, ರಾಂಪುರ ಮುನಿರಾಜ್ ಮತ್ತಿತರರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್