
ಬೆಂಗಳೂರು, 11 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ಆಡಳಿತ ನಡೆಸುವ ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿ ಮಾಡಬೇಕು ಎಂಬ ಹಠ ಇರಬೇಕೇ ಹೊರತು, ಸಾವಿರಾರು ಕೋಟಿ ರೂಪಾಯಿ ಕಮಿಷನ್ ದಂಧೆಗೆ ಕಾರಣವಾಗುವ ಸುರಂಗ ರಸ್ತೆ ನಿರ್ಮಾಣ ಮಾಡಬೇಕು ಎಂಬ ಹಠ ಇರಬಾರದು ಎಂದು ಬಿಜೆಪಿ ನಾಯಕ ಸಿ.ಟಿ. ರವಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಡಿಯೇ ತೀರುತ್ತೇನೆ ಎಂಬ ಹಠಕ್ಕೆ ಬಿದ್ದಿರುವ ಸುರಂಗ ರಸ್ತೆ ಬೆಂಗಳೂರಿನ ವಾಸ್ತವ ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ಟೀಕಿಸಿದ್ದಾರೆ.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಿದರೆ ಬೆಂಗಳೂರಿನ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ, ಅದು ಸರ್ಕಾರದ ಆದ್ಯತೆಯ ವಿಚಾರವಾಗಿಲ್ಲ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಉಪನಗರ ರೈಲು, ಮೆಟ್ರೋ ಹಾಗೂ ಬಿಎಂಟಿಸಿ ಸೇವೆಗಳನ್ನು ವಿಸ್ತರಿಸಿದರೆ ಸಮಸ್ಯೆ ತಾನೇ ಕಡಿಮೆಯಾಗಲಿದೆ. ಆದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸುವ ಹಾಗೂ ರಸ್ತೆ ದುರಸ್ತಿ ಮಾಡುವತ್ತ ಸರ್ಕಾರಕ್ಕೆ ಆಸಕ್ತಿ ಇಲ್ಲ ಎಂದು ಸಿ.ಟಿ. ರವಿ ದೂರಿದ್ದಾರೆ.
ಸಾವಿರಾರು ಕೋಟಿ ರೂಪಾಯಿ ಗುಳುಂ ಮಾಡುವ ಯೋಜನೆಗಳಲ್ಲಷ್ಟೇ ಕಾಂಗ್ರೆಸ್ ಸರ್ಕಾರಕ್ಕೆ ಆಸಕ್ತಿ ಇದೆ ಎಂದು ಆರೋಪಿಸಿರುವ ಅವರು, ಕಮಿಷನ್ ಯೋಜನೆಯಾಗಿರುವ ಸುರಂಗ ರಸ್ತೆ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣಕ್ಕೆ ಸುರಂಗ ಕೊರೆಯುವ ಯೋಜನೆಯನ್ನು ಜಾರಿಗೊಳಿಸಲು ಕನ್ನಡಿಗರು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.