
ಬೆಂಗಳೂರು, 11 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಕರ್ನಾಟಕದ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ವಲಯದ ಬೆಳವಣಿಗೆಯನ್ನು ಪರಿಚಯಿಸಿ, ನೆದರ್‌ಲ್ಯಾಂಡ್ಸ್ ಮೂಲದ ಜಾಗತಿಕ ಸೆಮಿಕಂಡಕ್ಟರ್ ಸಂಸ್ಥೆ ನೆಕ್ಸ್‌ಪೀರಿಯಾ ರಾಜ್ಯದಲ್ಲಿ ಎಟಿಎಂಪಿ ಘಟಕ ಸ್ಥಾಪಿಸುವಂತೆ ಆಹ್ವಾನಿಸಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ನೆದರ್‌ಲ್ಯಾಂಡ್ಸ್‌ನಲ್ಲಿ ಹೂಡಿಕೆ ಆಕರ್ಷಣೆಯ ಪ್ರಯತ್ನ ಮುಂದುವರಿಸಿರುವ ಸಚಿವರು, ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್, ಆಹಾರ ಮತ್ತು ಪೌಷ್ಟಿಕತೆ, ಪಾನೀಯ, ಆರೋಗ್ಯ ತಂತ್ರಜ್ಞಾನ ಮತ್ತು ಜೀವ ವಿಜ್ಞಾನ, ಕೃಷಿ, ವೇಗವಾಗಿ ಬಳಕೆಯಾಗುವ ಗ್ರಾಹಕ ಉತ್ಪನ್ನಗಳು ಹಾಗೂ ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖ ನೆದರ್‌ಲ್ಯಾಂಡ್ಸ್ ಕಂಪನಿಗಳೊಂದಿಗೆ ಸರಣಿ ಸಭೆಗಳನ್ನು ಆರಂಭಿಸಿದ್ದಾರೆ.
ಈ ಭಾಗವಾಗಿ ನೆಕ್ಸ್‌ಪೀರಿಯಾ ಸಂಸ್ಥೆಯ ಜಾಗತಿಕ ವಕಾಲತ್ತು ಮತ್ತು ಮೈತ್ರಿಗಳ ವಿಭಾಗದ ಹಿರಿಯ ನಿರ್ದೇಶಕ ಹ್ಯಾನೆಸ್ ವ್ಯಾನ್ ರೇಮ್ಡಾಂಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ಎಂ.ಬಿ. ಪಾಟೀಲ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯ ಕುರಿತು ಸಂಸ್ಥೆಗೆ ವಿವರಿಸಲಾಗಿದ್ದು, ಎಟಿಎಂಪಿ (ಜೋಡಣೆ, ಪರೀಕ್ಷೆ, ಗುರುತು ಮತ್ತು ಪ್ಯಾಕೇಜಿಂಗ್) ಘಟಕವನ್ನು ರಾಜ್ಯದಲ್ಲಿ ಸ್ಥಾಪಿಸುವ ಸಾಧ್ಯತೆಯನ್ನು ಪರಿಗಣಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಬಲಿಷ್ಠ ಮಾನವ ಸಂಪನ್ಮೂಲ, ಸುಸ್ಥಿರ ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆ ಹಾಗೂ ವಿಸ್ತರಿಸುತ್ತಿರುವ ಸೆಮಿಕಂಡಕ್ಟರ್ ಸಾಮರ್ಥ್ಯಗಳೊಂದಿಗೆ ಭಾರತದಲ್ಲಿ ನೆಕ್ಸ್‌ಪೀರಿಯಾ ಸಂಸ್ಥೆಯ ಬೆಳವಣಿಗೆಗೆ ಕರ್ನಾಟಕ ಅತ್ಯುತ್ತಮ ಹೂಡಿಕೆ ತಾಣವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.