
ಗದಗ, 11 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- ಗಣೇಶೋತ್ಸವ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವಂತೆ ಗದಗ ಜಿಲ್ಲೆಯ ನರಗುಂದ ಪುರಸಭೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಹಬ್ಬವನ್ನು ಶಾಂತಿಯುತವಾಗಿ ಹಾಗೂ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಆಚರಿಸುವಂತೆ ಪುರಸಭೆ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಬಳಸುವ ವಿಷಕಾರಿ ರಾಸಾಯನಿಕಗಳು, ಲೋಹದ ಲೇಪನ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಪರಿಸರ ಮತ್ತು ಜಲಮೂಲಗಳಿಗೆ ಹಾನಿಕಾರಕವಾಗಿರುವುದರಿಂದ ಇಂತಹ ಮೂರ್ತಿಗಳನ್ನು ಬಳಕೆ ಮಾಡದಂತೆ ಸೂಚಿಸಲಾಗಿದೆ. ಅದರ ಬದಲಾಗಿ ಸರಳ ಜೇಡಿಮಣ್ಣಿನಿಂದ ತಯಾರಿಸಿದ ಪುಟ್ಟ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಮನವಿ ಮಾಡಲಾಗಿದೆ.
ಅದೇ ರೀತಿ ಎಲೆ, ಹೂವು ಸೇರಿದಂತೆ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಬಣ್ಣಗಳನ್ನು ಬಳಸಿ ಗಣೇಶ ಮೂರ್ತಿಗಳನ್ನು ಅಲಂಕರಿಸುವಂತೆ ತಿಳಿಸಲಾಗಿದೆ. ಗಣೇಶನ ಚಪ್ಪರ ಹಾಗೂ ಸಾರ್ವಜನಿಕವಾಗಿ ನಡೆಯುವ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಸಾಧ್ಯವಾದಷ್ಟು ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಬೇಕು. ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತಪ್ಪಿಸುವಂತೆ ಪುರಸಭೆ ಮನವಿ ಮಾಡಿದೆ.
ಬಾವಿ, ಕೆರೆಗಳಲ್ಲಿ ವಿಸರ್ಜನೆ ಬೇಡ
ಗಣೇಶ ಮೂರ್ತಿಗಳನ್ನು ಬಾವಿ, ಕೆರೆ ಹಾಗೂ ಇತರೆ ಜಲಮೂಲಗಳಲ್ಲಿ ಎಲ್ಲೆಂದರಲ್ಲಿ ವಿಸರ್ಜನೆ ಮಾಡಬಾರದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಮೂರ್ತಿಗಳಲ್ಲಿರುವ ರಾಸಾಯನಿಕ ಬಣ್ಣ ಹಾಗೂ ಇತರ ವಸ್ತುಗಳು ನೀರನ್ನು ಕಲುಷಿತಗೊಳಿಸುವ ಸಾಧ್ಯತೆ ಇರುವುದರಿಂದ ಕುಡಿಯುವ ನೀರು ಮತ್ತು ಅಂತರ್ಜಲದ ಸಂರಕ್ಷಣೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಲಾಗಿದೆ.
ಮೂರ್ತಿಗಳನ್ನು ಮನೆಯಲ್ಲಿಯೇ ಬಕೆಟ್ನಲ್ಲಿ ವಿಸರ್ಜಿಸುವುದು ಅಥವಾ ಪುರಸಭೆಯಿಂದ ವ್ಯವಸ್ಥೆ ಮಾಡಲಾಗುವ ಸಂಚಾರಿ ವಿಸರ್ಜನಾ ವಾಹನಗಳ ಸದುಪಯೋಗಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಪುರಸಭೆ ನಿಗದಿಪಡಿಸಿರುವ ಕೆರೆಗಳಲ್ಲಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಗಣೇಶ ಮೂರ್ತಿಯೊಂದಿಗೆ ಇರುವ ಹೂವು, ವಸ್ತ್ರ, ಪ್ಲಾಸ್ಟಿಕ್ ಹಾರ ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ಮುಂಚಿತವಾಗಿ ತೆಗೆದುಹಾಕಬೇಕು ಎಂದು ತಿಳಿಸಲಾಗಿದೆ.
ಪಟಾಕಿ ಸಿಡಿಸದಂತೆ ಮನವಿ
ಗಣೇಶೋತ್ಸವದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ತಪ್ಪಿಸುವಂತೆ ಪುರಸಭೆ ಮನವಿ ಮಾಡಿದೆ. ಪಟಾಕಿಗಳಿಂದ ಹೊರಬರುವ ಹೊಗೆ ವಾಯುಮಾಲಿನ್ಯಕ್ಕೆ ಕಾರಣವಾಗುವುದರ ಜೊತೆಗೆ ಶಬ್ದ ಮಾಲಿನ್ಯವೂ ಉಂಟಾಗುತ್ತದೆ. ಪಟಾಕಿಗಳಿಂದ ಉಂಟಾಗುವ ಕಸವೂ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಗ್ರಹವಾಗುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ತಿಳಿಸಲಾಗಿದೆ.
ಹಬ್ಬದ ಸಂದರ್ಭದಲ್ಲಿ ರಸ್ತೆ, ಚರಂಡಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹೂವಿನ ಹಾರ, ತಟ್ಟೆ, ಲೋಟ, ಎಲೆ ಹಾಗೂ ಇತರೆ ತ್ಯಾಜ್ಯಗಳನ್ನು ಎಸೆಯದೆ, ಕಸದ ವಾಹನಗಳಿಗೆ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಗಣೇಶೋತ್ಸವವು ಭಕ್ತಿ, ಸಂಭ್ರಮದ ಜೊತೆಗೆ ಪರಿಸರ ಸಂರಕ್ಷಣೆಯ ಸಂದೇಶವನ್ನೂ ಸಾರುವಂತಾಗಬೇಕು. ಹೀಗಾಗಿ ಪ್ರತಿಯೊಬ್ಬರೂ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸುವುದರೊಂದಿಗೆ ಪುರಸಭೆಯ ನಿಯಮಗಳನ್ನು ಪಾಲಿಸಿ, ನಿಗದಿಪಡಿಸಿದ ಸ್ಥಳಗಳಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸಬೇಕು ಎಂದು ನರಗುಂದ ಪುರಸಭೆ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP