ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಮಂಡ್ಯದಲ್ಲಿ ಬಾರುಕೋಲು ಚಳುವಳಿ
ನೀರು ಬಿಡದಂತೆ ಸರ್ಕಾರಕ್ಕೆ ಆಗ್ರಹ
Mandya Cauvery Water Protest: Kannada Sena Holds Chaddi and Barukolu Agitation


ಮಂಡ್ಯ, 11 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ ಕನ್ನಡ ಸೇನೆ ನೇತೃತ್ವದಲ್ಲಿ ಮಂಡ್ಯದಲ್ಲಿ ವಿಭಿನ್ನ ರೀತಿಯ ‘ಚಡ್ಡಿ ಹಾಗೂ ಬಾರುಕೋಲು’ ಚಳುವಳಿ ನಡೆಸಲಾಯಿತು.

ನಗರದ ಸಿಲ್ವರ್ ಜೂಬಿಲಿ ಪಾರ್ಕ್ನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಹೋರಾಟಗಾರರು, ಘೋಷಣೆಗಳನ್ನು ಕೂಗುತ್ತಾ ಸಂಜಯ ವೃತ್ತದವರೆಗೆ ರ್ಯಾಲಿ ನಡೆಸಿದರು.

ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಒತ್ತಾಯಿಸಿದರು.

‘ನೀರು ಬಿಡುವುದಿಲ್ಲ ಎಂದು ಹೇಳಿ ರಾತ್ರೋರಾತ್ರಿ ನೀರು ಹರಿಸಲಾಗುತ್ತಿದೆ’ ಎಂದು ಆರೋಪಿಸಿದ ಹೋರಾಟಗಾರರು, ಸರ್ಕಾರ ಕಾವೇರಿ ವಿಚಾರದಲ್ಲಿ ಮಂಡ್ಯ ರೈತರಿಗೆ ಅನ್ಯಾಯ ಮಾಡುತ್ತಿದೆ.

ಇದೀಗ ಕಾವೇರಿ ಅವಲಂಬಿತ ಜನರಿಗೂ ಮೋಸ ಮಾಡಲಾಗುತ್ತಿದೆ ಎಂದು ದೂರಿದರು.ಇದೇ ರೀತಿ ನೀರು ಹರಿಸುವುದನ್ನು ಮುಂದುವರಿಸಿದರೆ ಕೆಆರ್ಎಸ್ ಜಲಾಶಯ ಬರಿದಾಗುವ ಅಪಾಯವಿದೆ.

ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಬರದಿಂದ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯ ಕೇಳಿಬಂತು.

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರನ್ನು ಓಲೈಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕಾವೇರಿ ನೀರು ಹರಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಾವೇರಿ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಧ್ವನಿ ಎತ್ತುತ್ತಿಲ್ಲ ಹಾಗೂ ರಾಜ್ಯದ ಸಚಿವರು ಮೌನ ವಹಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಸೇನೆ ರಾಜ್ಯಾಧ್ಯಕ್ಷ ಕುಮಾರ್, ಜಿಲ್ಲಾಧ್ಯಕ್ಷ ಮಂಜುನಾಥ್ ಸೇರಿದಂತೆ ಹಲವು ಹೋರಾಟಗಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ಭದ್ರತಾ ವ್ಯವಸ್ಥೆ ಕೈಗೊಂಡಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande