ಬನಶಂಕರಿ 6ನೇ ಹಂತದಲ್ಲಿ ಚಿರತೆ ಪ್ರತ್ಯಕ್ಷ; ನಿವಾಸಿಗಳಲ್ಲಿ ಆತಂಕ
ಬೆಂಗಳೂರು, 11 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ನಗರದ ಬನಶಂಕರಿ 6ನೇ ಹಂತದಲ್ಲಿ ಚಿರತೆಯೊಂದು ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕೇಶವ್ ಎಂಬುವವರಿಗೆ ಸೇರಿದ ಮನೆಯ ಮುಂಭಾಗದಲ್ಲಿ ಚಿರತೆ ಓಡಾಡಿರುವುದು ಕಂಡುಬಂದಿದ್ದು, ಬಳಿಕ ಮನೆಯ ಸಮೀಪ ಅದರ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ನ
Leopard Spotted In Banashankari 6th Stage, Residents Panic


ಬೆಂಗಳೂರು, 11 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ನಗರದ ಬನಶಂಕರಿ 6ನೇ ಹಂತದಲ್ಲಿ ಚಿರತೆಯೊಂದು ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಕೇಶವ್ ಎಂಬುವವರಿಗೆ ಸೇರಿದ ಮನೆಯ ಮುಂಭಾಗದಲ್ಲಿ ಚಿರತೆ ಓಡಾಡಿರುವುದು ಕಂಡುಬಂದಿದ್ದು, ಬಳಿಕ ಮನೆಯ ಸಮೀಪ ಅದರ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ನಾಯಿ ಬೊಗಳಿದ ಹಿನ್ನೆಲೆಯಲ್ಲಿ ಚಿರತೆ ಅಲ್ಲಿಂದ ತೆರಳಿದೆ ಎನ್ನಲಾಗಿದೆ. ನಂತರ ಮನೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಚಿರತೆ ಓಡಾಡಿರುವುದು ದೃಢಪಟ್ಟಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಕಾಣಿಸಿಕೊಂಡಿರುವುದು ಸುಮಾರು ಎರಡು ವರ್ಷದ ಗಂಡು ಚಿರತೆಯಾಗಿದ್ದು, ಒಂಟಿಯಾಗಿ ಸಂಚರಿಸುತ್ತಿದೆ. ಬನಶಂಕರಿ ಪ್ರದೇಶವು ಅರಣ್ಯ ಪ್ರದೇಶದ ಅಂಚಿನಲ್ಲಿರುವುದರಿಂದ ಚಿರತೆಗಳು ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ಜನವಸತಿ ಪ್ರದೇಶಗಳತ್ತ ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಜನವಸತಿ ಪ್ರದೇಶಕ್ಕೆ ಚಿರತೆಗಳು ಪ್ರವೇಶಿಸದಂತೆ ಅರಣ್ಯ ಇಲಾಖೆ ತಕ್ಷಣ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

“ಈ ಪ್ರದೇಶ ಅರಣ್ಯದ ಅಂಚಿನಲ್ಲಿರುವುದರಿಂದ ಚಿರತೆಗಳು ಆಗಾಗ್ಗೆ ಕಾಣಿಸಿಕೊಳ್ಳುವ ಆತಂಕವಿದೆ. ಚಿರತೆಗಳು ಜನವಸತಿ ಪ್ರದೇಶಕ್ಕೆ ಬಾರದಂತೆ ಕಂದಕ ನಿರ್ಮಿಸುವುದು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಮಕ್ಕಳಿರುವ ಮನೆಗಳಲ್ಲಿ ಭಯ ಹೆಚ್ಚಾಗಿದೆ. ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು,” ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ರಾತ್ರಿ ಹಾಗೂ ಮುಂಜಾನೆ ಸಮಯದಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಮಕ್ಕಳು ಒಂಟಿಯಾಗಿ ಹೊರಗೆ ತೆರಳದಂತೆ ಪೋಷಕರು ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande