
ಕೋಲಾರ, 11 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಮುಂದಿನ ೨೦೨೮ರಲ್ಲಿ ರಾಜ್ಯದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ. ಸಾಮಾಜಿಕ ಜಾಲತಾಣ ಈಗ ಪರಿಣಾಮಕಾರಿಯಾಗಿದೆ. ಅದನ್ನು ನಾವು ಸರಿಯಾಗಿ ಬಳಸಿಕೊಂಡಿಲ್ಲ. ಇನ್ನಾದರೂ ಸಮರ್ಥವಾಗಿ ಹಾಗೂ ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪಕ್ಷದ ಯುವ ಕಾರ್ಯಕರ್ತರಿಗೆ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಕರೆ ನೀಡಿದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾತ್ಯತೀತ ಜನತಾದಳದ ಸಾಮಾಜಿಕ ಜಾಲತಾಣ ಸಕ್ರಿಯ ಕಾರ್ಯಕರ್ತರ ಸಭೆ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಅವರ ಕೋಲಾರದ ಗೃಹ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಎನ್ಡಿಎನಲ್ಲಿ ಕುಮಾರಸ್ವಾಮಿ ಮಾಸ್ ನಾಯಕ, ಅವರಿಗೆ ಉತ್ತಮ ಭವಿಷ್ಯ ಇದೆ. ಅವರ ನೇತೃತ್ವದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
ಎಲ್ಲಾ ತಾಲ್ಲೂಕುಗಳಲ್ಲಿ ಯಾವ ರೀತಿ ರಾಜಕೀಯ ನಡೆಯುತ್ತಿದೆ ಎಂಬುದು ನನಗ ಗೊತ್ತು. ಕೋಲಾರ ತಾಲ್ಲೂಕಿನ ಪರಿಸ್ಥಿತಿಯನ್ನು ವರಿಷ್ಠರ ಗಮನಕ್ಕೆ ತರುತ್ತೇನೆ. ಸಮಸ್ಯೆ ಬಗೆಹರಿದರೆ ಜಿಲ್ಲೆಯಲ್ಲಿ ಐದು ಕ್ಷೇತ್ರ ಗೆಲ್ಲಬಹುದು. ಎಸ್ಐಆರ್ ನಲ್ಲಿ ಪ್ರತಿ ಕ್ಷೇತ್ರದಲ್ಲಿ ೨೦ ಸಾವಿರ ಗಲೀಜು (ಬೋಗಸ್) ವೋಟುಗಳು ಹೋಗಿವೆ. ಇದು ಕೂಡ ನಮಗೆ ನೆರವಾಗಲಿದೆ. ನಾನು ೫೦ ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ೧೦ ಚುನಾವಣೆ ಎದುರಿಸಿದ್ದೇನೆ. ಹಿಂದಿನ ಚುನಾವಣಾ ರೀತಿಯೇ ಬೇರೆ, ಎಲೆ-ಅಡಿಕೆ ಕೊಟ್ಟರೆ ಸಾಕಿತ್ತು. ಈಗ ಕೋಟಿ ಕೋಟಿ ಖರ್ಚು ಮಾಡುವ ಮಟ್ಟಕ್ಕೆ ಹೋಗಿದೆ. ರಾಜಕಾರಣದಲ್ಲಿ ನಾನು ದುಡ್ಡು ಮಾಡಿಲ್ಲ. ಆರೋಗ್ಯವೇ ನನ್ನ ಸರ್ವಸ್ವ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ೨೦೨೮ರ ವಿಧಾನಸಭೆ ಚುನಾವಣೆಗೆ ಸಾಮಾಜಿಕ ಜಾಲತಾಣ ಪ್ರಮುಖ ಅಸ್ತವಾಗಲಿದೆ. ಅದಕ್ಕೆ ಕೇವಲ ೨೦ ತಿಂಗಳು ಇದೆ. ಹೀಗಾಗಿ, ಪರಿಣಾಮಕಾರಿಯಾಗಿ ಬಳಸಿಕೊಂಡು ಜೆಡಿಎಸ್ ಪಕ್ಷ ಸಂಘಟನೆ ಮಾಡಬೇಕು. ದೇವೇಗೌಡರು, ಕುಮಾರಣ್ಣ, ನಿಖಿಲ್ ಕುಮಾರಸ್ವಾಮಿ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಮುಂದೆ ಮೈತ್ರಿ ಸರ್ಕಾರ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂದರು.
ನಾನು ಸುಮಾರು ೧೫ ವರ್ಷಗಳಿಂದ ಯಾವುದೇ ಅಪೇಕ್ಷೆ ಇಲ್ಲದೆ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಜಾಲತಾಣದಲ್ಲಿ ಲಕ್ಷಾಂತರ ಮಂದಿಗೆ ಸಂದೇಶ ಕೊಡಬಹುದು, ಬಹಳ ವೇಗವಾಗಿ ಮುಟ್ಟುತ್ತದೆ. ಅದಕ್ಕೆ ಉದಾಹರಣೆ ಪ್ರಧಾನಿ ಮೋದಿ. ಜೆನ್ ಜಿ ವಿಚಾರವಾಗಿ ಅವರು ಮಾಡಿದ ಸ್ವ ವಿಡಿಯೋವನ್ನು ಕೋಟ್ಯಂತರ ಮಂದಿ ವೀಕ್ಷಿಸಿದರು. ನಮ್ಮಲ್ಲಿ ಬಹಳ ಹಿಂದೆಯೇ ಸಾಮಾಜಿಕ ಜಾಲತಾಣ ಬಳಕೆ ಇತ್ತು, ಆದರೆ ಮುಖಂಡರು ಸರಿಯಾಗಿ ಬಳಸಿಕೊಂಡಿಲ್ಲ. ಹಲವರು ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ಇಡೀ ರಾಜ್ಯಕ್ಕೆ ಮಾದರಿಯಾಗುವಂತೆ ಸಾಮಾಜಿಕ ಜಾಲತಾಣ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ನಮ್ಮೆಲ್ಲರ ಉದ್ದೇಶದಿಂದ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ವೈಯಕ್ತಿಕ ನಿಂದನೆ ಮಾಡಬಾರದು, ಪ್ರಚೋದನೆ ಮಾಡಬಾರದು. ಮೈತ್ರಿ ಪಕ್ಷ ಬಿಜೆಪಿಗೆ ಮುಜುಗರ ಮಾಡಬಾರದು. ಬೇರೆ ವಿಷಯಗಳು ಟನ್ ಗಟ್ಟಲೆ ಸಮಸ್ಯೆ ಇವೆ. ಕೆಪಿಎಸ್ಸಿ ಹಗರಣ ಇದೆ, ಗ್ಯಾರಂಟಿ ಯೋಜನೆ ಜನರಿಗೆ ಸರಿಯಾಗಿ ತಲುಪುತ್ತಿಲ್ಲ, ಸರಿಯಾಗಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಈ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗಮನ ಹರಿಸಿ ಲೋಪದೋಷಗಳನ್ನು ಪತ್ತೆಹಚ್ಚಿ ಪೋಸ್ಟ್ ಮಾಡಬೇಕು ಎಂದು ಸಲಹೆ ನೀಡಿದರು.
ವೇಮಗಲ್ ಕುರಗಲ್ ಪಟ್ಟಣ ಪಂಚಾಯಿತಿ ಸದಸ್ಯ ಲೋಕೇಶ್ ಮರಿಯಪ್ಪ ಮಾತನಾಡಿ ಶಾಸಕ ವೆಂಕಟಶಿವಾರೆಡ್ಡಿ ರಾಜಕಾರಣಿ ಎನ್ನುವುದಕ್ಕಿಂತ ಕುಟುಂಬದ ಯಜಮಾನ. ಅವರ ಅನುಭವದ ಜೊತೆಗೆ ಆಧುನಿಕ ವ್ಯವಸ್ಥೆ ಬಳಸಿಕೊಂಡು ಪಕ್ಷ ಸಂಘಟನೆ ಮಾಡಬೇಕು. . ಸಿಎಂಆರ್ ಶ್ರೀನಾಥ್ ನೇತೃತ್ವದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿದೆ. ಆದರೆ ಅದು ಬೆಳಕಿಗೆ ಬರುತ್ತಿಲ್ಲ. ಸಾಮಾಜಿಕ ಜಾಲತಾಣದ ಕುರಿತು ತರಬೇತಿ ಕೊಡಬೇಕು, ತಂಡ ಮಾಡಲಾಗುತ್ತಿದೆ ಎಂದರು.
ಸಭೆಯಲ್ಲಿ ಮುಖಂಡರಾದ ರವಿ, ಹೊಲ್ಲರಹಳ್ಳಿ ಅಶೋಕ್, ಶೆಟ್ಟಿಗಾನಹಳ್ಳಿ ಸಂತೋಷ್, ವಕ್ಕಲೇರಿ ಚಿರಂಜೀವಿ, ಯಲುವಗುಳಿ ನಾಗರಾಜ್, ಎಂಐ ಸಿಟಿ ಮಂಜು, ಬೆಟ್ಟೇಗೌಡ, ಕುರಗಲ್ ಗಿರೀಶ್, ಡಿವಿಜಿ ಮಂಜು, ಮನು, ಮಹೇಶ್, ಬಹದ್ದೂರ್ ಖಾನ್, ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಆಸಕ್ತಿ ಹೊಂದಿರುವ ಜೆಡಿಎಸ್ ಪಕ್ಷದ ಆರು ತಾಲ್ಲೂಕಿನ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್