

ಬಳ್ಳಾರಿ, 11 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಸಾಮಾನ್ಯವಾಗಿ ‘ಫ್ಲೂ’ ಎಂದು ಕರೆಯಲಾಗುವ ಋತುಮಾನದ ಇನ್ಫ್ಲುಯೆಂಜಾ ಜ್ವರದ ಬಗ್ಗೆ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಹಾಗೂ ಜಾಗೃತಿ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಲಕಾನಂದ ಡಿ. ಮಳಗಿ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಕರ್ನಾಟಕದಲ್ಲಿ ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ- ಜನವರಿಯಿಂದ ಮಾರ್ಚ್ ಹಾಗೂ ಜುಲೈನಿಂದ ಸೆಪ್ಟೆಂಬರ್ವರೆಗೆ ಇನ್ಫ್ಲುಯೆಂಜಾ ಸೋಂಕು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಜಿಲ್ಲೆಯಾದ್ಯಂತ ಇನ್ಫ್ಲುಯೆಂಜಾ ಪತ್ತೆಹಚ್ಚಲು, ಪರಿಣಾಮಕಾರಿಯಾಗಿ ನಿರ್ವಹಿಸಲು ಹಾಗೂ ನಿಯಂತ್ರಿಸಲು ಆರೋಗ್ಯ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ನಿರ್ವಹಿಸಲು ಜಿಲ್ಲೆಯ ಆರೋಗ್ಯ ಸಂಸ್ಥೆಗಳು ಅಗತ್ಯ ಮೂಲಸೌಕರ್ಯ ಹಾಗೂ ಔಷಧಗಳೊಂದಿಗೆ ಸಂಪೂರ್ಣ ಸಜ್ಜಾಗಿವೆ ಎಂದು ಅವರು ತಿಳಿಸಿದ್ದಾರೆ.
*ರೋಗ ಲಕ್ಷಣಗಳು:*
ಹಠಾತ್ ಜ್ವರ, ಚಳಿ, ಒಣಕೆಮ್ಮು, ಗಂಟಲು ನೋವು, ತಲೆನೋವು, ಮೈ-ಕೈ ನೋವು, ತೀವ್ರ ನಿಶ್ಯಕ್ತಿ (ದೌರ್ಬಲ್ಯ), ಸುಸ್ತು, ಮೂಗು ಸೋರುವುದು ಮತ್ತು ಕಟ್ಟಿಕೊಳ್ಳುವುದು, ವಾಂತಿ ಹಾಗೂ ಭೇದಿ (ಅತಿಸಾರ).
*ಸೋಂಕು ಹರಡುವ ವಿಧಾನ ಹಾಗೂ ಅಪಾಯದ ಗುಂಪುಗಳು:*
ಸೋ0ಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ಹನಿಗಳ ಮೂಲಕ ಹಾಗೂ ವೈರಸ್ ಇರುವ ಕೈಗಳಿಂದ ಕಣ್ಣು, ಮೂಗು, ಬಾಯಿ ಮುಟ್ಟಿಕೊಳ್ಳುವುದರಿಂದ ಈ ಸೋಂಕು ಹರಡುತ್ತದೆ. ಗರ್ಭಿಣಿಯರು, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 65 ವರ್ಷ ಮೇಲ್ಪಟ್ಟ ಹಿರಿಯರು, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರು ಈ ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚಿರುತ್ತದೆ.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ವಿ.ಕೆ. ಅವರು ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡಿ, ಸಾಬೂನು ಮತ್ತು ನೀರಿನಿಂದ ಆಗಾಗ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಕೆಮ್ಮುವಾಗ, ಸೀನುವಾಗ ಕರವಸ್ತçದಿಂದ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು. ಜನದಟ್ಟಣೆ ಹಾಗೂ ಗಾಳಿಯಾಡದ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅನಾರೋಗ್ಯವಿದ್ದಾಗ ಮನೆಯಲ್ಲೇ ವಿಶ್ರಾಂತಿ ಪಡೆಯಬೇಕು ಮತ್ತು ಇತರರಿಂದ ಅಂತರ ಕಾಯ್ದುಕೊಳ್ಳಬೇಕು. ಕಲುಷಿತ ಕೈಗಳಿಂದ ಕಣ್ಣು, ಮೂಗು, ಬಾಯಿಯನ್ನು ಮುಟ್ಟಬಾರದು ಎಂದು ತಿಳಿಸಿದ್ದಾರೆ.
*ವೈದ್ಯರ ಸಲಹೆ ಪಡೆಯುವುದು ಯಾವಾಗ?:*
ಸಾಮಾನ್ಯ ಲಕ್ಷಣಗಳಿದ್ದಾಗ ಸಾಕಷ್ಟು ವಿಶ್ರಾಂತಿ, ಹೆಚ್ಚು ದ್ರವಾಹಾರ ಸೇವನೆ ಹಾಗೂ ರೋಗಲಕ್ಷಣಕ್ಕೆ ತಕ್ಕ ಚಿಕಿತ್ಸೆ ಸಾಕಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ವೈದ್ಯರ ಚೀಟಿ ಇಲ್ಲದೆ ಸ್ವಯಂಪ್ರೇರಿತರಾಗಿ ಆಂಟಿಬಯೋಟಿಕ್ ಸೇವಿಸಬಾರದು.
ಉಸಿರಾಟದ ತೊಂದರೆ, ಎದೆನೋವು, ನಿರಂತರ ಅಥವಾ ತೀವ್ರ ಜ್ವರ, ತೀವ್ರ ದೌರ್ಬಲ್ಯ ಕಂಡುಬ0ದಲ್ಲಿ ತಕ್ಷಣವೇ ಸಮೀಪದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕೆಂದು ಅವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್