
ಬೆಂಗಳೂರು, 11 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಸಿನಿಮಾ ಹಾಗೂ ಸಾಂಸ್ಕೃತಿಕ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಅನುದಾನ ಒದಗಿಸುವ ಉದ್ದೇಶದಿಂದ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ಗಳ ಸಿನಿಮಾ ಟಿಕೆಟ್ಗಳ ಮೇಲೆ ಶೇ.2ರಷ್ಟು ಸೆಸ್ ಸಂಗ್ರಹಿಸುವಂತೆ ರಾಜ್ಯ ಸರ್ಕಾರ ನೀಡಿದ್ದ ನೋಟಿಸ್ಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಪಿವಿಆರ್ ಐನಾಕ್ಸ್ ಲಿಮಿಟೆಡ್ ಹಾಗೂ ಶಂತನು ಪೈ ಅವರು ಸೆಸ್ ಸಂಗ್ರಹಕ್ಕೆ ಸಂಬಂಧಿಸಿದ ಸರ್ಕಾರದ ಆದೇಶ ಮತ್ತು ನೋಟಿಸ್ಗಳನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರ ಏಕಸದಸ್ಯ ಪೀಠ, ಕಾರ್ಮಿಕ ಇಲಾಖೆಯು ನೀಡಿದ್ದ ನೋಟಿಸ್ಗಳನ್ನು ರದ್ದುಪಡಿಸಿ ಆದೇಶಿಸಿದೆ.
ಕಾಯಿದೆ ಜಾರಿಗೆ ಅಧಿಸೂಚನೆ ಇಲ್ಲ: ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಮಿಕರ (ಕ್ಷೇಮಾಭಿವೃದ್ಧಿ) ಅಧಿನಿಯಮ–2024ರಡಿ ಸೆಪ್ಟೆಂಬರ್ 1ರಿಂದ ಟಿಕೆಟ್ ದರದ ಮೇಲೆ ಶೇ.2ರಷ್ಟು ಸೆಸ್ ಸಂಗ್ರಹಿಸುವಂತೆ ಕಾರ್ಮಿಕ ಆಯುಕ್ತರು ಆಗಸ್ಟ್ 29ರಂದು ಕಚೇರಿ ಆದೇಶ ಹೊರಡಿಸಿದ್ದರು.
ಆದರೆ, ಕಾಯಿದೆ ಜಾರಿಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಬಂದಿಲ್ಲ ಎಂದು ಸರ್ಕಾರವೇ ನ್ಯಾಯಾಲಯಕ್ಕೆ ತಿಳಿಸಿದೆ. ಅಲ್ಲದೆ, ಸೆಸ್ ಸಂಗ್ರಹಕ್ಕೆ ಸಂಬಂಧಿಸಿದ ಕಚೇರಿ ಆದೇಶವನ್ನು ಸೆಪ್ಟೆಂಬರ್ 9ರಂದು ಹಿಂಪಡೆಯಲಾಗಿದೆ ಎಂದು ತಿಳಿಸಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಉದಯ್ ಹೊಳ್ಳ ಅವರು, ಕಾಯಿದೆಯ ಸೆಕ್ಷನ್ 1(2)ರಂತೆ ಸರ್ಕಾರ ಪ್ರತ್ಯೇಕ ಅಧಿಕೃತ ಅಧಿಸೂಚನೆ ಹೊರಡಿಸಿದ ಬಳಿಕವೇ ಕಾಯಿದೆ ಜಾರಿಗೆ ಬರಬೇಕು. ಆದರೆ ಕಾಯಿದೆ ಜಾರಿಯಾಗುವ ಮುನ್ನವೇ ಸೆಸ್ ಪಾವತಿಸುವಂತೆ ನೋಟಿಸ್ ನೀಡಲಾಗಿದೆ ಎಂದು ವಾದಿಸಿದರು.
ಈ ವಾದ ಹಾಗೂ ಸರ್ಕಾರದ ಸ್ಪಷ್ಟನೆ ಪರಿಗಣಿಸಿದ ನ್ಯಾಯಪೀಠ, ಇನ್ನೂ ಜಾರಿಗೆ ಬರದ ಕಾಯಿದೆಯನ್ನು ಆಧರಿಸಿ ಸೆಸ್ ಸಂಗ್ರಹಕ್ಕೆ ನೀಡಿದ್ದ ನೋಟಿಸ್ಗಳು ಮಾನ್ಯವಲ್ಲ ಎಂದು ಹೇಳಿ ಅವುಗಳನ್ನು ರದ್ದುಗೊಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R