
ಕಿನ್ಶಾಸಾ (ಕಾಂಗೋ),10 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ಆಫ್ರಿಕಾದ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಪೂರ್ವ ಭಾಗದಲ್ಲಿರುವ ಬುಕಾವು ನಗರದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 27 ಮಕ್ಕಳು ಮೃತಪಟ್ಟಿದ್ದಾರೆ. ಮೃತರಲ್ಲಿ 19 ಬಾಲಕಿಯರು ಹಾಗೂ 8 ಬಾಲಕರು ಸೇರಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ 300ಕ್ಕೂ ಹೆಚ್ಚು ಮನೆಗಳು ಹಾಗೂ ಎರಡು ಶಾಲೆಗಳು ಆಹುತಿಯಾಗಿವೆ.
ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಅಧಿಕೃತ ಸರ್ಕಾರಿ ಸುದ್ದಿ ಸಂಸ್ಥೆ ‘ಎಜೆನ್ಸ್ ಕಾಂಗೊಲೈಸ್ ಡಿ ಪ್ರೆಸ್’ ಸೆ.10ರಂದು ಪ್ರಸಾರ ಮಾಡಿದ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ.
ಆಸ್ಪತ್ರೆ ಹಾಗೂ ಶಾಲಾ ಮೂಲಗಳಿಂದ ದೊರೆತ ಪ್ರಾಥಮಿಕ ಮಾಹಿತಿಯಂತೆ ದುರಂತದಲ್ಲಿ 29 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 17 ಮಂದಿಗೆ ಕದುತು ಸಾಮಾನ್ಯ ಆಸ್ಪತ್ರೆಯಲ್ಲಿ ಹಾಗೂ 12 ಮಂದಿಗೆ ಕದುತು ಪ್ರಾಂತೀಯ ಸಾಮಾನ್ಯ ಉಲ್ಲೇಖ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಾಲಾ ಮೂಲಗಳ ಪ್ರಕಾರ, 300ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಆಹುತಿಯಾಗಿವೆ. ಬಗೀರಾ ಕಮ್ಯೂನ್‌ನಲ್ಲಿರುವ ಇಪಿ ಮೊಸಾಲಾ ಹಾಗೂ ಕದುತು ಕಮ್ಯೂನ್‌ನಲ್ಲಿರುವ ಇಪಿ ನೊಂಗೊ ಶಾಲೆಗಳಿಗೂ ಬೆಂಕಿಯಿಂದ ಹಾನಿಯಾಗಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ.
ಕಾಶೆಕೆ, ಲುಗುಲು ಮತ್ತು ಎಲಿಲಾ ಎಂಬ ಮೂರು ರಸ್ತೆಗಳಿಗೂ ಬೆಂಕಿ ವ್ಯಾಪಿಸಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಬುಕಾವು ನಗರದ ಮೇಲೆ ರುವಾಂಡಾ ಸೇನೆ ಹಾಗೂ ಅದರ ಎಂ23 ಸಶಸ್ತ್ರ ಗುಂಪಿನ ನಿಯಂತ್ರಣವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸ್ಥಳೀಯ ನಿವಾಸಿಯೊಬ್ಬರು ಆತಂಕ ವ್ಯಕ್ತಪಡಿಸಿ, ಬುಕಾವು ನಗರದಲ್ಲಿ ಏನಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಒಂದು ತಿಂಗಳ ಅವಧಿಯಲ್ಲಿ ಸಂಭವಿಸಿದ 18 ಅಗ್ನಿ ಅವಘಡಗಳಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸರ್ಕಾರದ ನೆರವಿನ ಅಗತ್ಯವಿದೆ. ಶಾಲೆಗಳ ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವ ಸಂದರ್ಭದಲ್ಲಿ ಮಕ್ಕಳೊಂದಿಗೆ ರಾತ್ರಿ ಎಲ್ಲಿ ಉಳಿಯಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.