
ಬೆಂಗಳೂರು, 11 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಕೇಂದ್ರ ಸರ್ಕಾರ ಜಾತಿಗಣತಿ ನಡೆಸಲು ಒಪ್ಪಿಕೊಂಡಿದ್ದರೂ, ಅದರ ಕಾರ್ಯವಿಧಾನದಲ್ಲಿ ಲೋಪಗಳಿದ್ದು, ನಿಖರ ದತ್ತಾಂಶ ದೊರೆಯುವ ಬಗ್ಗೆ ಆತಂಕವಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಾತಿಗಣತಿ ತಡೆಯಲು ರಾಜಕೀಯವಾಗಿ ಪ್ರಯತ್ನಿಸಿ ವಿಫಲವಾಗಿರುವ ಕೇಂದ್ರ ಸರ್ಕಾರ, ಇದೀಗ ಕಾರ್ಯವಿಧಾನದಲ್ಲೇ ತಪ್ಪುಗಳನ್ನು ಸೇರಿಸುವ ಮೂಲಕ ನಿಖರ ದತ್ತಾಂಶ ಸಿಗದಂತೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ಜಾತಿಗಣತಿ ಹಳಿತಪ್ಪದಂತೆ ನಿಗಾ ವಹಿಸುವುದು ಪ್ರಮುಖ ಸವಾಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಾತಿಗಣತಿ ನಡೆಸುವ ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೊಂಡಾಗ ರಾಜ್ಯ ಸರ್ಕಾರ ಮುಕ್ತ ಮನಸ್ಸಿನಿಂದ ಸ್ವಾಗತಿಸಿತ್ತು. ಆದರೆ ಜಾತಿಗಣತಿಯನ್ನು ಪ್ರಾಮಾಣಿಕವಾಗಿ ನಡೆಸಿ, ಸೂಕ್ತ ಹಾಗೂ ಉಪಯುಕ್ತ ದತ್ತಾಂಶ ನೀಡುತ್ತದೆಯೇ ಎಂಬುದು ಮುಖ್ಯ ಪ್ರಶ್ನೆಯಾಗಿದೆ ಎಂದು ಪರಮೇಶ್ವರ ಹೇಳಿದ್ದಾರೆ.
ಒಬಿಸಿ ಮತ್ತು ಇತರೆ ಸಮುದಾಯಗಳ ಜಾತಿ ಗುರುತಿಸುವಿಕೆಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಗಂಭೀರ ಸಮಸ್ಯೆಗಳನ್ನು ಸೃಷ್ಟಿಸಬಹುದು. ಒಂದೇ ಜಾತಿಯನ್ನು ವಿವಿಧ ಹೆಸರುಗಳು, ಉಪಜಾತಿಗಳು, ಪ್ರಾದೇಶಿಕ ಹಾಗೂ ಸ್ಥಳೀಯ ಹೆಸರುಗಳಿಂದ ದಾಖಲಿಸುವ ಸಾಧ್ಯತೆಯಿದ್ದು, ಇದರಿಂದ ಒಂದೇ ಜಾತಿ ಸಾವಿರಾರು ಪ್ರತ್ಯೇಕ ಜಾತಿಗಳಾಗಿ ದಾಖಲಾಗುವ ಅಪಾಯವಿದೆ. ಒಂದೇ ಜಾತಿಯನ್ನು ವಿವಿಧ ಹೆಸರುಗಳಿಂದ ಗುರುತಿಸಿದರೆ ಅದರ ನೈಜ ಜನಸಂಖ್ಯೆಯನ್ನು ಹೇಗೆ ಪತ್ತೆಹಚ್ಚಲು ಸಾಧ್ಯ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಮಾಣಿತ ಜಾತಿ ಸೂಚಕ ಅಗತ್ಯ
ದೇಶದ ಸಾಮಾಜಿಕ ರಚನೆ ಕುರಿತು ನಿಖರ, ವಿಶ್ವಾಸಾರ್ಹ ಹಾಗೂ ವೈಜ್ಞಾನಿಕವಾಗಿ ಬಳಸಬಹುದಾದ ದತ್ತಾಂಶ ಸಿದ್ಧವಾದಾಗ ಮಾತ್ರ ಜಾತಿಗಣತೆಯ ಉದ್ದೇಶ ಈಡೇರುತ್ತದೆ. ಜನಗಣತಿಯ ಅರ್ಜಿಯಲ್ಲಿ ‘ಯಾವ ಜಾತಿ’ ಎಂಬ ಪ್ರಶ್ನೆಯನ್ನು ಸೇರಿಸುವುದರಿಂದ ಮಾತ್ರ ಪ್ರಯೋಜನವಿಲ್ಲ. ಜಾತಿಗಳನ್ನು ವಿಭಜಿಸುವ ರೀತಿಯ ಕಾರ್ಯವಿಧಾನ ರೂಪುಗೊಂಡರೆ ಅವುಗಳನ್ನು ಮತ್ತೆ ಕ್ರೋಢೀಕರಿಸುವುದು ಕಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ.
ಪ್ರತಿಯೊಂದು ಜಾತಿಗೂ ಒಂದು ಪ್ರಮಾಣಿತ ಗುರುತು ಅಥವಾ ಸೂಚಕ ಇರಬೇಕು. ಜನರು ತಮ್ಮ ಸ್ಥಳೀಯ ಅಥವಾ ಪರ್ಯಾಯ ಗುರುತನ್ನು ದಾಖಲಿಸಿದ ಬಳಿಕ, ಅವುಗಳನ್ನು ವೈಜ್ಞಾನಿಕವಾಗಿ ಕ್ರೋಢೀಕರಿಸುವ ವ್ಯವಸ್ಥೆ ಇರಬೇಕು. ಇದರಿಂದ ಪ್ರತಿಯೊಂದು ಜಾತಿಯನ್ನೂ ನಿಖರವಾಗಿ ಗುರುತಿಸಿ, ಅದರ ಜನಸಂಖ್ಯೆಯನ್ನು ಲೆಕ್ಕಹಾಕಲು ಸಾಧ್ಯವಾಗುತ್ತದೆ ಎಂದು ಪರಮೇಶ್ವರ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗಣತಿಗೆ ವ್ಯವಸ್ಥೆ ಇರುವಾಗ ಒಬಿಸಿ ಗಣತಿಗೂ ವೈಜ್ಞಾನಿಕ ರೂಪುರೇಷೆ ಸಿದ್ಧಪಡಿಸಲು ಸಾಧ್ಯವಾಗಬೇಕು. ರಾಜ್ಯ ಸರ್ಕಾರಗಳು ಈಗಾಗಲೇ ಹಿಂದುಳಿದ ವರ್ಗಗಳು ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳ ಪಟ್ಟಿಗಳನ್ನು ಹೊಂದಿವೆ. ಜಾತಿಗಳನ್ನು ಗುರುತಿಸುವುದು, ಮೀಸಲಾತಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ರಾಜ್ಯಗಳಿಗೆ ದಶಕಗಳ ಅನುಭವವಿದೆ. ಹೀಗಿರುವಾಗ ಕೇಂದ್ರ ಸರ್ಕಾರ ಈ ಪಟ್ಟಿಗಳನ್ನು ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕರ್ನಾಟಕದ ಅನುಭವ ಬಳಸಿಕೊಳ್ಳಲಿ
ಕರ್ನಾಟಕ ಈಗಾಗಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಹೊಂದಿದೆ. ಬಿಹಾರ ಹಾಗೂ ತೆಲಂಗಾಣದಲ್ಲಿಯೂ ಜಾತಿ ಆಧಾರಿತ ಗಣತಿ ನಡೆಸಲಾಗಿದೆ. ಈ ಅನುಭವಗಳನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳಬೇಕು. ರಾಜ್ಯ ಸರ್ಕಾರ ತನ್ನ ಅನುಭವವನ್ನು ಹಂಚಿಕೊಳ್ಳಲು ಮತ್ತು ಅಗತ್ಯವಿದ್ದರೆ ತಜ್ಞರ ತಂಡವನ್ನು ಕಳುಹಿಸಲು ಸಿದ್ಧವಿದೆ ಎಂದು ಪರಮೇಶ್ವರ ತಿಳಿಸಿದ್ದಾರೆ.
ಜಾತಿಗಣತಿ ಕೇವಲ ಅಂಕಿಸಂಖ್ಯೆಗಳನ್ನು ಸಂಗ್ರಹಿಸುವ ಕಸರತ್ತಲ್ಲ. ಅದು ಸಾಮಾಜಿಕ ನ್ಯಾಯದ ಸಾಧನವಾಗಿದೆ. ಮೀಸಲಾತಿ, ಶಿಕ್ಷಣ, ಉದ್ಯೋಗ, ಕಲ್ಯಾಣ ಕಾರ್ಯಕ್ರಮಗಳು, ರಾಜಕೀಯ ಪ್ರಾತಿನಿಧ್ಯ ಹಾಗೂ ಆರ್ಥಿಕ ಅವಕಾಶಗಳಿಗೆ ಸಂಬಂಧಿಸಿದಂತೆ ಸಮಕಾಲೀನ ಮತ್ತು ಸಮಗ್ರ ಜಾತಿ ದತ್ತಾಂಶದ ಅಗತ್ಯವಿದೆ. ಯಾರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿವೆ, ಯಾರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಖರ ದತ್ತಾಂಶ ಅಗತ್ಯ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರ ನೈಜ ಸಂಖ್ಯೆಯನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ಉತ್ತಮ ನೀತಿಗಳನ್ನು ರೂಪಿಸಬೇಕಿದೆ. ಶತಮಾನಗಳಿಂದ ಸಮಾನ ಅವಕಾಶಗಳಿಂದ ವಂಚಿತರಾದವರಿಗೆ ಅಭಿವೃದ್ಧಿಯ ಫಲ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಜಾತಿಗಣತಿಯ ದತ್ತಾಂಶ ಅಗತ್ಯ. ಮುಖ್ಯವಾಗಿ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಒಳಗೊಂಡ ಅಹಿಂದ ಸಮುದಾಯಗಳಿಗೆ ಇದು ಅಗತ್ಯವಾಗಿದೆ ಎಂದು ಪರಮೇಶ್ವರ ತಿಳಿಸಿದ್ದಾರೆ.
ಕೇಂದ್ರಕ್ಕೆ ಏಳು ಸಲಹೆಗಳು
ಜಾತಿಗಣತಿ ಕಾರ್ಯವಿಧಾನವನ್ನು ಸರಿಪಡಿಸಬೇಕು. ವೈಜ್ಞಾನಿಕ ರಾಷ್ಟ್ರೀಯ ಪ್ರಮಾಣಿತ ಜಾತಿ ಪಟ್ಟಿಯನ್ನು ಸಿದ್ಧಪಡಿಸಿ, ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ನಿರ್ದಿಷ್ಟ ಜಾತಿ ಸೂಚಕ ವ್ಯವಸ್ಥೆ ರೂಪಿಸಬೇಕು. ಕೇಂದ್ರ ಮತ್ತು ರಾಜ್ಯಗಳ ಒಬಿಸಿ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಗಳನ್ನು ಸಮನ್ವಯಗೊಳಿಸಬೇಕು.
ಪರ್ಯಾಯ ಹೆಸರುಗಳು, ಉಪಜಾತಿಗಳು ಹಾಗೂ ಪ್ರಾದೇಶಿಕ ಗುರುತುಗಳಿಗೆ ಪ್ರಮಾಣಿತ ಜಾತಿ ಸೂಚಕ ರೂಪಿಸಬೇಕು. ಪಟ್ಟಿಯಲ್ಲಿ ಇಲ್ಲದ ಸಮುದಾಯಗಳನ್ನು ದಾಖಲಿಸಲು ಹಾಗೂ ನಂತರ ಪರಿಶೀಲಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ರಾಜ್ಯ ಸರ್ಕಾರಗಳು, ರಾಜಕೀಯ ಪಕ್ಷಗಳು, ಸಾಮಾಜಿಕ ನ್ಯಾಯ ತಜ್ಞರು ಮತ್ತು ಸಮುದಾಯಗಳ ಮುಖಂಡರೊಂದಿಗೆ ಸಮಾಲೋಚಿಸಿ ಅಂತಿಮ ಕಾರ್ಯವಿಧಾನ ರೂಪಿಸಬೇಕು. ಅಂತಿಮ ದತ್ತಾಂಶವು ಮೀಸಲಾತಿ, ಪ್ರಾತಿನಿಧ್ಯ, ಶಿಕ್ಷಣ, ಉದ್ಯೋಗ, ಅಭಿವೃದ್ಧಿ ಯೋಜನೆಗಳು ಹಾಗೂ ಆರ್ಥಿಕ ಅವಕಾಶಗಳಿಗೆ ಸಂಬಂಧಿಸಿದ ಸೂಕ್ತ ನೀತಿಗಳನ್ನು ರೂಪಿಸಲು ಸಹಕಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜಾತಿಗಣತಿಗೆ ಒತ್ತಾಯಿಸುತ್ತಿರುವುದು ಕೇವಲ ಜನಗಣತಿಯ ಅರ್ಜಿಯಲ್ಲಿ ಜಾತಿಯ ಪ್ರಶ್ನೆ ಸೇರಿಸುವುದಕ್ಕಾಗಿ ಅಲ್ಲ. ಸಾಮಾಜಿಕ ನ್ಯಾಯದ ಉದ್ದೇಶಕ್ಕಾಗಿ ಅಗತ್ಯವಿರುವ ಜಾತಿವಾರು ದತ್ತಾಂಶಕ್ಕಾಗಿ ಜನರು ಒತ್ತಾಯಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಪರಮೇಶ್ವರ ಹೇಳಿದ್ದಾರೆ.
ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಜಾತಿಗಣತಿ ನಡೆಸಬೇಕು. ಇಲ್ಲವಾದರೆ ಜಾತಿಗಣತಿ ನಡೆಸಲು ಏಕೆ ಹಿಂಜರಿಯುತ್ತಿದೆ ಎಂಬುದನ್ನು ದೇಶದ ಜನತೆಗೆ ವಿವರಿಸಬೇಕು. ದೇಶಕ್ಕೆ ಕೇವಲ ಜಾತಿಗಣತಿಯ ಅಂಕಿಸಂಖ್ಯೆಗಳು ಬೇಕಿಲ್ಲ. ಮುಂದಿನ ಪೀಳಿಗೆಗೆ ಸಾಮಾಜಿಕ ನ್ಯಾಯ ಒದಗಿಸಲು ಅಗತ್ಯವಾದ ನಿಖರ ಜಾತಿವಾರು ದತ್ತಾಂಶ ಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
“ಪ್ರತಿಯೊಂದು ಜಾತಿಯನ್ನು ಗಣತಿ ಮಾಡಿ, ಪ್ರತಿಯೊಂದು ಸಮುದಾಯವನ್ನು ಗುರುತಿಸಿ, ಭಾರತದ ಅಭಿವೃದ್ಧಿಯಲ್ಲಿ ಪ್ರತಿಯೊಂದು ಸಮುದಾಯಕ್ಕೂ ನ್ಯಾಯಯುತ ಸ್ಥಾನಮಾನ ನೀಡಬೇಕು” ಎಂಬುದು ತಮ್ಮ ಒತ್ತಾಯವಾಗಿದೆ ಎಂದು ಡಾ. ಜಿ. ಪರಮೇಶ್ವರ ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R