ಬೆಂಗಳೂರಿನ ಸರ್ಕಾರಿ ಶಾಲೆಗಳಿಗೆ ಸಿಜೆಪಿ ನಿಯೋಗ ಭೇಟಿ
ಬೆಂಗಳೂರಿನ ಸರ್ಕಾರಿ ಶಾಲೆಗಳಲ್ಲಿ ಸಿಜೆಪಿ ನಿಯೋಗದ ‘ಸ್ಕೂಲ್ ರೌಂಡ್ಸ್’
CJP School Rounds in Bengaluru: Government School Infrastructure, Cleanliness and Teacher Shortage Highlighted


ಬೆಂಗಳೂರು, 11 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ನಗರದ ವಿವಿಧ ಭಾಗಗಳ ಸರ್ಕಾರಿ ಶಾಲೆಗಳಿಗೆ ಕಳೆದ ಎರಡು ದಿನಗಳಿಂದ ಸಿಜೆಪಿ (ಕಾಕ್ರೋಚ್ ಜನತಾ ಪಾರ್ಟಿ) ನಿಯೋಗ ಭೇಟಿ ನೀಡಿ, ಶಾಲೆಗಳಲ್ಲಿನ ಸ್ವಚ್ಛತೆ, ಮೂಲಸೌಕರ್ಯ ಹಾಗೂ ಶಿಕ್ಷಕರ ಲಭ್ಯತೆ ಕುರಿತು ಪರಿಶೀಲನೆ ನಡೆಸಿದೆ.

ಸಿಜೆಪಿ ಸಹ ಸಂಚಾಲಕ ಅಶುತೋಷ್ ರಾಂಕ ನೇತೃತ್ವದ ನಿಯೋಗವು ಜೆ.ಪಿ.ನಗರ, ಯಶವಂತಪುರ, ವರ್ತೂರು, ಕೈಕೊಂಡನಹಳ್ಳಿ, ಯಲಹಂಕ, ವೈಟ್ಫೀಲ್ಡ್ ಸೇರಿದಂತೆ ವಿವಿಧ ಪ್ರದೇಶಗಳ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿತು. ಈ ವೇಳೆ ಶಾಲಾ ಆವರಣದ ಸ್ವಚ್ಛತೆ ಹಾಗೂ ಶೌಚಾಲಯಗಳ ನಿರ್ವಹಣೆ ಕುರಿತು ನಿಯೋಗ ಅಸಮಾಧಾನ ವ್ಯಕ್ತಪಡಿಸಿತು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕೊರತೆ, ಕಳಪೆ ಸ್ಥಿತಿಯಲ್ಲಿರುವ ಶೌಚಾಲಯಗಳು ಸೇರಿದಂತೆ ಹಲವು ಸಮಸ್ಯೆಗಳ ಕುರಿತು ನಿಯೋಗ ಮಾಹಿತಿ ಸಂಗ್ರಹಿಸಿತು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ ಶಾಲೆಗಳಲ್ಲಿನ ಸಮಸ್ಯೆಗಳ ಬಗ್ಗೆ ನೇರವಾಗಿ ಮಾಹಿತಿ ಪಡೆಯಲಾಯಿತು.

ಇದೇ ವೇಳೆ ಜಿಬಿಎ ಹಾಗೂ ಕೆಪಿಎಸ್ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕುರಿತು ಕೂಡ ಮಾಹಿತಿ ಕಲೆಹಾಕಲಾಗಿದೆ. ಎಸ್ಐಆರ್ ಕೆಲಸದ ಹಿನ್ನೆಲೆಯಲ್ಲಿ ಶಿಕ್ಷಕರ ಗೈರುಹಾಜರಿಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆಯೂ ನಿಯೋಗ ಗಮನ ಹರಿಸಿದೆ.

ನಿಯೋಗವು ಕರ್ನಾಟಕದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ಶಾಲಾ ಭೇಟಿಗಳ ವೇಳೆ ಗಮನಿಸಿದ ಸಮಸ್ಯೆಗಳ ಕುರಿತು ಚರ್ಚಿಸಿತು.

ವಿಶೇಷವಾಗಿ ಶಾಲೆಗಳ ಸ್ವಚ್ಛತೆ, ಎಸ್ಐಆರ್ ಕಾರ್ಯದಿಂದ ಶಿಕ್ಷಕರ ಗೈರುಹಾಜರಿ ಹಾಗೂ ಉರ್ದು ಮಾಧ್ಯಮ ಶಾಲೆಗಳಲ್ಲಿನ ಮೂಲಸೌಕರ್ಯ ಕೊರತೆ ಕುರಿತು ಸಚಿವರೊಂದಿಗೆ ವಿವರವಾದ ಮಾತುಕತೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಅವರು ಸುಮಾರು 2,000 ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಅಭಿವೃದ್ಧಿಪಡಿಸುವ ಕೆಪಿಎಸ್ ಯೋಜನೆ ಕುರಿತು ನಿಯೋಗಕ್ಕೆ ಮಾಹಿತಿ ನೀಡಿದರು.

ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ವಿದ್ಯಾರ್ಥಿಗಳ ಕಲ್ಯಾಣಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಸರ್ಕಾರದೊಂದಿಗೆ ರಚನಾತ್ಮಕವಾಗಿ ಚರ್ಚಿಸುವುದು ಅಗತ್ಯ ಎಂದು ಸಿಜೆಪಿ ಪ್ರತಿನಿಧಿಗಳು ಅಭಿಪ್ರಾಯಪಟ್ಟರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande