
ಗದಗ, 11 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- ಹಿಂದುಳಿದ ಹಾಗೂ ಬಡ ಸಮುದಾಯಗಳಲ್ಲಿ ಯಾರಾದರೂ ಮೃತಪಟ್ಟ ಸಂದರ್ಭದಲ್ಲಿ ಅಂತ್ಯಸಂಸ್ಕಾರದ ಸಾಮಗ್ರಿಗಳನ್ನು ಖರೀದಿಸುವ ನೆಪದಲ್ಲಿ ನಡೆಯುವ ‘ಮಾರ್ಕೆಟ್ ಸಂತೆ’ ಸಂದರ್ಭದಲ್ಲಿ ಬಡ ಕುಟುಂಬಗಳ ಮೇಲೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸುವ ಅನಿಷ್ಟ ಪದ್ಧತಿಯನ್ನು ರಾಜ್ಯಾದ್ಯಂತ ತಕ್ಷಣವೇ ನಿಷೇಧಿಸಿ, ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಗದಗಿನ ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಪ್ರಕಟಣೆ ಮೂಲಕ ಮನವಿ ಸಲ್ಲಿಸಿರುವ ಅವರು, ಹಿರಿಯರ ಕಾಲದಿಂದ ನಡೆದುಕೊಂಡು ಬಂದಿದೆ ಎಂಬ ನೆಪದಲ್ಲಿ ಬಡ ಕುಟುಂಬಗಳ ಮೇಲೆ ಈ ರೀತಿಯ ಅಮಾನವೀಯ ಪದ್ಧತಿಯನ್ನು ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮರಣ ಹೊಂದಿದವರ ಮನೆಯಲ್ಲಿ ದುಃಖ, ಕಣ್ಣೀರು ಹಾಗೂ ಕುಟುಂಬದ ಭವಿಷ್ಯದ ಕುರಿತ ಆತಂಕದ ವಾತಾವರಣ ಇರುತ್ತದೆ. ಇಂತಹ ಸಂದರ್ಭದಲ್ಲಿ ಸಾಂತ್ವನ ಹೇಳಿ ಧೈರ್ಯ ತುಂಬಬೇಕಾದ ಸಮಾಜದ ಕೆಲವರು, ‘ಸಂತೆ ಮಾಡಲು ಬಂದವರಿಗೆ ಸಾರಾಯಿ ಕೊಡಿಸಲೇಬೇಕು’ ಎಂದು ಒತ್ತಾಯಿಸುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಸಂಗತಿಯಾಗಿದೆ ಎಂದು ಕೃಷ್ಣಾ ಹಡಪದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತ್ಯಸಂಸ್ಕಾರ ನಡೆಸಲು ಕುಟುಂಬದ ಬಳಿ ಹಣವಿದೆಯೋ ಇಲ್ಲವೋ ಎಂಬುದನ್ನು ಪರಿಗಣಿಸದೆ ಮದ್ಯ ವಿತರಿಸುವಂತೆ ಒತ್ತಾಯಿಸಲಾಗುತ್ತಿದೆ. ಇದರಿಂದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಬಡ ಕುಟುಂಬಗಳು ಸಾಲದ ಸುಳಿಗೆ ಸಿಲುಕುತ್ತಿವೆ. ಸಾವು ತಂದ ದುಃಖದ ಜೊತೆಗೆ ಮದ್ಯ ವಿತರಿಸುವ ಅನಿಷ್ಟ ಪದ್ಧತಿಯಿಂದ ಉಂಟಾಗುವ ಹೆಚ್ಚುವರಿ ಆರ್ಥಿಕ ಹೊರೆ ಕುಟುಂಬಗಳನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಅವರು ಹೇಳಿದ್ದಾರೆ.
ಬಡವರ ಕಣ್ಣೀರಿನ ಮೇಲೆ ಮದ್ಯದ ಅಮಲು ಬಯಸುವ ಈ ದುಷ್ಟ ಮನಸ್ಥಿತಿಗೆ ಕಡಿವಾಣ ಹಾಕಲು ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಇಂತಹ ಪದ್ಧತಿಗಳು ಮುಂದಿನ ಪೀಳಿಗೆಯನ್ನೂ ಆರ್ಥಿಕ ಹಾಗೂ ಸಾಮಾಜಿಕ ಸಂಕಷ್ಟಕ್ಕೆ ತಳ್ಳುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.
ಕರ್ನಾಟಕದ ಅಮಾನವೀಯ ದುಷ್ಟ ಪದ್ಧತಿಗಳ ತಡೆ ಕಾಯ್ದೆ-2017’ರ ಅಡಿಯಲ್ಲಿ ಅಂತ್ಯಸಂಸ್ಕಾರದ ನೆಪದಲ್ಲಿ ಒತ್ತಾಯಪೂರ್ವಕವಾಗಿ ಮದ್ಯ ವಿತರಿಸುವುದು ಅಥವಾ ಕುಡಿಸುವುದನ್ನು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸುವಂತೆ ಸೂಕ್ತ ತಿದ್ದುಪಡಿ ತರಬೇಕು.
ಅಂತ್ಯಸಂಸ್ಕಾರದ ‘ಸಂತೆ’ ನಡೆಯುವ ಸಾರ್ವಜನಿಕ ಸ್ಥಳಗಳು ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಸಾಮೂಹಿಕವಾಗಿ ಮದ್ಯ ಹಂಚುವುದು, ಕುಡಿಸುವುದು ಹಾಗೂ ಗಲಾಟೆ ನಡೆಸುವವರ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು.
ಹಿಂದುಳಿದ ಸಮುದಾಯಗಳ ಸಂಘಟನೆಗಳು ತಮ್ಮ ಸಮುದಾಯದೊಳಗೇ ಇಂತಹ ಅನಿಷ್ಟ ಪದ್ಧತಿಗಳನ್ನು ತಡೆಗಟ್ಟುವಂತೆ ಸರ್ಕಾರದಿಂದ ಕಡ್ಡಾಯ ನಿರ್ದೇಶನ ನೀಡಬೇಕು.
ನಿಯಮ ಉಲ್ಲಂಘಿಸಿ ಬಡ ಕುಟುಂಬಗಳ ಮೇಲೆ ಮದ್ಯ ವಿತರಿಸುವಂತೆ ಒತ್ತಾಯಿಸುವವರ ವಿರುದ್ಧ ಸಾಮಾಜಿಕ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು.
ನಿಯಮ ಉಲ್ಲಂಘಿಸುವವರಿಗೆ ಭಾರಿ ಮೊತ್ತದ ದಂಡ ವಿಧಿಸಿ, ಸಂಗ್ರಹವಾಗುವ ದಂಡದ ಹಣವನ್ನು ಮೃತರ ಬಡ ಕುಟುಂಬಗಳ ಆರ್ಥಿಕ ನೆರವಿಗೆ ಬಳಸುವ ವ್ಯವಸ್ಥೆ ಕಲ್ಪಿಸಬೇಕು.
“ಸಾವಿನ ಮನೆಯಲ್ಲಿ ಮನುಷ್ಯತ್ವ ಮೆರೆಯಬೇಕೇ ಹೊರತು ವ್ಯಸನದ ವಿಕೃತಿಯನ್ನಲ್ಲ. ಬಡವರ ದುಃಖದ ಸಂದರ್ಭದಲ್ಲಿ ಅವರ ಸಂಕಷ್ಟವನ್ನು ಹೆಚ್ಚಿಸುವ ಯಾವುದೇ ಅನಿಷ್ಟ ಪದ್ಧತಿಗೆ ಸರ್ಕಾರ ಅವಕಾಶ ನೀಡಬಾರದು. ಬಡವರ ಹಕ್ಕುಗಳು ಹಾಗೂ ಗೌರವಯುತ ಜೀವನದ ರಕ್ಷಣೆಗೆ ಸೂಕ್ತ ನಿಯಮಾವಳಿ ರೂಪಿಸಿ, ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರಬೇಕು” ಎಂದು ಕೃಷ್ಣಾ ಎಚ್. ಹಡಪದ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP