ಕರ್ನಾಟಕದ ಮಣ್ಣಿನಲ್ಲಿ ಬಸವ ತತ್ತ್ವಗಳು ಸಮಗ್ರವಾಗಿ ಬೆರೆತಿವೆ: ಮಧುಸೂದನ ಸಾಯಿ
ಅಂತರರಾಷ್ಟ್ರೀಯ ಮಾಹಿತಿ ಕೇಂದ್ರ ಉದ್ಘಾಟನೆ
madhusudhan-sai-karnataka-basava-philosophy-dasoha-ratna-award-basava-samiti


ಬೆಂಗಳೂರು, 10 ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ಕರ್ನಾಟಕದ ಮಣ್ಣಿನಲ್ಲಿ ಬಸವ ತತ್ತ್ವಗಳು ಸಮಗ್ರವಾಗಿ ಬೆರೆತಿವೆ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.ನಗರದಲ್ಲಿ ಗುರುವಾರ ನಡೆದ ಬಸವ ಸಮಿತಿಯ 62ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸಮಿತಿ ಸಂಸ್ಥಾಪಕ ಬಿ.ಡಿ. ಜತ್ತಿ ಅವರ 114ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ‘ದಾಸೋಹ ರತ್ನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಛತ್ತೀಸಗಡದಲ್ಲಿ ಹುಟ್ಟಿ, ಆಂಧ್ರಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಕರ್ನಾಟಕವನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದೇನೆ. ನನ್ನನ್ನು ಯಾರೂ ಪರಕೀಯ ಎಂದು ಭಾವಿಸದೆ, ‘ಇವ ನಮ್ಮವ’ ಎಂದು ಒಪ್ಪಿಕೊಂಡಿದ್ದಾರೆ. ಈ ನಾಡಿನ ಸಂಸ್ಕೃತಿಯೊಂದಿಗೆ ವಚನ ಸಾಹಿತ್ಯವೂ ಬೆರೆತಿದೆ. ಅದರಿಂದ ನಾನೂ ಸಾಕಷ್ಟು ಕಲಿತಿದ್ದೇನೆ’ ಎಂದು ಹೇಳಿದರು.

ಬಸವ ಸಮಿತಿ ನೀಡಿದ ‘ದಾಸೋಹ ರತ್ನ’ ಪ್ರಶಸ್ತಿ ತಮ್ಮ ಸಂಸ್ಥೆಯ ಸಿಬ್ಬಂದಿ ಹಾಗೂ ಫಲಾನುಭವಿಗಳಿಗೆ ಸಲ್ಲಿಸಿದ ಗೌರವ ಎಂದು ಅವರು ತಿಳಿಸಿದರು. ‘ವಚನ ಸಾಹಿತ್ಯವನ್ನು ವಿಶ್ವಮಟ್ಟದಲ್ಲಿ ಪ್ರಸಾರ ಮಾಡುವ ಉದ್ದೇಶದಿಂದ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯವು ಬಸವ ಸಮಿತಿಯೊಂದಿಗೆ ಕಾರ್ಯನಿರ್ವಹಿಸಲಿದೆ. ಬಾಬಾರವರ ಸಾಹಿತ್ಯದ ಜತೆಗೆ ಬಸವ ಸಾಹಿತ್ಯವೂ ವಿಶ್ವದಾದ್ಯಂತ ಹರಡಬೇಕು’ ಎಂದರು.

ಪ್ರಶಸ್ತಿ ಪ್ರದಾನ ಮಾಡಿದ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಮಧುಸೂದನ ಸಾಯಿ ಅವರು ಎಲ್ಲಿಯಾದರೂ ಹುಟ್ಟಿರಲಿ, ಈಗ ಅವರು ಕನ್ನಡಿಗರು. ಅವರ ಸೇವೆ, ಸಾಧನೆ ಮತ್ತು ಕೀರ್ತಿ ರಾಜ್ಯದ ಘನತೆಯನ್ನು ಹೆಚ್ಚಿಸುತ್ತಿದೆ’ ಎಂದು ಹೇಳಿದರು.

ಮಕ್ಕಳಿಗೆ ಪೌಷ್ಟಿಕ ಆಹಾರ, ಗ್ರಾಮಗಳಿಗೆ ಕುಡಿಯುವ ನೀರು, ಗೋಶಾಲೆ ಹಾಗೂ ಉಚಿತ ಚಿಕಿತ್ಸೆಯಂತಹ ಹಲವು ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಅವರು ಯಶಸ್ವಿಯಾಗಿ ನಡೆಸುತ್ತಿದ್ದಾರೆ ಎಂದು ಸ್ವಾಮೀಜಿ ಶ್ಲಾಘಿಸಿದರು.ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, ‘ಬಸವಣ್ಣನವರು ಪ್ರತಿಪಾದಿಸಿದ ದಾಸೋಹ ತತ್ತ್ವದ ನಿಜವಾದ ಅನುಷ್ಠಾನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿದೆ’ ಎಂದರು.

ಬಸವ ಸಮಿತಿ ಸದಸ್ಯರೊಬ್ಬರು ಹೃದಯಾಘಾತದಿಂದ ಬಳಲುತ್ತಿದ್ದಾಗ ಮುದ್ದೇನಹಳ್ಳಿಯ ಮಧುಸೂದನ ಸಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಜೀವ ಉಳಿಸಿರುವುದನ್ನು ಸ್ಮರಿಸಿದರು.ಬಸವ ಸಮಿತಿ 62 ವರ್ಷಗಳನ್ನು ಪೂರೈಸಿದ್ದು, ವಚನ ಸಾಹಿತ್ಯವು ಈಗಾಗಲೇ ಜಗತ್ತಿನ 41 ಭಾಷೆಗಳಿಗೆ ಅನುವಾದಗೊಂಡಿದೆ. ಕೇಂದ್ರೀಯ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡು 80 ಭಾಷೆಗಳಿಗೆ ವಚನ ಸಾಹಿತ್ಯವನ್ನು ವಿಸ್ತರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅರವಿಂದ ಜತ್ತಿ ತಿಳಿಸಿದರು.

ಬೇಲಿಮಠ ಮಹಾಸಂಸ್ಥಾನದ ಶಿವರುದ್ರ ಸ್ವಾಮೀಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಂತರರಾಷ್ಟ್ರೀಯ ಮಾಹಿತಿ ಕೇಂದ್ರ ಉದ್ಘಾಟನೆಕಾರ್ಯಕ್ರಮದ ಅಂಗವಾಗಿ ಬಸವ ಸಮಿತಿ ಕಟ್ಟಡದ ಆವರಣದಲ್ಲಿ ‘ಬಸವ ಅಂತರರಾಷ್ಟ್ರೀಯ ಮಾಹಿತಿ ಕೇಂದ್ರ’ವನ್ನು ಉದ್ಘಾಟಿಸಲಾಯಿತು.

ಶ್ರೀಮತಿ ಸಂಗವ್ವ ಜತ್ತಿ ಸ್ಮರಣಾರ್ಥ 2025–26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಕೆಎಲ್ಇ ಬಸವ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ನಾದ ಗುರುಕುಲದ ವಿದ್ಯಾರ್ಥಿಗಳು ‘ವಚನ ಸಂಗೀತ’ ಪ್ರಸ್ತುತಪಡಿಸಿದರು.ಬಸವ ಸಮಿತಿ ಉಪಾಧ್ಯಕ್ಷ ಪ್ರಭುದೇವ ಸಿ. ಚಿಗಟೇರಿ ಅವರು ಸಂಸ್ಥೆಯ ಸಹ ಪ್ರಾಧ್ಯಾಪಕ ಪ್ರಣವ್ ಕಶ್ಯಪ್ ಅವರನ್ನು ಅಭಿನಂದಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande