ಅವಧಿ ಮೀರಿದ ಆಹಾರಕ್ಕೆ ನಕಲಿ ಲೇಬಲ್: ಬೆಂಗಳೂರಿನಲ್ಲಿ ₹3 ಕೋಟಿ ಮೌಲ್ಯದ ವಸ್ತು ಜಪ್ತಿ
ಬೆಂಗಳೂರಿನಲ್ಲಿ ₹3 ಕೋಟಿ ಮೌಲ್ಯದ ವಸ್ತು ಜಪ್ತಿ
expired-relabeled-food-worth-rs-3-crore-seized-in-bengaluru-amazon-instamart-raids


ಬೆಂಗಳೂರು, 10 ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ಅವಧಿ ಮೀರಿದ ಆಹಾರ ಪದಾರ್ಥಗಳಿಗೆ ನಕಲಿ ಲೇಬಲ್ ಅಂಟಿಸಿ ಮರುಮಾರಾಟ ಮಾಡುತ್ತಿದ್ದ ಜಾಲವನ್ನು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ ಸುರಕ್ಷತಾ ಇಲಾಖೆ ಪತ್ತೆಹಚ್ಚಿದೆ. ಬೆಂಗಳೂರಿನ ವಿವಿಧೆಡೆ ನಡೆಸಿದ ದಾಳಿಯಲ್ಲಿ ಅಮೆಜಾನ್, ಇನ್ಸ್ಟಾಮಾರ್ಟ್ ಸೇರಿದಂತೆ ಹಲವು ಸ್ಥಳಗಳಿಂದ ಒಟ್ಟು ಸುಮಾರು ₹3 ಕೋಟಿ ಮೌಲ್ಯದ ಅವಧಿ ಮೀರಿದ ಹಾಗೂ ತಪ್ಪು ಲೇಬಲ್ ಹೊಂದಿರುವ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.

ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಬೆಂಗಳೂರಿನಲ್ಲಿ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ‘ಪೆಪ್ಟೈಡ್ ಪಾರ್ಟಿ’ಯೊಂದನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ಈ ಅಕ್ರಮ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಆಹಾರ ಪದಾರ್ಥಗಳನ್ನು ಎಲ್ಲಿಂದ ಖರೀದಿಸಲಾಗಿತ್ತು ಎಂಬ ಮಾಹಿತಿ ಕಲೆಹಾಕಿದಾಗ, ಅವುಗಳನ್ನು ಅಮೆಜಾನ್ನ ಡಾರ್ಕ್ ಸ್ಟೋರ್ನಿಂದ ಪಡೆಯಲಾಗಿತ್ತು ಎಂಬುದು ಗೊತ್ತಾಯಿತು.

ಇದರ ಬೆನ್ನಲ್ಲೇ ಕೆಎಸ್ಎಫ್ಡಿಎ ಅಧಿಕಾರಿಗಳು ದೇವನಹಳ್ಳಿಯ Amazon BLR6 ಸಂಗ್ರಹಣಾ ಕೇಂದ್ರದ ಮೇಲೆ ದಾಳಿ ನಡೆಸಿದರು. ಇಲ್ಲಿ ₹14 ಲಕ್ಷ ಮೌಲ್ಯದ ತಪ್ಪು ಅಥವಾ ಅಪೂರ್ಣ ಲೇಬಲ್ ಹೊಂದಿದ್ದ ಆಹಾರ ಉತ್ಪನ್ನಗಳು, ₹10 ಲಕ್ಷ ಮೌಲ್ಯದ ಅವಧಿ ಮೀರಿದ ಆಹಾರ ಪದಾರ್ಥಗಳು ಹಾಗೂ ಪರವಾನಗಿ ಇಲ್ಲದೆ ಸಂಗ್ರಹಿಸಿದ್ದ ₹2.45 ಲಕ್ಷ ಮೌಲ್ಯದ ಔಷಧಗಳನ್ನು ಜಪ್ತಿ ಮಾಡಲಾಗಿದೆ.

ಮಡಿವಾಳದ Amazon BLR7 ಕೇಂದ್ರದಲ್ಲೂ ಅಧಿಕಾರಿಗಳು ದಾಳಿ ನಡೆಸಿದ್ದು, ₹19 ಲಕ್ಷ ಮೌಲ್ಯದ ತಪ್ಪು ಲೇಬಲ್ ಹೊಂದಿದ್ದ ಆಹಾರ ಉತ್ಪನ್ನಗಳು, ₹13 ಲಕ್ಷ ಮೌಲ್ಯದ ಅವಧಿ ಮೀರಿದ ವಸ್ತುಗಳು ಹಾಗೂ ₹1.57 ಲಕ್ಷ ಮೌಲ್ಯದ ಪರವಾನಗಿ ಇಲ್ಲದ ಔಷಧಗಳನ್ನು ವಶಪಡಿಸಿಕೊಂಡಿದ್ದಾರೆ.

ಶೆಡ್ನಲ್ಲಿ ನಕಲಿ ಲೇಬಲ್ ಸಿದ್ಧಪಡಿಸುತ್ತಿದ್ದ ಸಂಸ್ಥೆಲಿಂಗರಾಜಪುರದಲ್ಲಿನ ಶೆಡ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲಿಯೋ 7 ಎಂಟರ್ಪ್ರೈಸಸ್ ಎಂಬ ಸಂಸ್ಥೆಯಲ್ಲೂ ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಇಲ್ಲಿ ಸುಮಾರು ₹57 ಲಕ್ಷ ಮೌಲ್ಯದ ತಪ್ಪು ಲೇಬಲ್ ಹಾಗೂ ಅವಧಿ ಮೀರಿದ ಆಹಾರ ಸಂಗ್ರಹಿಸಲಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ. ಅವಧಿ ಮೀರಿದ ಉತ್ಪನ್ನಗಳನ್ನು ಖರೀದಿಸಿ, ಅವುಗಳ ಅವಧಿ ಮುಗಿಯುವ ದಿನಾಂಕವನ್ನು ನಕಲಿಯಾಗಿ ಬದಲಿಸಿ ಮಾರಾಟ ಮಾಡಲಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ಮುಚ್ಚಲಾಗಿದೆ.ಹೊಸಕೋಟೆಯಲ್ಲಿರುವ ಇನ್ಸ್ಟಾಮಾರ್ಟ್ ಕೇಂದ್ರದ ಮೇಲೂ ದಾಳಿ ನಡೆಸಲಾಗಿದ್ದು, ₹42 ಲಕ್ಷ ಮೌಲ್ಯದ ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಈ ಕೇಂದ್ರದಲ್ಲಿನ ತನಿಖೆ ಮುಂದುವರಿದಿದ್ದು, ತಪ್ಪು ಲೇಬಲ್ ಹಾಗೂ ಅವಧಿ ಮೀರಿದ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹1 ಕೋಟಿ ಇರಬಹುದು ಎಂದು ಇಲಾಖೆ ಅಂದಾಜಿಸಿದೆ.

ಅಂಗಡಿಯಲ್ಲೂ ಅವಧಿ ಮೀರಿದ ಆಹಾರ ಪತ್ತೆದೂರು ಆಧರಿಸಿ ಎಚ್ಬಿಆರ್ ಲೇಔಟ್ನ ಸಪ್ತ ಬಜಾರ್ ಅಂಗಡಿಯ ಮೇಲೂ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಅವಧಿ ಮೀರಿದ ಗೋಡಂಬಿ ಬಿಸ್ಕತ್, ರಾಗಿ ಹಿಟ್ಟು, ಚಿಕನ್ ಪ್ಯಾಟೀಸ್, ಪನೀರ್, ಕುಕೀಸ್, ವಿವಿಧ ಬಗೆಯ ನಟ್ಸ್, ಮೊಟ್ಟೆ ಹಾಗೂ ಹಿಟ್ಟು ಸೇರಿದಂತೆ ಸುಮಾರು ₹10 ಸಾವಿರ ಮೌಲ್ಯದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.

ಅವಧಿ ಮೀರಿದ ಆಹಾರಕ್ಕೆ ನಕಲಿ ಲೇಬಲ್ ಅಂಟಿಸಿ ಮಾರಾಟ ಮಾಡುವುದು ಗಂಭೀರ ಅಪರಾಧವಾಗಿದ್ದು, ಇಂತಹ ಪ್ರಕರಣಗಳಲ್ಲಿ ಕೇವಲ ದಂಡ ವಿಧಿಸುವ ಬದಲು ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕಾನೂನು ರೂಪಿಸಲು ಚಿಂತಿಸಲಾಗುತ್ತಿದೆ ಎಂದು ಖಾದರ್ ಹೇಳಿದ್ದಾರೆ.

ಈ ಸಂಬಂಧ ಕಾನೂನು ಇಲಾಖೆಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಸಾರ್ವಜನಿಕರು ಇಂತಹ ಅಕ್ರಮಗಳ ಬಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ದೂರು ನೀಡಬೇಕು. ಇದರಿಂದ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಯನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದು ಅವರು ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande