
ಬೆಂಗಳೂರು, 10 ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ರಾಜ್ಯ ಸರ್ಕಾರದ 100 ದಿನಗಳ ಆಡಳಿತದ ಅವಧಿಯಲ್ಲಿ ರೈತರು, ಯುವಕರು, ನಿವೇಶನ ರಹಿತರು ಹಾಗೂ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಹಲವು ಹೊಸ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಗುರುವಾರ ನಡೆದ ‘ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರಿಗೆ ನೆರವಾಗುವ ಉದ್ದೇಶದಿಂದ ‘ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ’ ಜಾರಿಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಗ್ರಾಮೀಣ ಪ್ರದೇಶದ ಹೆಚ್ಚಿನ ಯುವಕರು ನಗರ ಪ್ರದೇಶಗಳಿಗೆ ವಲಸೆ ಹೋಗಿರುವುದರಿಂದ ವಯಸ್ಸಾದ ರೈತರು ಮಾತ್ರ ಗ್ರಾಮಗಳಲ್ಲಿ ಉಳಿದಿದ್ದಾರೆ. ಇದರಿಂದ ಸಾವಿರಾರು ಎಕರೆ ಕೃಷಿ ಭೂಮಿ ಉಳುಮೆಯಾಗದೆ ಉಳಿದಿದೆ. ಅಂತಹ ಜಮೀನುಗಳನ್ನು ಸರ್ಕಾರವೇ ಉಳುಮೆ ಮಾಡಿಕೊಡುವ ಉದ್ದೇಶ ಈ ಯೋಜನೆಯದ್ದಾಗಿದೆ ಎಂದು ವಿವರಿಸಿದರು.
ಜನರ ಸಮಸ್ಯೆಗಳನ್ನು ಅವರ ಮನೆ ಬಾಗಿಲಲ್ಲೇ ಆಲಿಸಿ ಪರಿಹರಿಸುವ ಉದ್ದೇಶದಿಂದ ‘ಪ್ರಜಾಸೇವೆ’ ಕಾರ್ಯಕ್ರಮ ಆರಂಭಿಸಲಾಗಿದೆ. ಜನರು ಅರ್ಜಿಗಳನ್ನು ಹಿಡಿದು ಸರ್ಕಾರಿ ಕಚೇರಿಗಳನ್ನು ಅಲೆಯುವ ಅಗತ್ಯವಿಲ್ಲ. ಸಚಿವರು ಹಾಗೂ ಶಾಸಕರು ತಿಂಗಳಿಗೆ ಎರಡು ಬಾರಿ ಜನರ ಬಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಿದ್ದಾರೆ ಎಂದರು.
ಕೃತಕ ಬುದ್ಧಿಮತ್ತೆಯ ಯುಗದಲ್ಲಿ ರಾಜ್ಯದ ಯುವಕರು ಹಿಂದೆ ಬೀಳಬಾರದು ಎಂಬ ಉದ್ದೇಶದಿಂದ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಹಾಗೂ ನಂತರ ವಿಶ್ವವಿದ್ಯಾಲಯ ಸ್ಥಾಪಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದ ನಿವೇಶನ ರಹಿತರಿಗೆ ಮೊದಲ ಹಂತದಲ್ಲಿ ಐದು ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸುವ ಉದ್ದೇಶವಿದೆ. ಒಂದು ಜಿಲ್ಲೆಯಲ್ಲಿ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ ಎಂದರು.
ರಾಜ್ಯದಲ್ಲಿ ಏರೋಸ್ಪೇಸ್ ಕ್ಷೇತ್ರದ ಅಭಿವೃದ್ಧಿಗೆ ‘ಕರ್ನಾಟಕ ಏರೋಸ್ಪೇಸ್ ನೀತಿ 2026–2031’ಕ್ಕೆ ಅನುಮೋದನೆ ನೀಡಲಾಗಿದೆ. ಎಚ್ಎಎಲ್ನಲ್ಲಿ ವಿಮಾನಗಳ ಉತ್ಪಾದನೆಗೆ ಸಂಬಂಧಿಸಿದ ಪ್ರಸ್ತಾವನೆಗಳು ಬಂದಿದ್ದು, ಇದರಿಂದ ರಾಜ್ಯದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿವೆ ಎಂದು ಹೇಳಿದರು.
ದೂರದ ಊರುಗಳಿಂದ ಬಂದು ದೊಡ್ಡ ಕೈಗಾರಿಕೆ ಹಾಗೂ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೆಲಸದ ಸ್ಥಳದ ಸಮೀಪದಲ್ಲೇ ಮನೆ ನಿರ್ಮಿಸಿಕೊಳ್ಳಲು ನೆರವಾಗುವ ‘ಶ್ರಮಿಕ ನಿವಾಸ’ ಯೋಜನೆಗೂ ಅನುಮೋದನೆ ನೀಡಲಾಗಿದೆ.
ರೈತರು ತಮ್ಮ ಜಮೀನಿನ ಬೇಲಿಗಳಲ್ಲಿ ತೇಗದ ಗಿಡಗಳನ್ನು ನೆಟ್ಟು 15 ವರ್ಷಗಳ ಕಾಲ ಬೆಳೆಸಿದರೆ ಲಾಭದಲ್ಲಿ ಶೇ.70ರಷ್ಟು ಪಾಲು ನೀಡುವ ‘ತೇಗ ಸಿರಿ’ ಯೋಜನೆಗೂ ಅನುಮೋದನೆ ನೀಡಲಾಗಿದೆ. ಜವಳಿ ಮತ್ತು ಸಿದ್ಧ ಉಡುಪು ಕೈಗಾರಿಕೆಗಳನ್ನು ವಿವಿಧ ಜಿಲ್ಲೆಗಳಲ್ಲಿ ಸ್ಥಾಪಿಸಲು ಉತ್ತೇಜನ ನೀಡುವ ಹೊಸ ಜವಳಿ ಮತ್ತು ಸಿದ್ಧ ಉಡುಪು ನೀತಿ 2026–31 ಜಾರಿಗೆ ತರಲಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಲು ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ಪುನರಾರಂಭಿಸಲು ತೀರ್ಮಾನಿಸಲಾಗಿದೆ. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಗುರುತಿನ ಚೀಟಿಯಾಗಿ ‘ಶಕ್ತಿ ಸ್ಮಾರ್ಟ್ ಕಾರ್ಡ್’ ನೀಡಲು ನಿರ್ಧರಿಸಲಾಗಿದೆ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R