ಬೆಂಗಳೂರಿನಲ್ಲಿ ಮೆಟ್ರೋ ಮೂರನೇ ಹಂತಕ್ಕೆ ವೇಗ: ಕಟ್ಟಡ ತೆರವಿಗೆ ₹17.57 ಕೋಟಿ ಟೆಂಡರ್ ಆಹ್ವಾನ
ಕಟ್ಟಡ ತೆರವಿಗೆ ₹17.57 ಕೋಟಿ ಟೆಂಡರ್
bengaluru-namma-metro-phase-3-4465-km-route-building-clearance-tenders-invited


ಬೆಂಗಳೂರು, 10 ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ಬೆಂಗಳೂರಿನ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಹಾಗೂ ಕಟ್ಟಡ ತೆರವು ಸೇರಿದಂತೆ ಪೂರ್ವಸಿದ್ಧತಾ ಕಾಮಗಾರಿಗಳಿಗೆ ವೇಗ ನೀಡಲಾಗಿದೆ.

44.65 ಕಿ.ಮೀ ಉದ್ದದ ಮೆಟ್ರೋ ಮಾರ್ಗದಲ್ಲಿ ಗುರುತಿಸಲಾಗಿರುವ ಕಟ್ಟಡಗಳು ಹಾಗೂ ರಚನೆಗಳನ್ನು ತೆರವುಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಾಲ್ಕು ಪ್ಯಾಕೇಜ್ಗಳಲ್ಲಿ ಟೆಂಡರ್ ಆಹ್ವಾನಿಸಿದೆ.

ಬಿಎಂಆರ್ಸಿಎಲ್ ಪ್ರಕಟಿಸಿರುವ ಟೆಂಡರ್ ವಿವರಗಳ ಪ್ರಕಾರ, ಕಟ್ಟಡಗಳ ಭಾಗಶಃ ಅಥವಾ ಸಂಪೂರ್ಣ ತೆರವು ಹಾಗೂ ಧ್ವಂಸ ಕಾರ್ಯಕ್ಕೆ ಒಟ್ಟು ₹17.57 ಕೋಟಿ ಅಂದಾಜು ವೆಚ್ಚ ನಿಗದಿಪಡಿಸಲಾಗಿದೆ. ನಾಲ್ಕು ಪ್ಯಾಕೇಜ್ಗಳಿಗೆ ಕ್ರಮವಾಗಿ ₹4.74 ಕೋಟಿ, ₹4.54 ಕೋಟಿ, ₹4.29 ಕೋಟಿ ಹಾಗೂ ₹4 ಕೋಟಿ ವೆಚ್ಚ ಅಂದಾಜಿಸಲಾಗಿದೆ.

ಎರಡು ಪ್ರಮುಖ ಕಾರಿಡಾರ್ಗಳುಮೆಟ್ರೋ ಫೇಸ್-3 ಯೋಜನೆಯ ಒಟ್ಟು ಉದ್ದ 44.65 ಕಿ.ಮೀ. ಆಗಿದ್ದು, 31 ಎಲಿವೇಟೆಡ್ ನಿಲ್ದಾಣಗಳು ನಿರ್ಮಾಣವಾಗಲಿವೆ. ಮೊದಲ ಕಾರಿಡಾರ್ ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದವರೆಗೆ 32.15 ಕಿ.ಮೀ. ಉದ್ದವಿದ್ದು, 22 ನಿಲ್ದಾಣಗಳನ್ನು ಹೊಂದಿರಲಿದೆ.

ಎರಡನೇ ಕಾರಿಡಾರ್ ಹೊಸಹಳ್ಳಿಯಿಂದ ಕಡಬಗೆರೆಯವರೆಗೆ 12.5 ಕಿ.ಮೀ. ಉದ್ದವಿದ್ದು, 9 ನಿಲ್ದಾಣಗಳು ಇರಲಿವೆ. ಯೋಜನೆಯನ್ನು 2032ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಟೆಂಡರ್ ಅಧಿಸೂಚನೆಯ ಪ್ರಕಾರ, ಪ್ಯಾಕೇಜ್-1ರಲ್ಲಿ ಜೆ.ಪಿ.ನಗರ 4ನೇ ಹಂತದಿಂದ ಮೈಸೂರು ರಸ್ತೆವರೆಗಿನ ಕಟ್ಟಡ ತೆರವು, ಪ್ಯಾಕೇಜ್-2ರಲ್ಲಿ ಮೈಸೂರು ರಸ್ತೆ–ಕೊಟ್ಟಿಗೆಪಾಳ್ಯ ಹಾಗೂ ಸುಂಕದಕಟ್ಟೆ ಭಾಗ, ಪ್ಯಾಕೇಜ್-3ರಲ್ಲಿ ಸುಮನಹಳ್ಳಿ–ಕೆಂಪಾಪುರ ಮತ್ತು ಪ್ಯಾಕೇಜ್-4ರಲ್ಲಿ ಹೊಸಹಳ್ಳಿ–ಕಡಬಗೆರೆ ಮಾರ್ಗದ ಕಟ್ಟಡಗಳ ತೆರವು ಕಾರ್ಯ ಸೇರಿದೆ. ಬಿಡ್ ಸಲ್ಲಿಕೆಗೆ ಅಕ್ಟೋಬರ್ 9, 2026 ಕೊನೆಯ ದಿನವಾಗಿದ್ದು, ಟೆಂಡರ್ಗಳನ್ನು ಅಕ್ಟೋಬರ್ 12ರಂದು ತೆರೆಯಲಾಗುತ್ತದೆ.

ಇದರೊಂದಿಗೆ ಮೆಟ್ರೋ ಫೇಸ್-3ರ ಪ್ರಮುಖ ಪೂರ್ವಸಿದ್ಧತಾ ಕಾಮಗಾರಿಗಳು ಮತ್ತಷ್ಟು ವೇಗ ಪಡೆಯುವ ನಿರೀಕ್ಷೆಯಿದೆ. ಕಟ್ಟಡ ತೆರವು ಪೂರ್ಣಗೊಂಡ ಬಳಿಕ ಸಂಬಂಧಿತ ಮಾರ್ಗಗಳಲ್ಲಿ ಮೆಟ್ರೋ ಮೂಲಸೌಕರ್ಯ ನಿರ್ಮಾಣ ಕಾಮಗಾರಿಗಳಿಗೆ ಹೆಚ್ಚಿನ ವೇಗ ದೊರೆಯಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande