ಆರು ವರ್ಷವಾದರೂ ಬಿಬಿಎಂಪಿಗೆ ಚುನಾಯಿತ ಆಡಳಿತವಿಲ್ಲ
ಚುನಾವಣೆ ವಿಳಂಬಕ್ಕೆ ಸಾರ್ವಜನಿಕರ ಆಕ್ರೋಶ; ಹೊಸ ವ್ಯವಸ್ಥೆಯಲ್ಲೂ ಗೊಂದಲ
ಆರು ವರ್ಷವಾದರೂ ಬಿಬಿಎಂಪಿಗೆ ಚುನಾಯಿತ ಆಡಳಿತವಿಲ್ಲ


ಬೆಂಗಳೂರು, 10 ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆ ಇಲ್ಲದೆ ಬರೋಬ್ಬರಿ ಆರು ವರ್ಷಗಳು ಕಳೆದಿವೆ.

ಐಟಿ-ಬಿಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿರುವ ನಗರವು ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಆಡಳಿತಾತ್ಮಕ ಹಾಗೂ ಮೂಲಸೌಕರ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಬಿಬಿಎಂಪಿ ಚುನಾವಣೆಯ ವಿಳಂಬದ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚುತ್ತಿದೆ.

ನಿಕಟಪೂರ್ವ ಬಿಬಿಎಂಪಿಯ ಆಡಳಿತಾವಧಿ 2020ರ ಸೆಪ್ಟೆಂಬರ್ 10ರಂದು ಪೂರ್ಣಗೊಂಡಿತ್ತು. ಬಳಿಕ ಕಾಲಮಿತಿಯಲ್ಲಿ ಚುನಾವಣೆ ನಡೆಸುವ ಬದಲು ಹೊಸ ಆಡಳಿತ ವ್ಯವಸ್ಥೆ ರೂಪಿಸುವ ಪ್ರಯತ್ನಗಳು ನಡೆದವು.

198 ವಾರ್ಡ್ಗಳನ್ನು 227ಕ್ಕೆ ಹೆಚ್ಚಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಯಿತಾದರೂ, ಚುನಾವಣೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಹಲವು ಕಾರಣಗಳಿಂದ ಮುಂದೂಡಲ್ಪಟ್ಟವು.

ರಾಜ್ಯದಲ್ಲಿ ಹಾಲಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಿಬಿಎಂಪಿ ಚುನಾವಣೆಗೆ ಸಿದ್ಧತೆ ನಡೆಸುವುದಾಗಿ ಘೋಷಿಸಿತ್ತಾದರೂ, ಪಾಲಿಕೆ ವಿಭಜನೆ ಪ್ರಕ್ರಿಯೆಗೆ ಚಾಲನೆ ನೀಡಿತು. ಈ ಸಂಬಂಧ ರಚಿಸಲಾದ ಸಮಿತಿಯ ವರದಿ ಸಲ್ಲಿಕೆ, ಹೊಸ ಪಾಲಿಕೆಗಳ ರಚನೆ, ಅವುಗಳ ವ್ಯಾಪ್ತಿ, ಜನಸಂಖ್ಯೆ, ವಾರ್ಡ್ಗಳ ಸಂಖ್ಯೆ ಹಾಗೂ ಮೀಸಲಾತಿ ನಿಗದಿ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಹೆಚ್ಚಿನ ಸಮಯ ಬೇಕಾಯಿತು.

ಚುನಾವಣೆಗೆ ವಿಘ್ನಗಳ ಸರಮಾಲೆಬಿಬಿಎಂಪಿ ಚುನಾವಣೆ ನಡೆಸುವಂತೆ ನ್ಯಾಯಾಲಯದ ಮೊರೆ ಹೋಗಲಾಗಿದ್ದು, ಸುಪ್ರೀಂಕೋರ್ಟ್ ಕೂಡ ಚುನಾವಣಾ ಪ್ರಕ್ರಿಯೆ ಮುಂದುವರಿಸುವಂತೆ ಸೂಚಿಸಿತ್ತು.

ಆದರೂ ಸರ್ಕಾರ ಹಲವು ಬಾರಿ ಗಡುವು ವಿಸ್ತರಣೆ ಪಡೆದಿದೆ ಎಂಬ ಆರೋಪ ಕೇಳಿಬಂದಿದೆ. ಚುನಾವಣಾ ಸಿದ್ಧತೆಗಳು ಕಾಗದದ ಮಟ್ಟದಲ್ಲೇ ಉಳಿದಿವೆ ಎಂಬ ಆಕ್ಷೇಪವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಮತದಾರರ ಪಟ್ಟಿ ಪರಿಷ್ಕರಣೆ, ಜನಗಣತಿ ಸೇರಿದಂತೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಮುಂದೂಡಲಾಗುತ್ತಿದೆ ಎಂಬ ಟೀಕೆಯೂ ಕೇಳಿಬರುತ್ತಿದೆ. ಇದರಿಂದ ನಗರದ ಸ್ಥಳೀಯ ಆಡಳಿತ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಚುನಾಯಿತ ಪ್ರತಿನಿಧಿಗಳ ಕೊರತೆಬಿಬಿಎಂಪಿಯಲ್ಲಿ ಚುನಾಯಿತ ಪ್ರತಿನಿಧಿಗಳಿದ್ದ ಸಂದರ್ಭದಲ್ಲಿ ವಾರ್ಡ್ ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಸ್ಥೆ ಇತ್ತು. ಕಾಮಗಾರಿಗಳ ಅನುಷ್ಠಾನ, ಮೂಲಸೌಕರ್ಯ ಸಮಸ್ಯೆಗಳು ಹಾಗೂ ಸ್ಥಳೀಯ ಜನರ ಅಹವಾಲುಗಳನ್ನು ಕಾರ್ಪೊರೇಟರ್ಗಳು ಆಡಳಿತದ ಗಮನಕ್ಕೆ ತರುತ್ತಿದ್ದರು.

ಆದರೆ ಆಡಳಿತಾಧಿಕಾರಿಗಳ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ನೇರ ಸಂಪರ್ಕದ ಕೊರತೆ ಕಂಡುಬರುತ್ತಿದೆ ಎಂಬ ಆರೋಪಗಳಿವೆ.ನಗರದ ಅಭಿವೃದ್ಧಿಗೆ ಚುನಾಯಿತ ಸ್ಥಳೀಯ ಆಡಳಿತ ಅಗತ್ಯ ಎಂದು ವಿವಿಧ ರಾಜಕೀಯ ಪಕ್ಷಗಳು ಹಾಗೂ ನಾಗರಿಕ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ರಾಜಧಾನಿ ಅಭಿವೃದ್ಧಿಗೆ ಹೊಸ ಘೋಷಣೆ?ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 10ರಂದು ಮುಖ್ಯಮಂತ್ರಿಯಾಗಿ 100 ದಿನಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯೂ ವ್ಯಕ್ತವಾಗಿದೆ.

ಡಿಸಿಎಂ ಆಗಿದ್ದ ಸಂದರ್ಭದಲ್ಲಿ ಬೆಂಗಳೂರಿಗೆ ಹೊಸ ಚಹರೆ ನೀಡುವ ಕುರಿತು ಹಲವು ಬಾರಿ ಮಾತನಾಡಿದ್ದ ಅವರು, ಇದೀಗ ರಾಜಧಾನಿಯ ಮೂಲಸೌಕರ್ಯ ಹಾಗೂ ಸ್ಥಳೀಯ ಆಡಳಿತಕ್ಕೆ ಆದ್ಯತೆ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಮತ್ತೆ ಮೂರು ಪಾಲಿಕೆಗಳ ಚರ್ಚೆಬಿಬಿಎಂಪಿಯನ್ನು ಐದು ಪಾಲಿಕೆಗಳಾಗಿ ವಿಭಜಿಸಿದ ಬಳಿಕ ಕೆಲವು ಕ್ಷೇತ್ರಗಳಲ್ಲಿ ಆಡಳಿತಾತ್ಮಕ ಬದಲಾವಣೆ ಕಂಡುಬಂದಿದ್ದರೂ, ಹೊಸ ಸಮಸ್ಯೆಗಳೂ ಎದುರಾಗಿವೆ ಎಂಬ ಅಭಿಪ್ರಾಯವಿದೆ.

ವಿಶೇಷವಾಗಿ ಮತದಾರರ ಪಟ್ಟಿ ಪರಿಷ್ಕರಣೆಯ ಬಳಿಕ ಹೊಸ ವಾರ್ಡ್ಗಳಲ್ಲಿ ಮತದಾರರ ಸಂಖ್ಯೆ ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾಗುವ ಸಾಧ್ಯತೆ ಚುನಾವಣಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಆತಂಕಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಐದು ಪಾಲಿಕೆಗಳ ಬದಲು ಮೂರು ಪಾಲಿಕೆಗಳೇ ಸಾಕು ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದೆಯೇ ಪಾಲಿಕೆ ವಿಭಜನಾ ಸಮಿತಿಯು ಮೂರು ಅಥವಾ ಐದು ಪಾಲಿಕೆಗಳ ರಚನೆಗೆ ಶಿಫಾರಸು ಮಾಡಿತ್ತು.

ಸರ್ಕಾರ ಐದು ಪಾಲಿಕೆಗಳ ರಚನೆಗೆ ಮುಂದಾಗಿತ್ತು. ಇದೀಗ ಬದಲಾಗಿರುವ ಮತದಾರರ ಪಟ್ಟಿಯ ಹಿನ್ನೆಲೆಯಲ್ಲಿ ಮತ್ತೆ ಮೂರು ಪಾಲಿಕೆಗಳಾಗಿ ವಿಭಜಿಸುವ ಚಿಂತನೆ ಆರಂಭವಾಗಬಹುದೇ ಎಂಬ ಕುತೂಹಲ ಮೂಡಿದೆ.

ಆದರೆ, ಯಾವುದೇ ಹೊಸ ವ್ಯವಸ್ಥೆ ರೂಪಿಸುವ ಮೊದಲು ವರ್ಷಗಳಿಂದ ಬಾಕಿ ಉಳಿದಿರುವ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ನಡೆಸಿ, ಬೆಂಗಳೂರಿಗೆ ಚುನಾಯಿತ ಆಡಳಿತ ನೀಡಬೇಕು ಎಂಬುದು ನಾಗರಿಕರ ಪ್ರಮುಖ ಬೇಡಿಕೆಯಾಗಿದೆ

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande